Advertisement

ಬೆಳ್ಮಣ್‌: ರಸ್ತೆ ವಿಸ್ತರಣೆಗೆ ಶತಮಾನ ಕಂಡ ಮರಗಳಿಗೆ ಕೊಡಲಿ

10:56 PM Jan 25, 2021 | Team Udayavani |

ಬೆಳ್ಮಣ್‌:   ರಸ್ತೆ  ವಿಸ್ತರಣೆಯ ಜತೆ ಅಭಿವೃದ್ಧಿಗಾಗಿ  ರಸ್ತೆಯ ಇಕ್ಕೆಲಗಳಲ್ಲಿದ್ದ ಶತಮಾನ ಕಂಡ ನೂರಾರು ಮರಗಳನ್ನು ಹನನ ಮಾಡಲಾಗಿವೆ.ಕಾರ್ಕಳ ತಾಲೂಕಿನ ಬೆಳ್ಮಣ್‌ ಪೇಟೆಯಿಂದ ಜಂತ್ರ ಸಾಗುವವರೆಗೆ ಅಂಕು ಡೊಂಕಾಗಿದ್ದ ರಸ್ತೆಯ ವಿಸ್ತರಣೆ ಕಾಮಗಾರಿ ಬಿರುಸಿನಿಂದ ನಡೆಯುತ್ತಿದ್ದು ರಸ್ತೆಯ ಪಕ್ಕದಲ್ಲಿ ನೂರಾರು ವರ್ಷಗಳಿಂದ ಬೆಳೆದು ನಿಂತಿದ್ದ  ಬೃಹತ್‌ ಮರಗಳನ್ನು ಕಡಿದು ರಸ್ತೆಯನ್ನು  ಅಭಿವೃದ್ಧಿಪಡಿಸ ಲಾಗುತ್ತಿದೆ. ಗ್ರಾಮೀಣ ಭಾಗದ ರಸ್ತೆಗಳು ಅಭಿವೃದ್ಧಿಯಾಗುತ್ತಿರುವುದು ಒಂದೆಡೆ ಖುಷಿಯಾಗುತ್ತಿದ್ದರೆ ಇನ್ನೊಂದೆಡೆ ಅಭಿವೃದ್ಧಿಯ ನೆಪದಲ್ಲಿ ನೂರಾರು  ವರ್ಷಗಳಿಂದ ಬೆಳೆದು ನಿಂತ ಬೃಹತ್‌ ಮರಗಳು ಧರೆಗುರುಳುತ್ತಿರುವುದು ವಿಷಾದನೀಯ ಎಂದು ಈ ಭಾಗದ ಪರಿಸರ ಪ್ರೇಮಿಗಳು ಅಳಲು ತೋಡಿಕೊಂಡಿದ್ದಾರೆ.

Advertisement

ಇಲಾಖೆಯ ಮೂಲಕವೇ ಮರಗಳು ಧರಾಶಾಹಿ :

ಬೆಳ್ಮಣ್‌ನಿಂದ ಶಿರ್ವ ಸಾಗುವ ಈ ರಸ್ತೆಯ ಅಭಿವೃದ್ಧಿಗಾಗಿ ಈಗಾಗಲೇ ಇಲಾಖಾ ಅನುಮತಿಯಂತೆ ಸುಮಾರು ಅರ್ಧ ಕಿ.ಮೀ. ಅಂತರದಲ್ಲೇ 42 ಮರ ಗಳನ್ನು ಕಡಿಯಲಾಗಿದ್ದು ಅರಣ್ಯ ಇಲಾಖೆಯ ಅನುಮತಿಯಂತೆ ಮರವನ್ನು  ಸರಕಾರಿ ಡಿಪೋಗೆ ಸಾಗಿಸಲಾಗಿದೆ. ಇನ್ನು ನೂರಾರು ವರ್ಷಗಳಿಂದ ದಟ್ಟವಾಗಿ ಬೆಳೆದು ನಿಂತಿದ್ದ ಆಲದ ಮರಗಳು ಧರೆಗುರುಳಿದ್ದು ಹಚ್ಚ  ಹಸುರಿನಿಂದ ಕೂಡಿದ ರಸ್ತೆಯ ಇಕ್ಕೆಲಗಳು ಶ್ಮಶಾನ ಸದೃಶವಾಗಿದೆ.

ಅಪಘಾತ ವಲಯ :

ಬೆಳ್ಮಣ್‌ನಿಂದ ಜಂತ್ರದವರೆಗೆ ರಸ್ತೆಯು ತಿರುವು ಮುರುವಿನಿಂದ ಕೂಡಿದ್ದು ಕಳೆದ ಹಲವು ವರ್ಷಗಳಿಂದ ಈ ರಸ್ತೆಯಲ್ಲಿ ನಿರಂತರವಾಗಿ ಅಪಘಾತಗಳು  ಸಂಭವಿಸುತ್ತಿವೆ.  ಕಳೆದ ಬಾರಿ ಬೈಕ್‌ ಸವಾರನೊಬ್ಬ ಬಸ್ಸಿನಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟರೆ, ಬಸ್ಸು ಟಿಪ್ಪರ್‌ ನಡುವೆ ಢಿಕ್ಕಿ ಸಂಭವಿಸಿ ಯುವತಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿದ್ದಳು. ಈ ಕಾರಣಕ್ಕಾಗಿಯೂ  ಈ ರಸ್ತೆಯ ವಿಸ್ತರಣೆ ಕಾಮಗಾರಿ ನಡೆಯಬೇಕೆಂಬ ಬಹು ಜನರ ಬೇಡಿಕೆಯಂತೆ ಬೆಳ್ಮಣ್‌ನಿಂದ ಇದೀಗ ಜಂತ್ರದವರೆಗೆ ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ.

Advertisement

ರಸ್ತೆ ಅಭಿವೃದ್ಧಿಯಾಗಬೇಕಾದುದು ಎಲ್ಲರಿಗೂ ಅಗತ್ಯ. ಆದರೆ ಸಾಲು ಸಾಲು ಮರಗಳು ಧರಾಶಾಹಿಯಾಗಿರುವುದು ಮಾತ್ರ ದುರದೃಷ್ಟಕರ,    ರಸ್ತೆ ಅಭಿವೃದ್ಧಿ ಯಾದ ಬಳಿಕ ಮತ್ತೆ ರಸ್ತೆಯ ಇಕ್ಕೆಲಗಳಲ್ಲಿ ನೆರಳು ನೀಡಲು ಗಿಡಗಳನ್ನು ಬೆಳೆಸುವತ್ತ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎನ್ನುವುದೇ ಪ್ರಕೃತಿ ಪ್ರಿಯರ ಆಶಯ.

ಅರಣ್ಯ ಇಲಾಖೆಯ ಅನುಮತಿಯಂತೆ ಸುಮಾರು 42 ಮರಗಳಿಗೆ ಕಡಿಯಲು ಪರವಾನಿಗೆ ಆಗಿದ್ದು ರಸ್ತೆಯ ಅಭಿವೃದ್ಧಿಗಾಗಿ ಮರಗಳನ್ನು ಕಡಿದು ಡಿಪೋಗೆ ಸಾಗಿಸಲಾಗಿದೆ. ಮುಂದೆ ರಸ್ತೆ ವಿಸ್ತರಣೆಗೊಂಡ ಬಳಿಕ ಮತ್ತೆ ಗಿಡಗಳನ್ನು ಬೆಳೆಸುವ ಕ್ರಮ ಕೈಗೊಳ್ಳುತ್ತೇವೆ.-ಪ್ರಕಾಶ್ಚಂದ್ರ ಬೆಳ್ಮಣ್‌,ಉಪ ವಲಯ ಅರಣ್ಯಾಧಿಕಾರಿ

ರಸ್ತೆಯ ವಿಸ್ತರಣೆ ಸಮಾಧಾನದ ಸಂಗತಿ,  ಆದರೆ ರಸ್ತೆಯ ಇಕ್ಕೆಲಗಳ ಶತಮಾನ ಕಂಡ  ಮರಗಳಿಗೆ ಕೊಡಲಿಯೇಟು ಸಲ್ಲದು. -ರೋಷನ್‌ ಜಂತ್ರ, ನಾಗರಿಕ

 

-ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next