Advertisement

ವಿಮ್ಸ್ ವೈದ್ಯರಿಂದ ಅಪರೂಪದ ಶಸ್ತ್ರಚಿಕಿತ್ಸೆ

03:04 PM Jan 18, 2020 | Naveen |

ಬಳ್ಳಾರಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಸಿಗಲ್ಲ ಎಂಬ ಅಪವಾದದ ನಡುವೆಯೂ ವಿಮ್ಸ್ ನ ವೈದ್ಯರು ಲಕ್ಷಾಂತರ ರೂ. ಖರ್ಚಾಗುವ ವಿಶೇಷ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡುವ ಮೂಲಕ ಸರ್ಕಾರಿ ಆಸ್ಪತ್ರೆಯೂ ಬೆಸ್ಟ್‌ ಎಂಬುದನ್ನು ಸಾಬೀತುಪಡಿಸಿದ್ದಾರೆ.

Advertisement

ಕಳೆದ 2 ವರ್ಷಗಳಿಂದ ಕೆಳದವಡೆ ಸಮಸ್ಯೆಯಿಂದ ಬಳಲುತ್ತಿದ್ದ ತಾಲೂಕಿನ ಸಂಗನಕಲ್ಲು ಗ್ರಾಮದ ನಿವಾಸಿ ಶ್ರೀನಿವಾಸ್‌ ಎಂಬುವವರ ಮಗಳು ಸುಷ್ಮಿತಾಗೆ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದೆ.

ಸುಷ್ಮಿತಾಳ ಬಲದವಡೆ ಕೆಳಗೆ “ಆಸ್ಸಿಫೈಯಿಂಗ್‌ ಫೈಬ್ರೋಮ್‌’
ಎನ್ನುವ ಮಾಂಸದ ಗಡ್ಡೆ ಬೆಳೆದಿದೆ. 2018ರಲ್ಲಿ ವಿಮ್ಸ್‌ನ ದಂತ ವೈದ್ಯ ಮಧುಸೂದನ್‌ ರೆಡ್ಡಿ ಅವರ ಬಳಿ ತಪಾಸಣೆ ಮಾಡಿಸಿದ್ದಾರೆ. ಪರಿಶೀಲಿಸಿದ ವೈದ್ಯರು ಇದರಿಂದ ಸದ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿ ಔಷಧ ನೀಡಿದ್ದಾರೆ. ಆದರೆ, ಗಡ್ಡೆ ದಿನೇದಿನೇ ದೊಡ್ಡದಾಗಿ ಆಹಾರ ಸೇವಿಸಲೂ, ಬಾಯಿ ತೆರೆಯಲೂ ಆಗದ ಸ್ಥಿತಿ ಉಂಟಾಗಿದೆ.

ಪುನಃ ಸುಷ್ಮಿತಾ ಪಾಲಕರು ಮ್ಯಾಗಿjಲೋ ಫೇಶಿಯಲ್‌ ಸರ್ಜನ್‌ ಡಾ| ಮಧುಸೂದನ್‌ ರೆಡ್ಡಿ ಅವರನ್ನು ಸಂಪರ್ಕಿಸಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಮಾಂಸ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದು, ಕೂಡಲೇ ಶಸ್ತ್ರಚಿಕಿತ್ಸೆ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ. ಹಣವಿಲ್ಲದೆ ಕಂಗಾಲು: ಶಸ್ತ್ರಚಿಕಿತ್ಸೆಗೆ ಕನಿಷ್ಠ ಮೂರು ಲಕ್ಷ ರೂ. ವೆಚ್ಚವಾಗುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಬೆಂಗಳೂರಿಗೆ ತೆರಳಿ ತಪಾಸಣೆ ಮಾಡಿಸಿದ್ದಾರೆ.

ಅಲ್ಲಿಯೂ ಕನಿಷ್ಠ 1.5 ಲಕ್ಷ ರೂ.ಗಳವರೆಗೂ ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಹಣ ಇಲ್ಲದೆ ಪೋಷಕರು ಚಿಂತಿತರಾಗಿದ್ದಾರೆ. ಈ ವಿಶೇಷ ಪ್ರಕರಣ ವಾಜಪೇಯಿ ಆರೋಗ್ಯಶ್ರೀ, ಕೇಂದ್ರ ಸರ್ಕಾರದ ಆಯುಷ್ಮಾನ್‌ ಭಾರತ್‌
ಯೋಜನೆಗಳ ವ್ಯಾಪ್ತಿಗೆ ಬರಲ್ಲ ಎಂಬುದನ್ನು ತಿಳಿದ ಸುಷ್ಮಿತಾಳ ಪೋಷಕರು ದಿಕ್ಕು ತೋಚದಂತಾಗಿದ್ದಾರೆ.

Advertisement

ಮರಳಿ ವಿಮ್ಸ್‌ಗೆ: ಎಲ್ಲ ಪ್ರಯತ್ನದ ನಂತರ ಮರಳಿ ಬಳ್ಳಾರಿಗೆ ಬಂದು ವಿಮ್ಸ್‌ ವೈದ್ಯರನ್ನು ಸಂಪರ್ಕಿಸಿದ್ದಾರೆ. ಕೊನೆಗೆ ವಿಮ್ಸ್‌ನಲ್ಲೇ ಜ. 10ರಂದು ವೈದ್ಯರು ಬೆಳಗ್ಗೆಯಿಂದ ಸಂಜೆವರೆಗೆ ಸತತ 10.5 ಗಂಟೆಗಳ ಕಾಲ ಸುಷ್ಮಿತಾಳಿಗೆ ಶಸ್ತ್ರಚಿಕಿತ್ಸೆ ಮಾಡಿ ಗಡ್ಡಯನ್ನು ತೆಗೆದಿದ್ದಾರೆ. ಸುಷ್ಮಿತಾಳ ಬಲದವಡೆಯ ಕೆಲ ಭಾಗವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್‌ ಸರ್ಜರಿ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಶಸ್ತ್ರಚಿಕಿತ್ಸೆಗೊಳಗಾದ ಸುಷ್ಮಿತಾ ಆರೋಗ್ಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ.

ಏನಿದು ಆಸ್ಸಿಫೈಯಿಂಗ್‌ ಫೈಬ್ರೋಮ್‌
ದ‌ವಡೆಯ ಕೆಳಗೆ ಹೆಚ್ಚುವರಿಯಾಗಿ ಮಾಂಸ ಬೆಳೆಯುತ್ತದೆ. ಇದರಿಂದ ಪ್ರಾಣಕ್ಕೆ ಅಪಾಯ ಇಲ್ಲದಿದ್ದರೂ ನಿರ್ಲಕ್ಷ್ಯ ಮಾಡುವಂತಿಲ್ಲ. ದವಡೆಯ ಒಂದು ಕಡೆ ಮಾಂಸ ಬೆಳೆಯುತ್ತಿದ್ದಂತೆ ಮತ್ತೂಂದು ಕಡೆ ಕೊಳೆಯುತ್ತಾ ಬರುತ್ತದೆ. ಇದರಿಂದ ಹಲ್ಲುಗಳಿಗೂ ಸಮಸ್ಯೆಯಾಗುವುದರ ಜತೆಗೆ ಕೊಳೆ ಮಾಂಸದಿಂದ ಕ್ಯಾನ್ಸರ್‌ ಬರುವ ಸಾಧ್ಯತೆಯಿದೆ. ಇಂಥ ಪ್ರಕರಣಗಳು ಅತ್ಯಂತ ವಿರಳ ಎನ್ನುತ್ತಾರೆ ವಿಮ್ಸ್‌ನ ದಂತವೈದ್ಯ ಡಾ| ಮಧುಸೂದನ್‌.

ತಾಲೂಕಿನ ಸಂಗನಕಲ್ಲು ಗ್ರಾಮದ 8ನೇ ತರಗತಿ ವಿದ್ಯಾರ್ಥಿನಿ ಸುಷ್ಮಿತಾ ಆಸ್ಸಿಫೈಯಿಂಗ್‌ ಫೈಬ್ರೋಮ್‌ (ಕೆಳದವಡೆ) ಸಮಸ್ಯೆಯಿಂದ ಬಳಲುತ್ತಿದ್ದಳು. ಆರಂಭದಲ್ಲಿ ಚಿಕ್ಕ ಪ್ರಮಾಣದಲ್ಲಿದೆ ಎಂದು ಚಿಕಿತ್ಸೆ ನೀಡಲಾಗಿತ್ತು. ಆದರೆ, ಅದು ದೊಡ್ಡದಾಗಿ ಬೆಳೆದ ಹಿನ್ನೆಲೆಯಲ್ಲಿ ಹೊರಗಡೆ ಲಕ್ಷಾಂತರ ರೂ. ಖರ್ಚಾಗುವ ಶಸ್ತ್ರಚಿಕಿತ್ಸೆಯನ್ನು ವಿಮ್ಸ್‌ ಆಸ್ಪತ್ರೆಯಲ್ಲೇ ಉಚಿತವಾಗಿ ಮಾಡಲಾಯಿತು. ಸುಷ್ಮಿತಾ ಇದೀಗ ಆರೋಗ್ಯವಾಗಿದ್ದು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಗುಣಮುಖರಾಗಲಿದ್ದಾರೆ.
ಡಾ| ಮಧುಸೂದನ್‌ ರೆಡ್ಡಿ, ಮ್ಯಾಗ್ಜಿಲೋ ಫೇಶಿಯಲ್‌ ಸರ್ಜನ್‌, ಡಾ| ಸೋಮಶೇಖರ ಸಮಗಂಡಿ, ಪ್ಲಾಸ್ಟಿಕ್‌ ಸರ್ಜನ್‌, ವಿಮ್ಸ್‌, ಬಳ್ಳಾರಿ.

„ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next