ಬೆಳ್ತಂಗಡಿ : ಹೊಟೇಲ್ ಕಾರ್ಮಿಕನೋರ್ವ ಅಡುಗೆ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ನಗರದ ಜ್ಯೂನಿಯರ್ ಕಾಲೇಜು ರಸ್ತೆಯಲ್ಲಿ ನಡೆದಿದೆ.
ಅಡುಗೆ ಕೆಲಸ ಮಾಡುವ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ನಿವಾಸಿ ಜನಾರ್ದನ್ ಶೆಟ್ಟಿಗಾರ್ (48) ಅಡುಗೆ ಕೋಣೆಯಲ್ಲಿ ಸಂಜೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಗನ್ನಾಥ್ ಹೊಟೇಲ್‌ನಲ್ಲಿ ರೂಂನಲ್ಲಿ ವಾಸವಾಗುತ್ತಿದ್ದು ಎರಡು ವಾರಕ್ಕೊಮ್ಮೆ ಮನೆಗೆ ಹೋಗಿ ಬರುತ್ತಿದ್ದರು. ರವಿವಾರ ಹೊಟೇಲ್‌ಗೆ ರಜೆ ಇದ್ದು ಅಲ್ಲಿಯೇ ಉಳಿದುಕೊಂಡಿದ್ದರು. ಸಂಜೆ ವೇಳೆ ಮಾಲೀಕರು ಜನಾರ್ದನ್ ಶೆಟ್ಟಿಗಾರ್‌ಗೆ ಕರೆ ಮಾಡಿ ಸೋಮವಾರಕ್ಕೆ ಬೇಕಾಗುವ ಅಡುಗೆ ಸಾಮಾನು ತಂದಿಡಲು ಹೇಳಿದ್ದರು. ಅದರಂತೆ ದಿನಸಿ ಸಾಮಾಗ್ರಿ ತಂದು ನಂತರ ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜನಾರ್ದನ್ ಅವರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.