ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದಲ್ಲಿ ಅಪ್ರಾಪ್ತೆ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಸುಧೀರ್ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕಡಿರುದ್ಯಾವರ ಗ್ರಾಮದ ಕೊಪ್ಪದ ಗಂಡಿ ಸಮೀಪ ಬಾಲಕಿ ಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಗರ್ಭಪಾತ ಮಾಡಿಸಿದ ಪ್ರಕರಣದಲ್ಲಿ ಸುಧೀರ್ ಪ್ರಮುಖ ಆರೋಪಿಯಾಗಿದ್ದ. ಉಳಿದಂತೆ ಬಾಲಕಿಯ ಗರ್ಭಪಾತಕ್ಕೆ ಸಹಕರಿಸಿದ್ದ ಸುಧೀರ್ ಅವರ ತಮ್ಮ ಮನೋಹರ್ (23), ಸಂಬಂಧಿ ಮಾದವ (55) ಎಂಬಾತನನ್ನು ಈಗಾಗಲೆ ಬಂಧಿಸಲಾಗಿತ್ತು.
ಕೇಸು ದಾಖಲಾದ ಬಳಿಕ ಪ್ರಮುಖ ಆರೋಪಿ ಸುಧೀರ್ ತಲೆಮರೆಸಿಕೊಂಡಿದ್ದ. ಆರೋಪಿ ಸುಧೀರ್ ಬಂಧನಕ್ಕೆ ಒತ್ತಾಯಿಸಿ ಇತ್ತೀಚೆಗೆ ಬಿಲ್ಲವ ಸಂಘಟನೆಗಳಿಂದ ಪೊಲೀಸರಿಗೆ ಮನವಿ ಸಲ್ಲಿಸಲಾಗಿತ್ತು. ಸುಧೀರ್ ಚಿಕ್ಕಮಗಳೂರು ಸುತ್ತಮುತ್ತ ಕೆಲಸ ಮಾಡುತ್ತಿದ್ದ ಮಾಹಿತಿ ಪಡೆದ ಬೆಳ್ತಂಗಡಿ ವೃತ್ತನಿರೀಕ್ಷಕ ಶಿವಲುಮಾರ್ ಅವರ ತಂಡ ಜ.17 ರಂದು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಜ. 18 ರಂದು ನ್ಯಾಯಾಂಗ ಬಂಧನ ವಿಧಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯುವತಿ ಗರ್ಭಪಾತಕ್ಕೆ ಆರೋಪಿ ತಾಯಿ ಪಾರ್ವತಿ (60) ಸಹಕರಿಸಿದ್ದು, ಯುವತಿ ತಾಯಿ ಎಂದು ಆಸ್ಪತ್ರೆಯಲ್ಲಿ ಸುಳ್ಳು ಮಾಹಿತಿ ನೀಡಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.