Advertisement

ಕೆಂಪು ಅಣಬೆಯ ನೆನಪು…ಪ್ರಕೃತಿ ಸೌಂದರ್ಯದ ಬೊಳ್ಳೆ ಜಲಪಾತದ ಪಯಣ

12:31 PM Nov 25, 2021 | Team Udayavani |

ಯಾವುದೋ ಅನಾಮಿಕ ಜಲಪಾತ ಒಂದರ ಬುಡದಲ್ಲಿ ನಿಂತು ನಾನಿದನ್ನು ನಿಮಗೆ ವಿವರಿಸುತ್ತಿದ್ದೇನೆ ಎಂದು ಊಹಿಸಿಕೊಳ್ಳಿ. ನೀವೂ ನನ್ನೊಟ್ಟಿಗೆ ಈ ಪಯಣದಲ್ಲಿ ಸಾತ್ ನೀಡಿದ್ದೀರಿ ಎಂದು ನಾನು ಊಹಿಸಿಕೊಳ್ಳುತ್ತೇನೆ.‌ ಆಗ ಈ ಬರಹ ನಿಮಗೆ ನಾನು ನಡೆದುಹೋದ ದಾರಿಯ ಪ್ರತಿಯೊಂದು ಚಿತ್ರಣವನ್ನು ಬಿಂಬಿಸುತ್ತಾ ಹೋಗುತ್ತದೆ.

Advertisement

ತೀರಾ ಕಡಿದಾದ ಮಣ್ಣು ರಸ್ತೆಯಲ್ಲಿ ನಾವು ಒಂದಷ್ಟು ಜನ ಸಾಹಸ ಮಾಡಿ ದ್ವಿಚಕ್ರ ವಾಹನದಲ್ಲಿ ಹೊರಟಿದ್ದೇವೆ. ದಾರಿಯ ಉದ್ದಕ್ಕೂ ಆಗಾಗ ಮಳೆ ಮತ್ತು ರಸ್ತೆಯ ಅಕ್ಕಪಕ್ಕದಲ್ಲಿ ರಬ್ಬರ್ ಮರಗಳೇ ಹಾಸಿಕೊಂಡಿವೆ. ಇಷ್ಟರ ನಡುವೆ ಕೆಲವರಿಗೆ ರೇನ್ ಕೋಟ್ ಇದೆ ಇನ್ನು ಕೆಲವರಿಗಿಲ್ಲ.  ರಸ್ತೆ ಕಳೆದು ಇನ್ನೇನು ಜಲಪಾತ ಬರುತ್ತದೆ ಎನ್ನುವಷ್ಟರಲ್ಲಿ ಆ ಜಲಪಾತಕ್ಕೆ ಹೋಗುವ ಮಾರ್ಗವನ್ನೇ ಬಂದ್ ಮಾಡಲಾಗಿದೆ ಎಂಬ ಸುದ್ದಿ ಸಿಕ್ಕಿತು. ಪ್ರವಾಸಿಗರಿಗೆ ಅಲ್ಲಿ ನಿಷೇಧವಿದೆ ಎಂದು ತಿಳಿದಾಗ ಕೊಂಚ ಬೇಸರವೆನಿಸಿದರೂ ಜೊತೆಯಲ್ಲಿ ಇದ್ದ ಘಟಾನುಘಟಿಗಳು ಯಾರದೋ ಪರವಾನಿಗೆ ಪಡೆದು ಅಂತು ಮುಂದೆ ಸಾಗಿದೆವು.

ತಲುಪುವ ಸ್ಥಳಕ್ಕಿಂತ ಹೊರಟಿದ್ದ ಹಾದಿಯ ಫಜೀತಿಯೇ ಬೇರೆ ಅನುಭವ ನೀಡುತ್ತಿದೆ. ಅಷ್ಟು ಕಲ್ಲು ಗುಡ್ಡೆಯಂತ ದಾರಿ, ಮೂಗಿನ ನೇರಕ್ಕೆ ಘಟ್ಟಗಳು, ಅಲ್ಲಲ್ಲಿ ಒಬ್ಬರೇ ದಾಟುವಷ್ಟು ಚಿಕ್ಕ ಸೇತುವೆ, ನೀರಿನ ಚಿಕ್ಕ ಚಿಕ್ಕ ಝರಿಗಳು, ಇಷ್ಟರ ನಡುವೆ ಅದ್ಭುತದಲ್ಲಿ ಅದ್ಬುತ ಅನುಭವ ನೀಡಿದ್ದು ಅಚ್ಚರಿಯ ಜೀವಿ ಇಂಬಳ ( ಜಿಗಣೆ, ಲೀಚ್ ) ರಕ್ತ ಬೀಜಾಸುರನ ವಂಶಸ್ಥರಾದ ಇವರು ಹಾದಿಯ ತುಂಬೆಲ್ಲ ಪೂರ್ಣ ಕುಂಭ ಸ್ವಾಗತಕ್ಕೆ ನಿಂತಹಾಗೆ ಕಾದುನಿಂತಿವೆ. ಬಿಸಿ ನೆತ್ತರದ ಹಸಿವಾಸನೆಗೆ ಕಚ್ಚಿದ ಜಾಗದಲ್ಲೇ ಮತ್ತೆ ಮತ್ತೆ ಕಚ್ಚುತ್ತಿವೆ. ದಾರಿಯೇ ಇಲ್ಲದ ಮಾರ್ಗದಲ್ಲಿ ಸೊಂಪಾಗಿ ಬೆಳೆದಿದ್ದ ಹಸಿರು ಸೊಪ್ಪಿನ ಗಿಡಗಳು, ಮೈತುಂಬಾ ಮುಳ್ಳು ತುಂಬಿರುವ ಬಿದಿರಿನ ಎಳೆಗಳು ಮೈಸೀಳುತ್ತಿವೆ. ನಾವು ತೊಟ್ಟ ಬಟ್ಟೆಗಳನ್ನು ಮುಳ್ಳಿನ ಹಾರ ಅಪ್ಪಿಕೊಂಡು ಅಲ್ಲಲ್ಲಿ ತೂತಾಗಿಸಿತ್ತು.

ಇವುಗಳ ಅಪ್ಪುಗೆಯನ್ನು ತಪ್ಪಿಸಿಕೊಂಡು ಮುಂದೆ ಸಾಗಿದ್ದೇವು.‌ ದೂರದಲ್ಲಿ ಒಂದು ಮನೆ ಕಾಣಿಸುತ್ತಿದೆ. ಮನೆ ಎದುರೆಲ್ಲಾ ಹಣ್ಣಡಿಕೆಗಳು ಹಾಸಿಕೊಂಡಿವೆ. ನೀರು ಬೇಕು ಎಂದು ಕೂಗಿದೆವು. ಒಳಗಿನಿಂದ ಒಬ್ಬ ಹೆಂಗಸು ಬಂದಳು. “ಏನು ಬಂದಿದ್ದು”? ಜಲಪಾತಕ್ಕಾ ಎಂದು ಕೇಳಿದಾಗ ಎಲ್ಲರೂ ಒಟ್ಟೊಟ್ಟಿಗೆ ಹೂಂ ಗುಟ್ಟೆವು. “ಹಾಗಾದರೆ ಈ ಕಲ್ಲುಪ್ಪಿನ ಕೋಲು ಹಿಡಿದುಕೊಳ್ಳಿ ದಾರಿಯಲ್ಲಿ ಉಪಯೋಗವಾಗುತ್ತದೆ” ಎಂದರು. ಅದನ್ನು ನಾನು ಮತ್ತು ನನ್ನ ಸ್ನೇಹತರಿಬ್ಬರು ಕೈಯಲ್ಲಿ ಹಿಡಿಕೊಂಡು ಮತ್ತೆ ನಡೆಯಲು ಪ್ರಾರಂಭಿಸಿದ್ದೇವೆ.

ಒಬ್ಬೊಬ್ಬರಿಗೆ ಸರಾಸರಿ ಐವತ್ತು ಇಂಬಳ ಹತ್ತಿ ರಕ್ತ ಹೀರಿದ್ದವು. ಮುಂದೆ ಸಾಗುವ ಹಾಗೂ ಇಲ್ಲ ಹಿಂದೆ ಬರುವ ಹಾಗೂ ಇಲ್ಲ ಅದು ಇಂದು ಅಮಾವಾಸ್ಯೆ ಮನೆಗೆ ತಲುಪುವುದು ಅನುಮಾನ ಎಂದು ಅಂದುಕೊಂಡಿದ್ದೇವು. ಹಿಂದಿರುಗಿ ಬರುವಾಗ  ದಾರಿ ತಪ್ಪುವುದಂತು ಖಚಿತಾಂತ ಗೊತ್ತಾಗಿದೆ. ದಾರಿಯಲ್ಲಿ ಸಿಕ್ಕ ಕೆಂಪು ಅಣಬೆಗಳನ್ನೇ ಗುರುತಾಗಿಸಿಕೊಳ್ಳೋಣ ನೆನಪಿಡಿ.‌ ಅಷ್ಟರಲ್ಲಿ ನೀರು ರಭಸವಾಗಿ ಬೀಳು ಸದ್ದು ಕೇಳುತ್ತಿದೆ. ನಿಮಗು ಕೇಳಿಸಿತಾ! ಹಾಗಾದರೆ ಏಕೆ ತಡ ಎಂದು ಕಾಲಿನ ವೇಗ ಹೆಚ್ಚಿಸಿ ಓಡಿ ಓಡಿ ಹೋಗುತ್ತಿದ್ದೇವೆ. ಆಹಾ ನೀರು ಕಂಡಿತು ಇದೇ ನಮ್ಮ ಜಲಪಾತ ಎಂದು ಖುಷಿಯಲ್ಲಿ ಹುಡುಗಿಯರೆಲ್ಲ ನೀರಿಗಿಳಿದೆವು. ಆದರೆ ರಾಮ, ಮತ್ತು ಹರಿ ಗೆ ಇನ್ನು ಚಂದದ ದೃಶ್ಯದ ಪೂರ್ವ ಕಲ್ಪನೆಯು ನೆನಪಾಗಿದೆ. ಇದಲ್ಲಾ ಬನ್ನಿ ಮುಂದೆ ಜಲಪಾತವಿದೆ ಎಂದಾಗ ಇಷ್ಟು ದೂರ ನಡೆದದ್ದೇ ಸಾಕು ಎಂಬ ಉದಾಸೀನ ನನಗೆ. ಆದರು ಅವರು ಹೇಳುವ ಮಾತು ಕೇಳಿ ಮತ್ತೆ ಎದ್ದು ಹೊರಟಿದ್ದೇವೆ.‌

Advertisement

ಏನೋ ಮಳೆ ಬಂದಂತ ಅನುಭವ ನೀರಿನ ತುಂತುರು ಮೈ ಸೋಕುತ್ತಿದೆ. ತಂಪು ತಂಪು ಗಾಳಿ ಅಲೆ ತಬ್ಬುತ್ತಿದೆ. ಕಣ್ ಅರಳಿಸಿ ಬೆರಗಿನಿಂದ ನೋಡುತ್ತಿದ್ದೇವೆ. ಎಷ್ಟೆತ್ತರ ನೋಡಿದರೂ ಬೀಳುವ ನೀರಿನ ಮೂಲ ಸ್ಥಾನ ಕಾಣುತ್ತಿಲ್ಲ. ಪೂರ್ತಿ ತಲೆ ಎತ್ತಿ ನೋಡಿದರೆ ಮೈಮೇಲೆ ನೀರು ಹಾರಿ ಬರುತ್ತಿದ್ದ ಅನುಭವವಾಗುತ್ತಿದೆ. ಕಲ್ಲು ಗೋಡೆಯ ಮಧ್ಯದಿಂದ ನೀರು ಮೆಟ್ಟಿಲಿಳಿಯುತ್ತಿದೆ. ಇಷ್ಟರ ‌ನಡುವೆ ನಾವೆಲ್ಲಾ ಒಮ್ಮೆ ಮೂಖರಾಗಿ ಪೃಕ್ರತಿ ಸೌಂದರ್ಯ ಸವಿದೆವು. ಮತ್ತದೇ ಕೆಂಪು ಅಣಬೆಗಳ ಜಾಡು ಹಿಡಿದು ನಮ್ಮ ಗೂಡು ಸೇರಿದೆವು…ಬೆಳ್ತಂಗಡಿಯ ಬೊಳ್ಳೆ ಜಲಪಾತದ ಪಯಣದ ಅನುಭವ…ಅಂದ ಹಾಗೆ ನೀವೇನಾದರೂ ಈ ಜಲಪಾತಕ್ಕೆ ಹೋಗುವ ಮನಸ್ಸು ಮಾಡಿದ್ರೆ..ಮೊದಲು ಪರವಾನಿಗೆ ಅಗತ್ಯ ಎಂಬುದನ್ನು ನೆನಪಿಟ್ಟುಕೊಳ್ಳಿ.

ಸುಮಾ.ಕಂಚೀಪಾಲ್

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next