ಬಳ್ಳಾರಿ: ಮೆಣಸಿನಕಾಯಿ ಬಿಡಿಸಲೆಂದು ನೆರೆಯ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಗೆ ಹೋಗಿದ್ದ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾವಿಹಾಳ್ ಗ್ರಾಮದ ನಿವಾಸಿಗಳು ಲಾಕ್‌ಡೌನ್‌ನಲ್ಲಿ ಸಿಲುಕಿಕೊಂಡಿದ್ದು, ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಿಸುವಂತಾಗಿದೆ.
ಜಿಲ್ಲೆಯ ರಾವಿಹಾಳ್ ಗ್ರಾಮದ 70 ಕೂಲಿ ಕಾರ್ಮಿಕರು ತಮ್ಮ ಮಕ್ಕಳೊಂದಿಗೆ ಕಳೆದ ಮೂರು ತಿಂಗಳ ಹಿಂದೆ ನೆರೆಯ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಸರಸಪೇಟ ತಾಲೂಕಿನ ಸತ್ಯನಪಲ್ಲಿ ಮಂಡಲಂನ ಅಬ್ರಸ್‌ಪಲ್ಲಿ ಗ್ರಾಮದಲ್ಲಿ ಮೆಣಸಿನಕಾಯಿ ಬಿಡಿಸಲೆಂದು ತೆರಳಿದ್ದಾರೆ. ಇವರಲ್ಲಿ ಒಬ್ಬ ಗರ್ಭಿಣಿ, 20 ಮಕ್ಕಳು, ವೃದ್ಧರೂ ಇದ್ದಾರೆ. ಕೊರೊನಾ ವೈರಸ್
ನಿಯಂತ್ರಣಕ್ಕಾಗಿ ಲಾಕ್‌ಡೌನ್ ಜಾರಿಗೆ ಬಂದು ಈಗಾಗಲೇ ತಿಂಗಳು ಕಳೆದಿದ್ದು, ಮೆಣಸಿನಕಾಯಿ ಬಿಡಿಸಿದ ಕೂಲಿ ಹಣದಲ್ಲಿ ಇಲ್ಲಿಯವರೆಗೆ ಜೀವನ ಸಾಗಿಸಿದ್ದಾರೆ.
ಗ್ರಾಮದ ಹೊಲವೊಂದರಲ್ಲಿ ಚಿಕ್ಕಚಿಕ್ಕ ಟೆಂಟ್‌ಗಳಲ್ಲಿ ಜೀವನ ಸಾಗಿಸುತ್ತಿದ್ದ ಇವರಿಗೆ ಇದೀಗ ಆಹಾರದ ಕೊರತೆ ಎದುರಾಗಿದೆ. ಹೊರ ರಾಜ್ಯದವರಾದ ಹಿನ್ನೆಲೆಯಲ್ಲಿ ಯಾವುದೇ ದಾಖಲೆಗಳು ಇರದ ಕಾರಣ ಅಲ್ಲಿನ ಸ್ಥಳೀಯ ಆಡಳಿತ ಇವರಿಗೆ ಆಹಾರ ಸೇರಿದಂತೆ ಅಗತ್ಯ ವಸ್ತುಗಳ ನೀಡಲು ಹಿಂದೇಟು ಹಾಕುತ್ತಿದೆ. ಮೇಲಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೇರೆಲ್ಲೂ ಕೆಲಸವೂ ಇಲ್ಲದೇ, ವಾಪಸ್ ತಮ್ಮ ಊರಿಗೆ ಬರಲು ಸಾರಿಗೆ ವ್ಯವಸ್ಥೆಯೂ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ. ಹಾಗಾಗಿ ಬಳ್ಳಾರಿ ಜಿಲ್ಲಾಡಳಿತ ಇವರ ಸಮಸ್ಯೆಗೆ ಸ್ಪಂದಿಸಿ ಬಳ್ಳಾರಿಗೆ ಕರೆತರುವಲ್ಲಿ ಕ್ರಮಕೈಗೊಳ್ಳಬೇಕು ಎಂದು ಅಬ್ರಸ್‌ಪಲ್ಲಿಯಲ್ಲಿ ಸಿಲುಕಿರುವ ಸಂತ್ರಸ್ತರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಆಗ್ರಹಿಸಿದ್ದಾರೆ.
ಅಬ್ರಸ್‌ಪಲ್ಲಿ ಗ್ರಾಮದ ರಸ್ತೆಯಲ್ಲಿ ತಾತ್ಕಾಲಿಕ ಟೆಂಟ್‌ಗಳಲ್ಲಿ ವಾಸವಾಗಿದ್ದೇವೆ. ಈಚೆಗೆ ಮಳೆಬಂದು ಅವಾಂತರ ಸೃಷ್ಟಿಸಿದೆ. ಅಡುಗೆ ಮಾಡಲು ರೇಷನ್ ಇಲ್ಲದಾಗಿದೆ. ಗರ್ಭಿಣಿಯೊಬ್ಬಳು ಇದ್ದಾರೆ. ಅವರನ್ನು ಆಸ್ಪತ್ರೆಗೂ ಕರೆದುಕೊಂಡು ಹೋಗಬೇಕಾಗಿದೆ. ಹೇಗಾದರು ಮಾಡಿ ನಮ್ಮನ್ನು ನಮ್ಮ ಊರಿಗೆ ಕಳುಹಿಸಿಕೊಟ್ಟರೆ ಅನುಕೂಲವಾಗಲಿದೆ ಎಂದು ಮಹಿಳೆಯೊಬ್ಬರು ಒತ್ತಾಯಿಸಿದ್ದಾರೆ. ಜಿಲ್ಲಾಡಳಿತ ಕೂಡಲೇ ಕಾರ್ಯಪ್ರವೃತ್ತರಾಗಿ ಆಂಧ್ರದಲ್ಲಿ ಸಿಲುಕಿರುವವರನ್ನು ಬಳ್ಳಾರಿಗೆ ಕರೆತರಬೇಕಾಗಿದೆ.
3ರ ನಂತರ ಕ್ರಮಕ್ಕೆ ನಿರ್ಧಾರ: ಕೂಡಲಗಿ
ಸಿರುಗುಪ್ಪ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸೀಮಾಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್ ಪೇಟೆ ಸತ್ಯನಪಲ್ಲಿ ಗ್ರಾಮದಲ್ಲಿ ಸಿಲಿಕಿಕೊಂಡಿದ್ದ ತಾಲೂಕಿನ ರಾವಿಹಾಳ್ ಗ್ರಾಮದ 70 ಜನ ಕೂಲಿ ಕಾರ್ಮಿಕರಲ್ಲಿ ಈಗಾಗಲೇ 17 ಜನರು ಸ್ವಗ್ರಾಮಕ್ಕೆ ಮರಳಿದ್ದಾರೆ. ಉಳಿದ ಕಾರ್ಮಿಕರನ್ನು ಮೇ 3ರ ನಂತರ ಕರೆತರುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದೆಂದು ತಹಶೀಲ್ದಾರ್ ಎಸ್.ಬಿ. ಕೂಡಲಗಿ ತಿಳಿಸಿದ್ದಾರೆ.