ಬೆಳ್ತಂಗಡಿ: ಮಾಲಾಡಿ ಗ್ರಾಮದ ಬನಂತಾಡಿ ಸಮೀಪ ಆಟೋರಿಕ್ಷಾವೊಂದು ಸೇತುವೆಗೆ ಢಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾದಲ್ಲಿದ್ದ ಒಂದು ವರ್ಷದ ಮಗು ಸಾವನ್ನಪ್ಪಿದ ಘಟನೆ ಜ.30ರಂದು ನಡೆದಿದೆ.
ಕಾರ್ಕಳ ತಾಲೂಕಿನ ನಿಟ್ಟೆ ನಿವಾಸಿ ಸಂತೋಷ್ ಮತ್ತು ಗೀತಾ ದಂಪತಿಯ ಒಂದು ವರ್ಷ ಎರಡು ತಿಂಗಳ ಗಂಡು ಮಗು ಸಾವನ್ನಪ್ಪಿದ್ದು ರಿಕ್ಷಾಲ್ಲಿದ್ದ ಇತರರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಗೀತಾ ಅವರು ಮಗುವಿನೊಂದಿಗೆ ಪಡಂಗಡಿಯಲ್ಲಿರುವ ತಾಯಿ ಮನೆಗೆ ಬಂದು ಅಲ್ಲಿಂದ ಗೀತಾ ಅವರ ತಂಗಿ ಮನೆಯಾದ ಶಂಬೂರು ಎಂಬಲ್ಲಿಗೆ ಹೋಗಿ ವಾಪಸ್ ತಾಯಿ ರತ್ನಾ ಅವರೊಂದಿಗೆ ಆಟೋದಲ್ಲಿ ಹಿಂದಿರುಗುತ್ತಿದ್ದರು. ಈ ವೇಳೆ ಆಟೋ ಸೇತುವೆಗೆ ಢಿಕ್ಕಿ ಹೊಡೆದಿದೆ. ಈ ವೇಳೆ ಮಗು ಅತರ್ವ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು ಮಗುವನ್ನು ಪೂಂಜಾಲಕಟ್ಟೆ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೆ ಸಂಜೆ ಮಗು ಸಾವನ್ನಪ್ಪಿದೆ.
ಅಪಘಾತದಿಂದ ಗೀತಾ ಹಾಗೂ ತಾಯಿ ರತ್ನಾ ಹಾಗೂ ಆಟೋ ಚಾಲಕ ದಯಾನಂದ ಅವರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಆಟೋ ಚಾಲಕ ದಯಾನಂದ ಅವರ ನಿರ್ಲಕ್ಷ್ಯತನದ ಚಾಲನೆಯಿಂದ ಮಗು ಸಾವಿಗೆ ಕಾರಣವಾಗಿರುವ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.