ಬಳ್ಳಾರಿ: ಕೋವಿಡ್ ವೈರಸ್ ನಿಯಂತ್ರಿಸುವ ಸಲುವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈಗಾಗಲೇ ಕಿರುಚಿತ್ರ ನಿರ್ಮಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಜಿಲ್ಲಾ ಪೊಲೀಸ್ ಇಲಾಖೆ ಇದೀಗ ಮತ್ತೊಂದು ಪ್ರಯೋಗಕ್ಕೆ ಮುಂದಾಗಿದೆ.
ಹಗಲುವೇಷದ ಮಾದರಿಯಲ್ಲಿ ಕೋವಿಡ್ ವೇಷ ಧರಿಸಿದವರು ಜನರಲ್ಲಿ ಭಯ ಬೀಳಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಕೋವಿಡ್ ವೈರಸ್ ನಿಯಂತ್ರಣಕ್ಕೆ ಜನರು ಅನಾವಶ್ಯಕವಾಗಿ ಹೊರಗಡೆ ತಿರುಗಾಡದೆ ಮನೆಗಳಲ್ಲೇ ಇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಪ್ರಮುಖ ಅಸ್ತ್ರವಾಗಿದೆ. ಅದಕ್ಕಾಗಿಯೇ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ವಿಧಿಸಿ, ಯಾರೂ ಮನೆಯಿಂದ ಹೊರಬರದಂತೆ ಮನೆಯಲ್ಲೇ ಇರುವಂತೆ ಮನವಿ ಮಾಡಿದೆ. ಶೇ.80 ರಷ್ಟು ಜನರು ಮನೆಯಲ್ಲೇ ಇದ್ದರೂ, ಶೇ.20 ರಷ್ಟು ಜನರು ಅನ್ಯಕಾರ್ಯ ನಿಮಿತ್ತ ಹೊರಗೆ ತಿರುಗಾಡುತ್ತಲೇ ಇದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದ ಜಿಲ್ಲಾ ಪೊಲೀಸ್ ಇಲಾಖೆ ಈಗಾಗಲೇ ರಂಗಭೂಮಿ ಕಲಾವಿದ ಪತ್ರಿಕಾ ಛಾಯಾಗ್ರಾಹಕ ಪುರುಷೋತ್ತಮ ಹಂದ್ಯಾಳ್ ನಿರ್ದೇಶನದಲ್ಲಿ ಕಿರುಚಿತ್ರವೊಂದನ್ನು ನಿರ್ಮಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ವೈರಲ್ ಆಗಿತ್ತು.
ಕಿರುಚಿತ್ರದಲ್ಲಿ ಕೋವಿಡ್ ವೈರಸ್ ಬಗ್ಗೆ ಸಾರ್ವಜನಿಕರು ಹೇಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು. ಮನೆಗೆ ಬಂದಾಗ ಸೋಪ್‌ನಿಂದ ಕೈ ತೊಳೆದುಕೊಳ್ಳಬೇಕು. ಸ್ಯಾನಿಟೈಸರ್ ಬಳಸಬೇಕು ಎಂಬಿತ್ಯಾದಿ ವಿಷಯಗಳ ಕುರಿತು ತಿಳಿಸಲಾಗಿತ್ತು. ವೈರಸ್ ಬಗ್ಗೆ ಇಷ್ಟೆಲ್ಲ ಜಾಗೃತಿ ಮೂಡಿಸಿದರೂ ಜನರು ಹೊರಗೆ ತಿರುಗಾಡುವುದು ಮಾತ್ರ ಸಂಪೂರ್ಣ ನಿಂತಿಲ್ಲ. ಅನಿವಾರ್ಯ ಕೆಲಸಗಳಿಂದ ಕೆಲವರು ಹೊರಗೆ ಬಂದರೆ, ಕೆಲವರು ವಿನಾಕಾರಣ ಬೈಕ್‌ಗಳಲ್ಲಿ ರಸ್ತೆಗಳಲ್ಲಿ ಸಂಚರಿಸುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಹಾಗಾಗಿ ಇದನ್ನು ಸಂಪೂರ್ಣವಾಗಿ ನಿಲ್ಲಿಸುವ ಸಲುವಾಗಿ ಹಗಲುವೇಷ ಮಾದರಿಯ ಕೋವಿಡ್ ವೈರಸ್ ವೇಷ ಧರಿಸಿದ್ದ ಇಬ್ಬರು ಜನರಲ್ಲಿ ಭಯ ಬೀಳಿಸುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದೆ.
ತರಕಾರಿ ಮಾರುಕಟ್ಟೆ ಸೇರಿ ಜನನಿಬಿಡ ಪ್ರದೇಶಗಳಲ್ಲಿ ಕೋವಿಡ್ ವೇಷಾಧಾರಿಗಳು ಇರಲಿದ್ದಾರೆ. ಜತೆಗೆ ಅಲ್ಲಿರುವ ಪೊಲೀಸರು ಸಹ ಸಾರ್ವಜನಿಕರಿಗೆ ಸಾಮಾಜಿಕ ಅಂತರ ಹೇಗೆ ಕಾಪಾಡಬೇಕು. ಸ್ಯಾನಿಟೈಸರ್ ಹೇಗೆ ಬಳಸಬೇಕು. ಕೈಗಳನ್ನು ಹೇಗೆ ತೊಳೆಯಬೇಕು? ಇನ್ನಿತರೆ ಮಾಹಿತಿಯನ್ನೂ ನೀಡಲಿದ್ದಾರೆ. ಕೊನೆಗೆ ಅನಾವಶ್ಯಕವಾಗಿ ಹೊರಗಡೆ ಬರಬೇಡಿ. ಇನ್ನೊಬ್ಬರ ಸಾವಿಗೆ ಕಾರಣರಾಗಬೇಡಿ ಎಂಬ ಸಂದೇಶವನ್ನೂ ಹೇಳುವ ಮೂಲಕ ಜನರು ಮನೆಯಿಂದ ಹೊರಗೆ ಬರದಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ನಗರದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಕೊರೊನಾ ವೈರಸ್ ವೇಷಧಾರಿಗಳು ಭಾನುವಾರ ಜಾಗೃತಿ ಮೂಡಿಸಿದರು. ಈ ವೇಳೆ ಹೆಚ್ಚುವರಿ ಎಸ್‌ಪಿ ಬಿ.ಎನ್. ಲಾವಣ್ಯ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.