Advertisement

ಬೆಳ್ತಂಗಡಿ: ಪುಟಾಣಿಗಳ ಮೇಲೆ ವೃಕ್ಷ ರಾಜನ ಕರಿನೆರಳು

03:24 PM May 22, 2024 | Team Udayavani |

ಬೆಳ್ತಂಗಡಿ: ಇನ್ನೇನು ಮಳೆಗಾಲ ಸಮೀಪಿಸುತ್ತಿದೆ. ಅ, ಆ, ಇ, ಈ ಕಲಿಕೆಗೆ ಪುಟಾಣಿ ಮಕ್ಕಳು ಅಂಗನವಾಡಿ ಕೇಂದ್ರದತ್ತ ಹೆಜ್ಜೆ ಇಡುವ ಸಮಯವೂ ಬಂದಿದೆ. ಆದರೆ ವರುಣ ಆರ್ಭಟಿಸಿದರೆ ಮಕ್ಕಳ ತಲೆ ಮೇಲಿರುವ ಸೂರು ಎಷ್ಟು ಸದೃಢ ಎಂಬುದರೆಡೆಗೆ ನಮ್ಮ ಕಾಳಜಿಯಾಗಿದೆ.

Advertisement

ಇಲಾಖೆ ಸುತ್ತೋಲೆಯಂತೆ 100ರಿಂದ 150 ಕುಟುಂಬಗಳಿದ್ದಲ್ಲಿ ಒಂದು ಅಂಗನವಾಡಿ ತೆರೆಯಲು ಅರ್ಹವಾಗಿದೆ. ತಾಲೂಕಿನ 81
ಗ್ರಾಮಗಳಿಗೆ ಸಂಬಂಧಿಸಿದಂತೆ 325 ಅಂಗನವಾಡಿ ಕೇಂದ್ರಗಳಿವೆ. ಅವುಗಳಲ್ಲಿ 6 ತಿಂಗಳಿಂದ 3 ವರ್ಷದವರೆಗೆ 7723
ಪುಟಾಣಿಗಳಿದ್ದರೆ, 3 ವರ್ಷದಿಂದ 6 ವರ್ಷದವರೆಗೆ 6682 ಪುಟಾಣಿಗಳ ದಾಖಲಾತಿಯಿದೆ. 325 ರಲ್ಲಿ 122 ಕಟ್ಟಡ ಇಂದಿಗೂ ಹಂಚಿನ ಮೇಲ್ಛಾವಣಿಯಾಗಿದ್ದು, 200 ಕೇಂದ್ರ ಆರ್‌ಸಿಸಿ ಕಟ್ಟಡ ಹೊಂದಿದೆ.

ಅಂಗನವಾಡಿ ದುರಸ್ತಿ
ದುರಸ್ತಿ ಅಗತ್ಯವಾಗಿದ್ದ ತಾಲೂಕಿನ 25 ಅಂಗನವಾಡಿಗಳಿಗೆ 2023-24ರ ಸಾಲಿನಲ್ಲಿ 22.49 ಲಕ್ಷ ರೂ. ಮೊತ್ತದ ಇಲಾಖೆ ಅನುದಾನದಲ್ಲಿ ದುರಸ್ತಿ ಕಾರ್ಯ ನಡೆಸಲಾಗಿದೆ. ಮಾತ್ರವಲ್ಲದೆ ಮಳೆಗಾಲ ಪೂರ್ವವಾಗಿ 2023-24ನೇ ಸಾಲಿನ ಮಳೆಹಾನಿ ಅನುದಾನದಡಿ ತಲಾ 2 ಲಕ್ಷ ರೂ. ನಂತೆ 37 ಅಂಗನವಾಡಿಗಳಿಗೆ 74 ಲಕ್ಷ ರೂ. ಮೊತ್ತದಲ್ಲಿ ಹೆಂಚು, ರಿಪೇರಿ, ಗೋಡೆ, ಪಕ್ಕಾಸು ಇತರ ಅಗತ್ಯ ನೆರವು ಒದಗಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯಾ
ಆಗ್ನೆಸ್‌ ತಿಳಿಸಿದ್ದಾರೆ.

ತಡೆಗೋಡೆ ಇಲ್ಲದ ಕಾಲು ಸಂಕ ದಾಟಿ ಬರುವ ಮಕ್ಕಳು ಮಳೆಗಾಲದಲ್ಲಿ ತೋಡು ದಾಟಿ ಬರುವ ಕೇಂದ್ರಗಳ ಪೈಕಿ ಬಂದಾರು ಗ್ರಾಮದ ಬುಳೇರಿ ಕೇಂದ್ರದ ಮೊಗ್ರು ಎಂಬಲ್ಲಿಂದ 5 ಮಕ್ಕಳು ಕಾಲು ಸಂಕ ದಾಟಿ ಬರುವವರಿದ್ದಾರೆ. ಇಲ್ಲಿ ಕಾಲು ಸಂಕಕ್ಕೆ ತಡೆಗೋಡೆಯಿಲ್ಲ. ಮಿತ್ತಬಾಗಿಲು ಗ್ರಾಮದ ಕುಕ್ಕಾವು ಬಳಿ 3 ಮಕ್ಕಳು, ದಿಡುಪೆ ಬಳಿ 5 ಮಕ್ಕಳು ಕಾಲುಸಂಕ ದಾಟಿ
ಬರುವವರಿದ್ದಾರೆ.

ಅಪಾಯದಲ್ಲಿರುವ ಕಟ್ಟಡಗಳು
ಬೆಳ್ತಂಗಡಿ ಶಿಶು ಅಭಿವೃದ್ಧಿ ಯೋಜನ ವ್ಯಾಪ್ತಿಯಲ್ಲಿ ತೀರಾ ಹಳೆಯದಾಗಿರುವ ಜತೆಗೆ ಮಳೆಗೆ ಬೀಳಬಹುದಾದ ಅಂಗನವಾಡಿ
ಕೇಂದ್ರಗಳಲ್ಲಿ ಬಂದಾರು ಗ್ರಾಮದ ಬುಳೇರಿ ಅಂಗನವಾಡಿ ಕೇಂದ್ರವಿದ್ದು, ಇಲ್ಲಿಗೆ ಬದಲಿ ವ್ಯವಸ್ಥೆಯಾಗಿ ಬುಳೇರಿ ಸರಕಾರಿ
ಪ್ರಾ.ಶಾಲೆ ಕೊಠಡಿ ಬಳಸಿಕೊಳ್ಳಲಾಗುತ್ತದೆ. ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಮೇಗಿನಮನೆ ಅಂಗನವಾಡಿ ಕಟ್ಟಡ ಹಳೆಯದಾಗಿದ್ದು ಬದಲಿಯಾಗಿ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದಲ್ಲಿ ಬದಲಿ ಕ್ರಮ ವಹಿಸಲಾಗಿದೆ. ಉಜಿರೆ ಗ್ರಾಮದ ಕಕ್ಕೆಜಾಲು ಅಂಗನವಾಡಿ ಅಪಾಯದಲ್ಲಿದ್ದು ಬದಲಿ ಬಾಡಿಗೆಗೆ ಕಟ್ಟಡ ಬೇಕಾಗಿದ್ದು ಸ್ಥಳೀಯವಾಗಿ ಖಾಸಗಿ ಕಟ್ಟಡವೂ ಲಭ್ಯವಿಲ್ಲದಂತಾಗಿದೆ.

Advertisement

ಕಜಕೆ ಪರಿಸರದಲ್ಲಿ ಆನೆ ಕಾಟ
ಮಲವಂತಿಗೆ ಗ್ರಾಮದ ಕಜಕೆ ಅಂಗನವಾಡಿಗೆ ಬರುವ ಮಕ್ಕಳಿಗೆ ಕಾಡಾನೆ ಭಯವಿದೆ. ಈ ಪ್ರದೇಶ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿದ್ದು, ಆಗಾಗ ಇಲ್ಲಿ ಕಾಡಾನೆ ಉಪಟಳವಿದೆ. ಹೀಗಾಗಿ ಪುಟಾಣಿಗಳ ಜತೆ ಪೋಷಕರಿದ್ದರೂ ಕಾಡಾನೆಗೆ ಭಯ ಪಟ್ಟೇ ಕೇಂದ್ರ  ಸೇರುವಂತಾಗಿದೆ.

*ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next