ಬೆಳ್ತಂಗಡಿ: ನೇತ್ರಾವತಿ ಮತ್ತು ಕುಮಾರಧಾರಾ ನದಿ ಸೇರುವ ಕಲ್ಮಂಜ ಗ್ರಾ.ಪಂ. ವ್ಯಾಪ್ತಿಯ ಪಜಿರಡ್ಕ ಶ್ರೀ ಸದಾ ಶಿವೇಶ್ವರ ದೇವಸ್ಥಾನದ ಸಹಿತ ಊರಿನ ಜನರ ಹಲವು ವರ್ಷದ ಬೇಡಿಕೆಯೊಂದು ಈಡೇರುತ್ತಿದೆ.
800 ವರ್ಷದಷ್ಟು ಪುರಾತನ ಐತಿಹ್ಯವುಳ್ಳ ದೇವಸ್ಥಾನವಿದ್ದರೂ ಪಜಿರಡ್ಕ ಕ್ಷೇತ್ರದ ಅಭಿವೃದ್ಧಿ ದೃಷ್ಟಿಕೋನದಲ್ಲಿ ಬಹಳಷ್ಟು ಹಿಂದುಳಿದೆ. ಇದು 1923ರಲ್ಲಿ ಹಾಗೂ 2019ರಲ್ಲಿ ಪ್ರವಾಹಕ್ಕೆ ತುತ್ತಾದ ಊರಾಗಿದೆ. ಹಲವು ವರ್ಷಗಳ ಹಿಂದಿನಿಂದಲೇ ಕಲ್ಮಂಜ ಪಜಿರಡ್ಕ ಮಂದಿ ಸೇತುವೆ, ರಸ್ತೆಯ ಬೇಡಿಕೆ ಇಟ್ಟಿದ್ದರು. ಇದೀಗ ಕಾಲ ಸನ್ನಿಹಿತವಾಗಿದೆ. 2019 ಜೂನ್ 11ರಂದು ಉದಯವಾಣಿ ಸುದಿನ ಇಲ್ಲಿನ ಸಮಸ್ಯೆ ಕುರಿತು ವರದಿ ಪ್ರಕಟಿಸಿತ್ತು.
ಸೇತುವೆ ಸಹಿತ ಕಿಂಡಿ ಅಣೆಕಟ್ಟು ಧರ್ಮಸ್ಥಳ ಹಾಗೂ ಕಲ್ಮಂಜದ ಮತ್ತೂಂದು ಭಾಗದಿಂದ ಪಜಿರಡ್ಕ ದೇವಸ್ಥಾನಕ್ಕೆ ತಲುಪಲು ಧರ್ಮಸ್ಥಳ ಇಲ್ಲವೇ ಉಜಿರೆಯಾಗಿ ಸುತ್ತಿಬಳಸಿ ಬರ ಬೇಕಿತ್ತು. ಈಗ ಪಜಿರಡ್ಕ ದೇವಸ್ಥಾನ ಸಮೀಪ ನೇತ್ರಾವತಿ ನದಿಗೆ 5 ಕೋ.ರೂ. ವೆಚ್ಚದಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಗೊಂಡಿದೆ. ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣದಿಂದ ನೀರಾವರಿ ಸಹಿತ ಸಂಪರ್ಕ ಯೋಗ್ಯ ಕಾಮಗಾರಿ ಆಗಿದೆ.
ಸಂಪರ್ಕ ರಸ್ತೆ ಕಾಮಗಾರಿ ಚುರುಕು ಪಜಿರಡ್ಕಕ್ಕೆ ನಿಡಿಗಲ್ ಸೇತುವೆ ಪಕ್ಕದ ರಸ್ತೆ ಹಾಗೂ ಉಜಿರೆಯ ನೀರಚಿಲುಮೆ ಕನ್ಯಾಡಿ ಮೂಲಕ ಎರಡು ಸಂಪರ್ಕ ರಸ್ತೆಗಳಿವೆ. ನಿಡಿಗಲ್‌ನಿಂದ ಬರುವ ರಸ್ತೆಗೆ ಕಳೆದ ವರ್ಷ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ 1.6 ಕಿ.ಮೀ. ವ್ಯಾಪ್ತಿಗೆ ಕಾಂಕ್ರೀಟ್ ಆಗಿತ್ತು. ನೀರಚಿಲುಮೆಯಿಂದ ಬರುವ ರಸ್ತೆಯಲ್ಲಿ 2 ಕಿ.ಮೀ. ರಸ್ತೆ ಡಾಮರು ಆಗಿತ್ತು. ಉಳಿದ ಸುಮಾರು 3.5ಕಿ.ಮೀ. ರಸ್ತೆ ತೀರಾ ಹದಗೆಟ್ಟು ಸಂಚಾರಕ್ಕೆ ಸಂಕಷ್ಟ ಎದುರಾಗಿತ್ತು.
Related Articles
ಶಾಸಕ ಹರೀಶ್ ಪೂಂಜ ಅವರ ಮುತುವರ್ಜಿಯಲ್ಲಿ 1.25 ಕೋಟಿ ರೂ. ವೆಚ್ಚದಲ್ಲಿ ಇದೀಗ ದೇವಸ್ಥಾನ ಸಂಪರ್ಕ ರಸ್ತೆಯ ಡಾಮರು ಕಾಮಗಾರಿ ಭರದಿಂದ ಸಾಗುತ್ತಿದೆ.
ಕಾಮಗಾರಿ ಪೂರ್ಣ
ಪಜಿರಡ್ಕ ದೇವಸ್ಥಾನ ಸಹಿತ ಇಲ್ಲಿನ ಜನರ ಬಹುವರ್ಷದ ಬೇಡಿಕೆಯಾಗಿ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಜ. 31ರಿಂದ ಫೆ. 6ರ ತನಕ ಪಜಿರಡ್ಕ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯಲಿರುವುದರಿಂದ ಬಹುಬೇಗನೆ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು.
-ಹರೀಶ್ ಪೂಂಜ, ಶಾಸಕರು
ಕ್ಷೇತ್ರಕ್ಕೆ ವಿಶೇಷ ಮಹತ್ವ
ಪಜಿರಡ್ಕ ದೇವಸ್ಥಾನ ಸಂಗಮ ಕ್ಷೇತ್ರವಾದ್ದರಿಂದ ಪಿಂಡಪ್ರದಾನಕ್ಕೆ ವಿಶೇಷ ಮಹತ್ವವಿದೆ. ಇಲ್ಲಿರುವ ಮೋಕ್ಷ ಪದವನ್ನು ಅಭಿವೃದ್ಧಿಗೊಳಿಸುವ ಯೋಜನೆ ರೂಪಿಸಲಾಗಿದೆ. ನದಿಗೆ ಇಳಿಯುವ ಪ್ರದೇಶದಲ್ಲಿ ಮೆಟ್ಟಿಲುಗಳನ್ನು ಕಟ್ಟುವ ಕುರಿತು ಯೋಚಿಸಲಾಗಿದೆ. ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ.
-ತುಕಾರಾಮ ಸಾಲ್ಯಾನ್, ಪಜಿರಡ್ಕ ದೇಗುಲ ವ್ಯವಸ್ಥಾಪನ ಸಮಿತಿ