ಬಳ್ಳಾರಿ: ರಾಜ್ಯ ಸರ್ಕಾರದ ಮೇ 24ರ ಲಾಕ್‌ಡೌನ್ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಜನರೇ ಸ್ವಯಂ ಪ್ರೇರಣೆಯಿಂದ ಮತ್ತೊಂದು “ಜನತಾ ಕರ್ಫ್ಯೂ’ ಆಚರಿಸಿದ್ದಾರೆ.
ಬೆಳಗ್ಗೆ ಒಂದಷ್ಟು ಔಷಧ ಮಳಿಗೆ, ತರಕಾರಿ ಮಾರುಕಟ್ಟೆ, ಮಾಂಸದ ಅಂಗಡಿಗಳನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲ ವಿಧದ ವಾಣಿಜ್ಯ ಮಳಿಗೆಗಳು ಸಂಪೂರ್ಣ ಬಂದ್ ಆಗಿದ್ದು, ಬಳ್ಳಾರಿ ಸೇರಿ ಜಿಲ್ಲೆಯಾದ್ಯಂತ ಲಾಕ್‌ಡೌನ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಕೋವಿಡ್ ವೈರಸ್ ನಿಯಂತ್ರಿಸುವ ಸಲುವಾಗಿ ಕೇಂದ್ರ ರಾಜ್ಯ ಸರ್ಕಾರಗಳು ಲಾಕ್‌ಡೌನ್‌ನ್ನು ಜಾರಿಗೆ ತಂದಿದೆ. ಲಾಕ್‌ಡೌನ್ ನಿಮಿತ್ತ ವಾಣಿಜ್ಯ ಮಳಿಗೆಗಳು ಸೇರಿ ವಾಹನಗಳು ರಸ್ತೆಗಿಳಿಯದಂತೆ, ಜನರು ಹೊರಬರದಂತೆ ತಡೆಯುವಲ್ಲಿ ಪೊಲೀಸರ ಪಾತ್ರ ಪ್ರಮುಖ. ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೊದಲೆರಡು ಲಾಕ್‌ಡೌನ್ ನಲ್ಲಿ ಜನರು ಹೊರಬರದಂತೆ, ವಾಣಿಜ್ಯ ಮಳಿಗೆಗಳು ತೆರೆಯದಂತೆ ತಡೆಯುವ ಸಲುವಾಗಿ ಪೊಲೀಸರು ಇಡೀ ದಿನ ವೃತ್ತಗಳಲ್ಲಿ, ರಸ್ತೆಗಳಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ರಾಜ್ಯ ಸರ್ಕಾರ ಘೋಷಿಸಿದ್ದ ಮೇ 24ರ ಒಂದು ದಿನದ ಸಂಪೂರ್ಣ ಲಾಕ್‌ಡೌನ್ ನಲ್ಲಿ ಪೊಲೀಸರು ಎಲ್ಲಿಯೂ ಕಾಣದಿದ್ದರೂ, ರಸ್ತೆಗಳು ಮಾತ್ರ ವಾಹನಗಳು, ಪಾದಚಾರಿಗಳು ಇಲ್ಲದೇ ಖಾಲಿ ಖಾಲಿಯಾಗಿದ್ದ ದೃಶ್ಯ ಕಂಡುಬಂದವು.
ಬಳ್ಳಾರಿ ನಗರದಲ್ಲಿ ಬೆಳಗ್ಗೆ ಒಂದಷ್ಟು ತರಕಾರಿ ಮಾರುಕಟ್ಟೆ, ಮಾಂಸದ ಅಂಗಡಿಗಳು, ಹಾಲು, ಕಿರಾಣಿ ಅಂಗಡಿ ತೆರೆದು ನಂತರ ಬಂದ್ ಆಗಿದ್ದವು. ಇನ್ನು ಔಷಧ, ಪೆಟ್ರೋಲ್ ಬಂಕ್ ಎಂದಿನಂತೆ ಕಾರ್ಯನಿರ್ವಹಿಸಿದ್ದು, ಉಳಿದಂತೆ ಸಾರಿಗೆ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿ ನಿಲುಗಡೆಯಾಗಿದ್ದವು. ನಗರದಲ್ಲಿ ಸಂಚರಿಸುವ ಪ್ರಯಾಣಿಕ ಆಟೋಗಳು, ನೆರೆಯ ಹಳ್ಳಿಗಳಿಂದ ಪ್ರಯಾಣಿಕರನ್ನು ಹೊತ್ತು ತರುವ ಟಂಟಂ ಆಟೋಗಳು ನಗರದತ್ತ ಸುಳಿಯಲಿಲ್ಲ. 4ನೇ ಹಂತದ ಲಾಕ್‌ಡೌನ್‌ನಲ್ಲಿ ಬಹುತೇಕ ಕ್ಷೇತ್ರಗಳಿಗೆ ಸಡಿಲಿಕೆ ನೀಡಿದ್ದರೂ, ಮೇ 24ರ ಒಂದು ದಿನ ಸಂಪೂರ್ಣ ಲಾಕ್ ಡೌನ್‌ಗೆ ಮಾತ್ರ ಜಿಲ್ಲೆಯ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ವಿಶೇಷವಾಗಿದ್ದು, ಲಾಕ್‌ಡೌನ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ ಎನ್ನಬಹುದು.
ಜೊತೆಗೆ ಸರ್ಕಾರಿ ಬಸ್, ಖಾಸಗಿ ಆಟೋ ಸಹ ರಸ್ತೆಗಿಳಿಯಲಿಲ್ಲ. ಅಲ್ಲದೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ನಗರ ಸೇರಿ ವಿವಿಧೆಡೆ ಅನಗತ್ಯವಾಗಿ ಯಾರು ರಸ್ತೆಗಿಳಿಯುವಂತಿಲ್ಲ ಎಂದು ಮೈಕ್ ಮೂಲಕ ಘೋಷಣೆ ಮಾಡಿದ್ದು, ವಾಣಿಜ್ಯ ಮಳಿಗೆಗಳವರು ಸಹ ಮುಂಜಾಗ್ರತೆ ವಹಿಸಿ ಬಂದ್ ಮಾಡಿದರು. ಇನ್ನು ನಗರದ ಮೋತಿ ವೃತ್ತ, ಗಡಗಿ ಚನ್ನಪ್ಪ ವೃತ್ತ ಸೇರಿ ಪ್ರಮುಖ ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ದಿನನಿತ್ಯ ಜನರಿಂದ ತುಂಬಿ ತುಳುಕುತ್ತಿದ್ದ ಏರಿಯಾಗಳೆಲ್ಲ ಜನರಿಲ್ಲದೇ ಬೀಕೋ ಎನ್ನುತ್ತಿದ್ದವು.
ಮಾಂಸ ಖರೀದಿ ಜೋರು: ನಗರದಲ್ಲಿ ಬೆಳಿಗ್ಗೆ ಮಾಂಸ ಮತ್ತು ಮೀನು ಖರೀದಿ ತುಂಬಾ ಜೋರಾಗಿ ನಡೆದಿತ್ತು. ನಗರದ ದೊಡ್ಡಮಾರುಕಟ್ಟೆ, ಸಣ್ಣ ಮಾರ್ಕೆಟ್, ತಾಳೂರು ರಸ್ತೆ, ಕಪ್ಪಗಲ್ ರೋಡ್, ಎಂ.ಜಿ.ರಸ್ತೆ, ಸೇರಿದಂತೆ ನಾನಾಕಡೆ ಚಿಕನ್, ಮಟನ್, ಮೀನು ಖರೀದಿಯಲ್ಲಿ ಮಾಂಸ ಪ್ರಿಯರು ತೊಡಗಿಕೊಂಡಿದ್ದರು. ಕೆಲವೆಡೆ ನಿಯಮಗಳನ್ನು ಅನುಸರಿಸಿದರೆ ಇನ್ನೂ ಕೆಲವೆಡೆ ಸಾಮಾಜಿಕ ಅಂತರವೂ ಇಲ್ಲ, ಮಾಸ್ಕ್ ಕೂಡ ಧರಿಸಿರಲಿಲ್ಲ. ಭಾನುವಾರದ ಬಾಡೂಟಕ್ಕೆ ಮಾಂಸ ಖರೀದಿಯಲ್ಲಿ ನಿರತರಾಗಿದ್ದುದು ಕಂಡುಬಂದಿತು.
ಇನ್ನು ಲಾಕ್‌ಡೌನ್‌ನಲ್ಲಿ ಮದುವೆಗಳಿಗೆ ವಿನಾಯಿತಿ ನೀಡಿದ್ದರಿಂದ ಬಳ್ಳಾರಿ ಸೇರಿ ಜಿಲ್ಲೆಯಾದ್ಯಂತ ಬಹುತೇಕ ಮದುವೆಗಳು ಸರಳವಾಗಿ ನಡೆದವು. ಮನೆಗಳ ಮುಂದೆಯೇ ಪೆಂಡಾಲ್‌ಗಳನ್ನು ಅಳವಡಿಸಿ, ಸರಳವಾಗಿ ಮದುವೆಗಳು ನಡೆದವು. ಜನರು ಕಡಿಮೆ ಸಂಖ್ಯೆಯಲ್ಲಿ ನೆರೆದಿದ್ದು ಕಂಡುಬಂತು. ಅದೇ ರೀತಿ ಲಾಕ್‌ಡೌನ್‌ಗೆ ಬಳ್ಳಾರಿ ಮಾತ್ರವಲ್ಲದೇ, ಜಿಲ್ಲೆಯ ಹೊಸಪೇಟೆ, ಹ.ಬೊ. ಹಳ್ಳಿ ಸೇರಿ ಎಲ್ಲ ತಾಲೂಕುಗಳಲ್ಲೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.