ಮೊದಲೆಲ್ಲಾ ಪಾದರಕ್ಷೆಗಳು ಕೇವಲ ಕವಚಗಳಂತೆ ಪಾದಗಳನ್ನು ರಕ್ಷಿಸುತ್ತಿದ್ದವು. ಆದರೆ ದಿನಕಳೆದಂತೆ ಪಾದರಕ್ಷೆಗಳ ವಿನ್ಯಾಸ ಬದಲಾಗತೊಡಗಿತು. ಮುಂಚೆ ಚರ್ಮದಿಂದ ತಯಾರಿಸಿದ ಚಪ್ಪಲಿಗಳಷ್ಟೇ ಮಾರುಕಟ್ಟೆಯಲ್ಲಿದ್ದವು. ಈಗ ವಿವಿಧ ಬಗೆಯ ಚಪ್ಪಲಿಗಳು ಹಾಗೂ ಶೂಗಳು ಲಭ್ಯ.
ಫ್ಯಾಷನ್ ಲೋಕ ಬೆಳೆದಂತೆ ಮಹಿಳೆಯರ ಅಭಿರುಚಿಯಲ್ಲೂ ಬದಲಾವಣೆಗಳಾದವು. ತಾವು ಧರಿಸುವ ಧಿರಿಸಿಗೆ ತಕ್ಕಂತೆ ತಮ್ಮ ಪಾದರಕ್ಷೆ ಗಳು ಇರಬೇಕು ಎಂಬ ಅಭಿಪ್ರಾಯ ಸಾಮಾನ್ಯವಾಯಿತು. ಇದಕ್ಕೆ ತಕ್ಕಂತೆಯೇ ಆವಿಷ್ಕಾರಗಳು ನಡೆದವು. ಆಗ ಮಾರುಕಟ್ಟೆಗೆ ಬಂದದ್ದೇ ಬೆಲ್ಲಿ ಶೂ.
ಶೂಗಳ ಪರಿಚಯ ಫ್ಯಾಷನ್ ಜಗತ್ತಿಗೆ ಈ ಮೊದಲೇ ಇದ್ದರೂ ಸಹ, ಅವೀಗ ಫ್ಯಾಷನ್ ಜಗತ್ತಿನ ಪ್ರಭಾವದಿಂದ ಕೊಂಚ ಬದಲಾವಣೆಗೊಂಡು ಬೆಲ್ಲಿಸ್‌ಗಳ ರೂಪದಲ್ಲಿ ಹೆಂಗಳೆಯರನ್ನು ಆಕರ್ಷಿಸುವಲ್ಲಿ ಸಫಲವಾಗಿವೆ. ಈ ಬೆಲ್ಲಿಸ್‌ಗಳು ಪಾದಗಳನ್ನು ಭಾಗಶ: ಮಾತ್ರ ಕವರ್ ಮಾಡಿದರೂ ಕಾಲುಗಳಿಗೆ ವಿಶೇಷ ಮೆರುಗು ನೀಡುತ್ತದೆ.
ಬೆಲ್ಲಿ ಶೂಗಳು ಪಾಯಿಂಟೆಡ್‌ಗಳಲ್ಲಷ್ಟೇ ಅಲ್ಲದೇ ಫ್ಲಾಟ್‌ಗಳಲ್ಲೂ ದೊರೆಯುತ್ತವೆ. ನಮ್ಮ ಎತ್ತರಕ್ಕೆ ಹೊಂದುವಂತೆ ಶೂಗಳನ್ನು ಕೊಳ್ಳಬಹುದು. ರಬ್ಬರ್, ಲೇಸ್, ಕ್ಯಾನ್‌ವಾಸ್, ಜೀನ್ಸ್ ಇನ್ನು ಹಲವು ಬಗೆಯ ಬೆಲ್ಲಿ ಶೂಗಳು ಸಿಗುತ್ತವೆ. ಇವುಗಳು ಜೀನ್ಸ್, ಸೀರೆ, ಸೆಲ್ವಾರ್ ಕಮೀಜ್ ಅಲ್ಲದೇ ವಿವಿಧವಾದ ಉಡುಗೆಗಳೊಂದಿಗೆ ಒಪ್ಪುತ್ತವೆ.
ದಿನ ನಿತ್ಯದ ಬಳಕೆಗೆ ಹೇಳಿ ಮಾಡಿಸಿದಂತಿರುವ ಬೆಲ್ಲಿ ಶೂಗಳು ಅಫೀಷಿಯಲ… ಲುಕ್‌ಗೂ ಸೈ ಎನಿಸಿವೆ. ಸೀರೆ, ಜೀನ್ಸ್, ಸೆಲ್ವಾರ್ ಕಮೀಜ್‌ನೊಂದಿಗೆ ಧರಿಸಬಹುದಾದ ಈ ಶೂಗಳ ಬೆಲೆ ನೂರೈವತ್ತು ರೂಪಾಯಿಂದ, ಎರಡು ಸಾವಿರ ರೂಪಾಯಿವರೆಗೂ ಇದೆ.
– ರಕ್ಷಾ. ಎಸ್.ದೇಶಪಾಂಡೆ