Advertisement

ಬೆಳ್ತಂಗಡಿ : ವಿದ್ಯಾರ್ಥಿಗಳು, ರಿಕ್ಷಾ ಚಾಲಕರ ಹೊಡೆದಾಟ, ದೂರು

12:36 AM Jun 06, 2022 | Team Udayavani |

ಬೆಳ್ತಂಗಡಿ : ಉಜಿರೆಯಲ್ಲಿ ಆಟದ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿರುವ ಸಮಯ ಇಬ್ಬರು ರಿಕ್ಷಾ ಚಾಲಕರು ವಿದ್ಯಾರ್ಥಿಗಳಲ್ಲಿ ವಿಚಾರಿಸುತ್ತಾ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಆಟೋ ಚಾಲಕರೊಂದಿಗೆ ವಾಗ್ವಾದವಾಗಿದ್ದು, ಹಲ್ಲೆ ನಡೆದಿದೆ. ಎರಡೂ ಕಡೆಗಳಿಂದ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಘಟನೆಯಲ್ಲಿ ಆಟೋ ಚಾಲಕ ಕಲ್ಮಂಜ ಗ್ರಾಮದ ಮದಿಮಲಕಟ್ಟೆ ನಿವಾಸಿ ಪ್ರಜ್ವಲ್‌ ಕೆ.ವಿ. (28) ಗಾಯಗೊಂಡಿದ್ದಾರೆ. ಅವರು ನೀಡಿರುವ ದೂರಿನಂತೆ, ಉಜಿರೆ ಅಜಿತ್‌ ನಗರದ ಸಮೀಪ ತಂಡವೊಂದು ಪರಿಚಯದ ರಿಕ್ಷಾ ಚಾಲಕ ಜಗದೀಶ್‌ ಹಾಗೂ ವಿದ್ಯಾರ್ಥಿ ಶಾಂತಯ್ಯ ಅವರಿಗೆ ಹಲ್ಲೆ ನಡೆಸುತ್ತಿರುವುದನ್ನು ಮನಗಂಡು ವಿಚಾರಿಸಲು ಹೋದಾಗ ಅಲ್ಲಿದ್ದ ವಿದ್ಯಾರ್ಥಿಗಳಾದ ಶಶಾಂಕ, ಸುಜನ್‌, ಚಂದನ್‌, ಪ್ರಜ್ವಲ್‌ ಮತ್ತು ಇತರ ನಾಲ್ಕು ಮಂದಿ ಸೇರಿ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ಪ್ರಜ್ವಲ್‌ ಕೆ.ವಿ. ದೂರು ನೀಡಿದ್ದಾರೆ.

ಇದೇ ಘಟನೆಗೆ ಸಂಬಂಧಿಸಿ ವಿದ್ಯಾರ್ಥಿ ಬೆಂಗಳೂರಿನ ಬಾನಸವಾಡಿ ಮೂಲದ ಶಶಾಂಕ ಬಿ. ಶೆಟ್ಟಿ (21) ಪ್ರತಿದೂರು ನೀಡಿದ್ದು, ತಾವು ಕಾಲೇಜು ಕ್ರೀಡಾಂಗಣದಲ್ಲಿ ಆಟವಾಡಿ ಗೆಳೆಯರಾದ ಚಂದನ್‌, ಸುಜನ್‌, ಪ್ರಜ್ವಲ್‌ ಅವರೊಂದಿಗೆ ಸಾರ್ವಜನಿಕ ರಸ್ತೆಯಲ್ಲಿ ಹಿಂತಿರುಗುತ್ತಿದ್ದ ವೇಳೆ ಪ್ರಜ್ವಲ್‌ ಹಾಗೂ ಇತರ ಏಳರಿಂದ ಎಂಟು ಮಂದಿ ಕ್ರಿಕೆಟ್‌ ವಿಕೆಟ್‌ ಸಹಿತ ಇತರ ಸೊತ್ತುಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದಾರೆ. ಹಲ್ಲೆಯಲ್ಲಿ ಗಾಯಗೊಂಡವರು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಇತ್ತಂಡಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next