Advertisement

Belman: ಬಸ್‌ ನಿಲ್ದಾಣದ ಮುಂದೆ ಅನಧಿಕೃತ ಗೂಡಂಗಡಿಗಳು

02:49 PM Sep 13, 2024 | Team Udayavani |

ಬೆಳ್ಮಣ್‌: ಕಳೆದ ಹನ್ನೊಂದು ವರ್ಷಗಳ ಹಿಂದೆ ಕಾರ್ಕಳ -ಪಡುಬಿದ್ರಿ ಹೆದ್ದಾರಿ ವಿಸ್ತರಣೆಗೊಂಡು ಸುಂದರವಾದಾಗ ಕೆಶಿಪ್‌ನ ಮೂಲಕ ನಿರ್ಮಾಣಗೊಂಡ ಬಹುತೇಕ ಬಸ್ಸು ತಂಗುದಾಣಗಳು ನಿರ್ವಹಣೆಯ ಕೊರತೆ ಎದುರಿಸುತ್ತಿದ್ದು ಕೆಲವಂತೂ ನಿರುಪಯುಕ್ತವಾಗಿದೆ. ಅವುಗಳ ಪೈಕಿ ಬೆಳ್ಮಣ್‌ ಗ್ರಾಮ ಪಂಚಾಯತ್‌ ವ್ಯಾಪ್ತಿಯ 7 ಬಸ್‌ ತಂಗುದಾಣ ಗಳಲ್ಲಿಯೂ ಕೆಲವೊಂದು ನಿರುಪಯುಕ್ತವಾಗಿವೆ.

Advertisement

ಬೆಳ್ಮಣ್‌ನ ನೀಚಾಲು, ಪೆರಲ್ಪಾದೆ, ಚರ್ಚ್‌ ಎದುರು, ಮಾರುಕಟ್ಟೆ ಬಳಿ, ನಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ, ನಂದಳಿಕೆ, ಲಕ್ಷ್ಮೀಜನಾರ್ದನ ದೇಗುಲ ಬಳಿ ಇರುವ ಬಸ್‌ ನಿಲ್ದಾಣಗಳ ಗಿಡಗಂಟಿಗಳಿಂದ ಕೂಡಿದ್ದು ಸುಣ್ಣ ಬಣ್ಣ ಕಾಣದೆ ಹಲವು ವರ್ಷಗಳೇ ಸಂದಿವೆ.
ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ

ಈ ಬಸ್‌ ತಂಗುದಾಣಗಳನ್ನು ಕೆಡಿಆರ್‌ಎಲ್‌ನವರು ನಿರ್ಮಿಸಿದ್ದು ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಈ ಕಾರಣ ಗಳಿಂದಾಗಿ ಲೋಕೋಪಯೋಗಿ ಇಲಾಖೆ ಸಂಬಂಧಪಟ್ಟ ಗ್ರಾಮ ಪಂಚಾಯತ್‌ಗಳ ಮೂಲಕ ನಿರ್ವಹಣೆ ನಡೆಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮುಚ್ಚಿ ಹೋದ ಬೆಳ್ಮಣ್‌ ಪೇಟೆಯ ಬಸ್‌ ತಂಗುದಾಣ
ಈ ಬಸ್ಸು ನಿಲ್ದಾಣಗಳ ಪೈಕಿ ಬೆಳ್ಮಣ್‌ ಮಾರುಕಟ್ಟೆಯ ಪಕ್ಕದ ತಂಗುದಾಣ ಗಿಡ ಮರಗಳಿಂದ ಆವರಿಸಿದ್ದು ಮಾತ್ರವಲ್ಲದೆ ಈ ಬಸ್‌ ತಂಗುದಾಣದ ಮುಂದುಗಡೆ ಎರಡು ಅಂಗಡಿಗಳು ವ್ಯವಹರಿಸುತ್ತಿವೆ. ಮೂಲ ಬಸ್‌ ನಿಲ್ದಾಣಕ್ಕಿಂತ ಸ್ವಲ್ಪ ದೂರದಲ್ಲಿದ್ದು ಬಸ್‌ಗಳು ನಿಲ್ಲದ ಕಾರಣ ಈ ಬಸ್‌ ತಂಗುದಾಣ ಅನಾಥವಾಗಿದೆ.

ಪ್ರತಿಭಟನೆ
ಇತ್ತೀಚೆಗೆ ಬೆಳ್ಮಣ್‌ ಗ್ರಾಮ ಪಂಚಾಯತ್‌ ಎಕ್ಸ್‌ಪ್ರೆಸ್‌ ಸಹಿತ ಇತರ ಬಸ್‌ಗಳ ನಿಲುಗಡೆಗೆ ಸೂಕ್ತ ತಂಗು ದಾಣದ ರಚನೆಗೆ ಮುಂದಾಗಿದ್ದು ಈ ಬಗ್ಗೆ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು. ಆದರೆ ಈಗಾಗಲೇ ನಿರ್ಮಾಣಗೊಂಡಿರುವ ಕೆಶಿಪ್‌ನ ಹೆದ್ದಾರಿ ಬಸ್‌ ತಂಗುದಾಣ ವನ್ನು ಬಳಸಿಕೊಂಡರೆ ಹೆದ್ದಾರಿ ಬಸ್‌ತಂಗುದಾಣ ಕಾರ್ಯನಿರ್ವಹಿಸಲು ಸಾಧ್ಯ ಎನ್ನುವ ಮಾತು ಕೇಳಿ ಬರುತ್ತಿದೆ.

Advertisement

ನಿರ್ವಹಣೆ ಹೊಣೆ ಖಾಸಗಿಗೆ ನೀಡಲಿ
ಈ ಬಸ್‌ ನಿಲ್ದಾಣಗಳ ನಿರ್ವಹಣೆಯನ್ನು ಖಾಸಗಿಯವರಿಗೆ ಅಥವಾ ಸೇವಾ ಸಂಸ್ಥೆಗಳಿಗೆ ನೀಡಿದರೆ ದಾನಿಗಳ ಮೂಲಕ ಸುಣ್ಣ ಬಣ್ಣ ಬಳಿದು ಸಮರ್ಪಕವಾಗಿ ಉಪಯೋಗಿಸಬಹುದಾಗಿದೆ. ಈ ರೀತಿ ಅಸಮರ್ಪಕ ನಿರ್ವಹಣೆಯಿಂದ ಪ್ರಯಾಣಿಕರು ಸೂಕ್ತ ಸೂರಿಲ್ಲದೆ ಪರದಾಡುವಂತಾಗಿದೆ.-ಕ್ಸೇವಿಯರ್‌ ಡಿಮೆಲ್ಲೋ, ಸ್ಥಳೀಯರು

ಪರಾಮರ್ಶಿಸದೆ ನಿರ್ಮಾಣ
ಹೆದ್ದಾರಿ ಬದಿ ಅವೈಜ್ಞಾನಿಕವಾಗಿ ಬಸ್‌ ತಂಗುದಾಣಗಳ ಆವಶ್ಯಕತೆಯ ಬಗ್ಗೆ ಪರಾಮರ್ಶಿಸದೆ ನಿರ್ಮಾಣ ನಡೆಸಿದ್ದೇ ತಪ್ಪು, ಇದೀಗ ನಿರ್ವಹಣೆ ನಡೆಸದ್ದು ಇನ್ನೂ ದೊಡ್ಡ ತಪ್ಪು. -ರವಿ ಬೆಳ್ಮಣ್‌, ಪ್ರಯಾಣಿಕ

-ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.