Advertisement
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಐದು ಹಾಗೂ ವಿಜಯನಗರ ಜಿಲ್ಲೆಯ ಎರಡು ಸಹಿತ ಒಟ್ಟು ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಈ ಮೂಲಕ ಅವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿದೆ. ಗಣಿನಾಡು ಎರಡು ಜಿಲ್ಲೆಗಳಾಗಿ ಹೋಳಾದ ಬಳಿಕ ಅವಳಿ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಯನ್ನು ಎದುರಿಸುತ್ತಿರುವ ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದಿವೆ.
Related Articles
Advertisement
ಸಚಿವ ನಾಗೇಂದ್ರ ಸ್ಪರ್ಧೆ?ಇನ್ನೊಂದೆಡೆ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಬಿ.ಶ್ರೀರಾಮುಲು ಸ್ಪರ್ಧಿಸಿದರೆ ಅವರ ವಿರುದ್ಧ ಸಚಿವ ಬಿ.ನಾಗೇಂದ್ರ ಅವರನ್ನೇ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ವರಿಷ್ಠರಿದ್ದಾರೆ. ಇವರಿಬ್ಬರೂ ಹಳೆಯ ದೋಸ್ತಿಗಳು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಖಾಮುಖೀ ಆಗಿದ್ದು ನಾಗೇಂದ್ರ ಗೆದ್ದಿದ್ದರು. ಆದರೆ ಸ್ಪರ್ಧೆ ಬಗ್ಗೆ ಅಷ್ಟಾಗಿ ಆಸಕ್ತಿ ತೋರದ ನಾಗೇಂದ್ರ ಅವರು, ಸಹೋದರ ವೆಂಕಟೇಶ್ ಪ್ರಸಾದ್ ಅವರಿಗೆ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಲ್ಲಿ ಲಾಬಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಶ್ರೀರಾಮುಲು ಕಣಕ್ಕೆ
ಬಿಜೆಪಿ ಅವಳಿ ಜಿಲ್ಲೆಗಳಲ್ಲಿ ತನ್ನದೇ ಆದ ಸಂಘಟನೆ ಶಕ್ತಿ ಹೊಂದಿದೆಯಾದರೂ ಕಳೆದ ವಿಧಾನಸಭೆ ಚುನಾವಣೆಯ ಹೀನಾಯ ಸೋಲು ಪಕ್ಷದ ಕಾರ್ಯಕರ್ತರು, ಮುಖಂಡರಲ್ಲಿ ನಿರುತ್ಸಾಹ ಮೂಡಿಸಿದೆ. ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್‌ಗಾಗಿ ಹೆಚ್ಚು ಪೈಪೋಟಿ ಕಂಡು ಬರುತ್ತಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸೋತಿರುವ ಶ್ರೀರಾಮುಲು 2014ರಂತೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಈ ಮೊದಲು ರಾಯಚೂರಿನಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದರೂ ಈಗ ಬಳ್ಳಾರಿಯಲ್ಲೇ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಪರಿಣಾಮ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣವಾದ ವಿಜಯನಗರ ಜಿಲ್ಲೆಯ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಕ್ಷೇತ್ರಗಳಲ್ಲಿ ಹೆಚ್ಚು ಓಡಾಟ ನಡೆಸುತ್ತಿದ್ದಾರೆ. ಪಕ್ಷದ ವರಿಷ್ಠರು ಕೂಡ ಶ್ರೀರಾಮುಲು ಸ್ಪರ್ಧೆಗೆ ಒಲವು ಹೊಂದಿದ್ದಾರೆ ಎಂದು ಪಕ್ಷದ ಬಲ್ಲ ಮೂಲಗಳು ಖಚಿತಪಡಿಸಿವೆ. ಇನ್ನು ಹಾಲಿ ಸಂಸದ ವೈ.ದೇವೇಂದ್ರಪ್ಪ ಅವರು ವರಿಷ್ಠರು ಅವಕಾಶ ನೀಡಿದರೆ ಸ್ಪ ರ್ಧಿಸುವ ಆಸಕ್ತಿ ತೋರಿದ್ದರೂ ವಯಸ್ಸಿನ ಕಾರಣದಿಂದ ಅವರಿಗೆ ಟಿಕೆಟ್ ತಪ್ಪುವ ಸಾಧ್ಯತೆಯಿದೆ. ಸಿರುಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ ಟಿಕೆಟ್ ಆಕಾಂಕ್ಷಿ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರಾದರೂ ಪಕ್ಷದ ವರಿಷ್ಠರು ಅಷ್ಟಾಗಿ ಪರಿಗಣಿಸಿದಂತಿಲ್ಲ. ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವುದು ನಿಶ್ಚಿತ. ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಪಕ್ಷದಿಂದ ಅಭ್ಯರ್ಥಿ ಹಾಕುತ್ತಾರೋ, ತಾವೇ ಬಿಜೆಪಿ ಸೇರಿ ಅಭ್ಯರ್ಥಿಯಾಗುತ್ತಾರೋ ಎಂಬುದೂ ಕುತೂಹಲಕ್ಕೆ ಕಾರಣವಾಗಿದೆ.