ಇಸ್ಲಾಮಾಬಾದ್:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಭಾರತ ರದ್ದುಗೊಳಿಸಿದ ನಂತರ ಪಾಕಿಸ್ತಾನ ಸಾಕಷ್ಟು ಕಸರತ್ತು ನಡೆಸಿಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸಿದ್ದು ತಿಳಿದಿದೆ. ಇದೀಗ ಆರ್ಥಿಕವಾಗಿ ದಿವಾಳಿ ಅಂಚಿನಲ್ಲಿರುವ ಪಾಕಿಸ್ತಾನ ಹೂಡಿಕೆದಾರರ ಸಮಾವೇಶದಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಬೆಲ್ಲಿ ಡ್ಯಾನ್ಸರ್ ಕಾರ್ಯಕ್ರಮ ಆಯೋಜಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಕಟು ಟೀಕಾಪ್ರಹಾರ ನಡೆಸಿ ವ್ಯಂಗ್ಯವಾಡಿದ್ದಾರೆ.
ಸೆಪ್ಟೆಂಬರ್ 4ರಿಂದ 8ರವರೆಗೆ ಖೈಬರ್ ಪಖ್ತುನ್ ಖಾವಾ ಇನ್ವೆಸ್ಟ್ ಮೆಂಟ್ ಓಪಾರ್ಚುನಿಟೀಸ್ ಕಾನ್ಫರೆನ್ಸ್ ನ ಹೆಸರಿನಲ್ಲಿ ಹೂಡಿಕೆದಾರರ ಸಮಾವೇಶವನ್ನು ಪಾಕಿಸ್ತಾನ ಅಝೇಬಾಯಿಜಾನ್ ನಲ್ಲಿ ಆಯೋಜಿಸಿತ್ತು.
ಈ ಸಂದರ್ಭದಲ್ಲಿ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಮಾವೇಶದ ಕಾರ್ಯಕ್ರಮದಲ್ಲಿ ಬಾಕು ಮತ್ತು ಬೆಲ್ಲಿ ಡ್ಯಾನ್ಸರ್ಸ್ ಗಳ ಭರ್ಜರಿ ಪ್ರದರ್ಶನ ಆಯೋಜಸಿದ್ದು, ಇದರ ವಿಡಿಯೋ ತುಣಕನ್ನು ಪಾಕಿಸ್ತಾನದ ಪತ್ರಕರ್ತೆ ಗುಲ್ ಭಾಖ್ರಿ ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಪಾಕಿಸ್ತಾನದ ಜನರಲ್ ಚೀಫ್ ಆರ್ಥಿಕ ತಜ್ಞರು ಯಾವಾಗ ಪಾಕಿಸ್ತಾನದ ಅಝೇರ್ ಬಾಯಿಜಾನ್ ನಲ್ಲಿ ಬೆಲ್ಲಿ ಡ್ಯಾನ್ಸರ್ಸ್ ಗಳ ಪ್ರದರ್ಶನದ ಮೂಲಕ ಹೂಡಿಕೆದಾರರನ್ನು ಸೆಳೆಯಲು ಯತ್ನಿಸಿದ್ದು? ಎಂಬ ಕ್ಯಾಪ್ಶನ್ ಕೊಟ್ಟು ಗುಲ್ ವಿಡಿಯೋ ಪೋಸ್ಟ್ ಮಾಡಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ನೂತನ ಪಾಕಿಸ್ತಾನ ಕಂಡುಕೊಂಡ ಮಾರ್ಗ ಎಂಬುದಾಗಿ ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.
ಹೂಡಿಕೆದಾರರ ಸೆಳೆಯೋ ಪಾಕಿಸ್ತಾನದ ಹೊಸ ಮಾರ್ಗ. ತಲೆಕೂದಲು, ಮಂಗ, ನಾಯಿ, ಹಂದಿಗಳ ಮಾರಾಟಕ್ಕಾಗಿ ಸಮಾವೇಶದಲ್ಲಿ ಬೆಲ್ಲಿ ಡ್ಯಾನ್ಸ್ ಆಯೋಜಿಸಿದೆ ಎಂದು ಟೀಕಿಸಿರುವ ಟ್ವೀಟಿಗರೊಬ್ಬರು, ಪಾಕಿಸ್ತಾನದ ಆರ್ಥಿಕ ಅಭಿವೃದ್ಧಿ ಕುರಿತ ಆಲೋಚನಾ ಕ್ರಮ ಸಂಪೂರ್ಣವಾಗಿ ದಿಕ್ಕೆಟ್ಟು ಹೋಗಿದೆ ಎಂದು ತಿಳಿಸಿದ್ದಾರೆ.