Advertisement

ಬೆಳ್ತಂಗಡಿ: ಸರಕಾರಿ ಶಾಲೆಗೊಂದು ಆದಾಯ ಮೂಲದ ಅಡಿಕೆ ತೋಟ

01:26 PM Jan 12, 2023 | Team Udayavani |

ಬೆಳ್ತಂಗಡಿ: ಸರಕಾರಕ್ಕೆ ಸರಕಾರಿ ಶಾಲೆಗಳ ಉಪಚಾರ ಸಾಕಾಗಿದೆ. ಅಗತ್ಯ ಸಲಕರಣೆಗೂ ಅನುದಾನ ಸಿಗದ ಪರಿಸ್ಥಿತಿ ಸರಕಾರಿ ಶಾಲೆಗಳದ್ದು. ಕೆಲವೊಂದಕ್ಕೆ ಶಿಕ್ಷಕರೇ ತಮ್ಮ ವೇತನದಿಂದ ಭರಿಸಬೇಕಾದ ಸಂದಿಗ್ಧತೆಯೂ ಇದೆ. ಈ ಮಧ್ಯೆ ಸರಕಾರಿ ಶಾಲೆಗಳ ಮಕ್ಕಳ ಸಂಖ್ಯೆ ಹೆಚ್ಚಿಸಲು ನಾನಾ ಕಸರತ್ತು ನಡೆಸುವುದನ್ನು ಕಂಡು ಸರಕಾರಿ ಶಾಲೆಗಳ ಪೋಷಕರು ಬಸವಳಿದಿದ್ದಾರೆ.

Advertisement

ಸರಕಾರಿ ಶಾಲೆಗಳ ಅಭಿವೃದ್ಧಿ ದೂರದೃಷ್ಟಿಯಿಂದ ತಾವೇ ಆದಾಯ ಮೂಲವನ್ನು ಕಂಡುಕೊಳ್ಳುತ್ತಿರುವ ಹಲವು ಶಾಲೆಗಳ ಸಾಧನೆಗಳನ್ನು ಕಂಡಿದ್ದೇವೆ. ಅಂಥದ್ದರಲ್ಲಿ ತಾಲೂಕಿನ ಬಂದಾರು ಗ್ರಾಮದ ಬಂದಾರು ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ 4.98 ಎಕ್ರೆ ಭೂಮಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುವಾಯನಕೆರೆ ಸಹಯೋಗದೊಂದಿಗೆ ಸ್ವಲ್ಪ ಜಾಗದಲ್ಲಿ ಅಡಿಕೆ ತೋಟವನ್ನು ಬೆಳೆದಿದ್ದಾರೆ.

ಶಾಲೆಯ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಪೋಷಕರ ಸಂಘ ಮತ್ತು ಶಿಕ್ಷಕರ ಚಿಂತನೆಯಂತೆ ನೀರಿನ ಅಗತ್ಯದೊಂದಿಗೆ ಆರಂಭಗೊಂಡ ಚಿಂತನೆಗೆ ಶಾಸಕ ಹರೀಶ್‌ ಪೂಂಜ ಅವರಲ್ಲಿ ಕೇಳಿಕೊಂಡಾಗ ಬೋರ್‌ವೆಲ್‌ ವ್ಯವಸ್ಥೆ ಕಲ್ಪಿಸಿದ್ದರು. ಉತ್ತಮ ನೀರಿನ ಆಶ್ರಯ ಸಿಕ್ಕಿದ್ದರಿಂದ ಅಡಿಕೆ ಸಸಿ ನೆಡಲು ಯೋಜನೆ ರೂಪಿಸಲಾಯಿತು. ಇದಕ್ಕೆ ಧರ್ಮಸ್ಥಳದ ಸಿದ್ಧವನ ನರ್ಸರಿಯು ಸರಕಾರಿ ಶಾಲೆಗಾಗಿ ರಿಯಾಯಿತಿ ದರದಲ್ಲಿ ಅಡಿಕೆ ಸಸಿ ನೀಡಿದರು. ಅಡಿಕೆ ಗುಂಡಿ
ಮತ್ತು ಪೈಪ್‌ಲೈನ್‌ ಕೆಲಸಕ್ಕೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಸದಸ್ಯರು ಶ್ರಮದಾನ ಮಾಡಿದ್ದಾರೆ.

ಶ್ರಮದಾನದ ಮೂಲಕ ಕಾರ್ಯ ಒಟ್ಟು 4 ಲಕ್ಷ ರೂ. ವೆಚ್ಚದಲ್ಲಿ 2 ಎಕ್ರೆಯಲ್ಲಿ ಅಡಿಕೆ ಸಸಿ ನೆಡಲಾಗಿದೆ. ಅಡಿಕೆ ಗಿಡ ನಾಟಿ ಮತ್ತು ಸೊಪ್ಪಿನ ಕೆಲಸವನ್ನು ಕಣಿಯೂರು ವಲಯದ ಪ್ರಗತಿ ಬಂಧು ಒಕ್ಕೂಟ ಅಧ್ಯಕ್ಷರು, ಸದಸ್ಯರು ಶ್ರಮದಾನದ ಮೂಲಕ ನಡೆಸಿದ್ದಾರೆ.

ಪೀಠೋಪಕರಣ, ಕ್ರೀಡಾ ಸಾಮಗ್ರಿ ಬೇಕಿದೆ
ಗ್ರಾಮೀಣ ಭಾಗವಾದ ಬಂದಾರು ಗ್ರಾಮದಲ್ಲಿ 1954ರಲ್ಲಿ ಸ್ಥಾಪನೆಗೊಂಡ ಶಾಲೆಗೆ ಮುಂದಿನ ವರ್ಷಕ್ಕೆ 70 ವರ್ಷ ಪೂರೈಸಲಿದೆ. ಪ್ರಸಕ್ತ 1ರಿಂದ 8ನೇ ತರಗತಿವರೆಗಿದ್ದು ಒಟ್ಟು 196 ವಿದ್ಯಾರ್ಥಿಗಳಿದ್ದಾರೆ. 5 ಸರಕಾರಿ ಶಿಕ್ಷಕರು, 3 ಮಂದಿ ಅತಿಥಿ ಶಿಕ್ಷಕರು ಸೇರಿದಂತೆ ಎಸ್‌.ಡಿ.ಎಂ.ಸಿ.ಯಿಂದ ಓರ್ವ ಗೌರವ ಶಿಕ್ಷಕರನ್ನು ನೇಮಿಸಲಾಗಿದೆ. ಇಲ್ಲಿನ ಬಾಲಕಿಯರ ವಾಲಿಬಾಲ್‌ ತಂಡವು ಸತತ 7 ವರ್ಷಗಳಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ದಾಖಲೆಯಾಗಿದೆ. ಹಳೆ ಕಟ್ಟಡವಾದ್ದರಿಂದ ನೂತನ ಕಟ್ಟಡ ಸಹಿತ ಶಾಲೆಗೆ ಬೆಂಚ್‌, ಡೆಸ್ಕ್ ಹಾಗೂ ಕ್ರೀಡಾ ಸಾಮಗ್ರಿಯ ಅಗತ್ಯವನ್ನು ಹೊಂದಿದೆ.

Advertisement

ಸ್ಥಳೀಯರಿಂದಲೇ ನಿರ್ವಹಣೆ
ಅಡಿಕೆ ಸಸಿ ನೆಡುವುದಕ್ಕಿಂತಲೂ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿರುವುದರಿಂದ ಸ್ಥಳೀಯರಿಗೆ ಇದೇ ಸ್ಥಳದಲ್ಲಿ ಮೂರು ವರ್ಷದ ಅವಧಿಗೆ ತರಕಾರಿ ಬೆಳೆ ಬೆಳೆಯುವ ಅವಕಾಶ ಕಲ್ಪಿಸಲಾಗಿದೆ. ಅವರು ತರಕಾರಿ ಬೆಳೆಯೊಂದಿಗೆ ಸಸಿ ನಿರ್ವಹಣೆ ಮಾಡುತ್ತಾರೆ. ಶಾಲೆಯ ಅಭಿವೃದ್ಧಿ ನೆಲೆಯಲ್ಲಿ ಕೈಗೊಂಡ ಕಾರ್ಯಕ್ಕೆ ಎಲ್ಲರ ನೆರವು ಸಹಕಾರಿಯಾಗಿದೆ.
-ಉಮೇಶ್‌ ಮೊಯ್ಯೊಲೆ, ಎಸ್‌.ಡಿ.ಎಂ.ಸಿ. ಅಧ್ಯಕ್ಷರು

760 ಅಡಿಕೆ ಸಸಿ
ಎಸ್‌.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಶಾಲಾ ವಿದ್ಯಾರ್ಥಿಗಳ ಪೋಷಕರು, ದಾನಿಗಳು ಹಾಗೂ ಶಾಲೆಯ ವಿದ್ಯಾಭಿಮಾನಿಗಳ ಸಹಕಾರದಿಂದ ಒಟ್ಟು 4 ಲಕ್ಷ ರೂ. ವೆಚ್ಚದಲ್ಲಿ 2 ಎಕ್ರೆಯಲ್ಲಿ 760 ಅಡಿಕೆ ಸಸಿ ನೆಡಲಾಗಿದೆ.
-ಮಂಜ ನಾಯಕ್‌ ಸಿ.
ಮುಖ್ಯೋಪಾಧ್ಯಾಯರು

*ಚೈತ್ರೇಶ್‌ ಇಳಂತಿಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next