Advertisement
ಜಿಪಂ ಅಧ್ಯಕ್ಷ ಸ್ಥಾನ ಆಯ್ಕೆಗೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದ ಇದ್ದ ನ್ಯಾಯಾಲಯದ ಕಟೆಕಟೆಯಿಂದ ಇತ್ತೀಚೆಗಷ್ಟೇ ಮುಕ್ತಗೊಂಡಿದ್ದ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಜಿಪಂ ಅಧ್ಯಕ್ಷರಾಗಿ ಆಯ್ಕೆಯಾಗಿ ಎರಡೂವರೆ ವರ್ಷ (30 ತಿಂಗಳು) ಆಗಿದ್ದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸ್ವಪಕ್ಷದ ಸದಸ್ಯರೇ ಪಟ್ಟು ಹಿಡಿದಿದ್ದಾರೆ. ಈ ಕುರಿತು ಜಿಲ್ಲೆಯ ವಿವಿಧೆಡೆ ಸದಸ್ಯರು ಸಭೆ ನಡೆಸಿದ್ದಾರೆ ಎನ್ನಲಾಗಿದೆ.
Related Articles
Advertisement
ಈ ಕುರಿತಂತೆ ಶಾಸಕರಾದ ಜಿ. ಸೋಮಶೇಖರರೆಡ್ಡಿ, ಶ್ರೀರಾಮುಲು ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಅದರಲ್ಲಿ ಕೈಗೊಳ್ಳುವ ನಿರ್ಧಾರವನ್ನು ಆಧರಿಸಿ, ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಳಿ ನಿಯೋಗ ತೆರಳಲು ಸಜ್ಜಾಗಿದ್ದಾರೆ ಎಂದು ಜಿಪಂ ಸದಸ್ಯರೊಬ್ಬರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದಲೂ ಲಾಬಿ: ಜಿಪಂ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಪಕ್ಷ ಸಹ ಆಂತರಿಕವಾಗಿ ಕಸರತ್ತು ಆರಂಭಿಸಿದೆ ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಜಿಪಂನ 40 ಸದಸ್ಯರ ಪೈಕಿ ಕಾಂಗ್ರೆಸ್ ಪಕ್ಷ 19 ಸದಸ್ಯ ಬಲ ಹೊಂದಿದೆ. ಆರು ಶಾಸಕರು, 1 ರಾಜ್ಯಸಭೆ, 1 ಲೋಕಸಭೆ, 2 ವಿಧಾನಪರಿಷತ್ ಸದಸ್ಯರನ್ನು ಹೊಂದಿದ್ದು, ಸುಲಭವಾಗಿ ಅಧಿಕಾರ ಹಿಡಿಯಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ನವರು ಅಧ್ಯಕ್ಷ ಚುಕ್ಕಾಣಿ ಹಿಡಿಯಲು ತೀವ್ರ ಕಸರತ್ತಿನಲ್ಲಿ ತೊಡಗಿದ್ದಾರೆ.
ಜಿಪಂ ಸಾಮಾನ್ಯ ಸಭೆಗೆ ಗೈರಾಗಿದ್ದ ಸದಸ್ಯರು, ನಗರದ ಮುಖಂಡರೊಬ್ಬರ ಮನೆಯಲ್ಲಿ ನಡೆದ ಸಭೆಯಲ್ಲಿ ಹಾಜರಾಗಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷದಲ್ಲೂ ಅಧ್ಯಕ್ಷ ಸ್ಥಾನಕ್ಕಾಗಿ ಮೂವರು ಆಕಾಂಕ್ಷಿಗಳಿದ್ದಾರೆ. 2019ರಲ್ಲಿ ಜಿಪಂ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿಯವರು 5 ವರ್ಷ ಅವಧಿಗೆ ತಾವೆ ಅಧ್ಯಕ್ಷರು ಎಂದು ಹೈಕಮಾಂಡ್ ಸೂಚಿಸಿದೆ ಎಂಬ ವಿಶ್ವಾಸದಲ್ಲಿದ್ದು, ಅಧ್ಯಕ್ಷ ಸ್ಥಾನಕ್ಕೆ ಯಾವ ಪಕ್ಷ ಚೆಕ್ ಇಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಬಳ್ಳಾರಿ ಜಿಪಂ ಅಧ್ಯಕ್ಷ ಸ್ಥಾನವನ್ನು ಕಳೆದ ಎರಡೂವರೆ ವರ್ಷಗಳ ಹಿಂದೆ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಹೈಕಮಾಂಡ್ ನಮಗೆ ಪೂರ್ಣ ಐದು ವರ್ಷಗಳ ಕಾಲ ಅವಧಿಗೆ ತಾವೇ ಅಧ್ಯಕ್ಷರು ಅಂತ ಹೇಳಿದೆ. ಆದರೆ ಕೆಲವರು ತಮ್ಮ ಹಿತಾಸಕ್ತಿಗೊಸ್ಕರ ವಿವಿಧ ಹುನ್ನಾರ ಮಾಡುತ್ತಿದ್ದಾರೆ. ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ನಾನು ಬದ್ಧ. ತಾವು ಅಧ್ಯಕ್ಷರಾಗಿ ಈಗ ಎರಡೂವರೆ ವರ್ಷಗಳಾಗಿದೆ. ಬೇರೆಯವರಿಗೆ ನೀಡಬೇಕು ಎಂದು ಕೆಲವರು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯ ನಾಯಕತ್ವ ಸೇರಿ ಹೈಕಮಾಂಡ್ ಸಹ ನನ್ನ ಬೆಂಬಲಕ್ಕಿದೆ. ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸುವ ಜಿಪಂ ಸಾಮಾನ್ಯ ಸಭೆಗೆ ತಾವು ಬರದೇ ಬರುವವರಿಗೂ ಬರದಂತೆ ಮಾಡುವುದರ ಮೂಲಕ ಅಭಿವೃದ್ಧಿಗೆ ಕೈ ಜೋಡಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.
ಭಾರತಿ ತಿಮ್ಮಾರೆಡ್ಡಿ,
ಜಿಪಂ ಅಧ್ಯಕ್ಷೆ, ಬಳ್ಳಾರಿ. ಜಿಪಂ ಚುಕ್ಕಾಣಿ ಹಿಡಿಯೋದು ಖಚಿತ
ಬಳ್ಳಾರಿ ಜಿಪಂ ಅಧ್ಯಕ್ಷರ ಬದಲಾವಣೆಯ ಹೊಗೆಯಾಡುತ್ತಿರುವುದು ನಿಜ. ಕಾಂಗ್ರೆಸ್ ಪಕ್ಷ ಸಹ ಅಧ್ಯಕ್ಷ ಗಾದಿ ಹಿಡಿಯಲು ಪ್ರಯತ್ನಿಸುತ್ತಿದೆ. ಮೂವರು ಆಕಾಂಕ್ಷಿಗಳಿದ್ದಾರೆ. ಜಿಪಂ ಅಧ್ಯಕ್ಷ ಸ್ಥಾನಕ್ಕೆ ಬೇಕಿದ್ದ ಮತಗಳ ಬಲವೂ ಕಾಂಗ್ರೆಸ್ ಪಕ್ಷಕ್ಕಿದೆ. ಹಾಗಾಗಿ ಹೊಸ ವರ್ಷದಲ್ಲಿ ಜಿಪಂ ಚುಕ್ಕಾಣಿ ಹಿಡಿಯುವುದು ಖಚಿತ.
ಬಿ.ವಿ.ಶಿವಯೋಗಿ
ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಬಳ್ಳಾರಿ. ವೆಂಕೋಬಿ ಸಂಗನಕಲ್ಲು