Advertisement

ಎಲ್ಲೆಡೆ ಕನ್ನಡ ರಾಜ್ಯೋತ್ಸವದ ಕಂಪು

01:32 PM Nov 02, 2019 | Naveen |

ಬಳ್ಳಾರಿ: ಜಿಲ್ಲಾ ಖನಿಜ ಪ್ರತಿಷ್ಠಾನದಡಿ 1400 ಕೋಟಿ ರೂ. ಕ್ರಿಯಾಯೋಜನೆ ಸಿದ್ಧಪಡಿಸಲಾಗಿದ್ದು ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಆರೋಗ್ಯ, ಅಪೌಷ್ಠಿಕತೆ ನಿವಾರಣೆ, ಕೌಶಲ್ಯ ಅಭಿವೃದ್ಧಿ, ಸ್ಪರ್ಧಾತ್ಮಕ ಪರೀಕ್ಷೆಗಳಂಥ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಹೇಳಿದರು.

Advertisement

ನಗರದ ಮುನಿಸಿಪಲ್‌ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ 64ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕೆಎಂಇಆರ್‌ಸಿಯಿಂದ 4 ಸಾವಿರ ಕೋಟಿ ರೂ. ಅನುದಾನ ಬರುವ ನಿರೀಕ್ಷೆಯಿದೆ. ಜನಪ್ರತಿನಿಧಿಗಳ ಸಲಹೆ, ಸಹಕಾರ ಹಾಗೂ ಮಾರ್ಗದರ್ಶನದೊಂದಿಗೆ ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಬಳ್ಳಾರಿ ಜಿಲ್ಲೆಯನ್ನು ಅಭಿವೃದ್ಧಿಪಡಿಲಾಗುವುದು.

ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲೆಯ ಪ್ರಾಚೀನ ಇತಿಹಾಸ ಪ್ರತಿಬಿಂಬಿಸುವ ನಗರದ ಸಾಂಸ್ಕೃತಿಕ ಸಮುತ್ಛಯದಲ್ಲಿ ಮ್ಯೂಸಿಯಂ ಮಾಡಲಾಗುತ್ತಿದ್ದು, ಅದರಲ್ಲಿ ಸಂಗನಕಲ್ಲಿನ ಪ್ರಾಗೈತಿಹಾಸಿಕ ಪರಿಕರಗಳನ್ನು ಇಡಲಾಗುವುದು.

ಜ. 26ರಂದು ಇದರ ಉದ್ಘಾಟನೆ ನಡೆಯಲಿದೆ ಎಂದರು. ಅಪಾರ ಸಂಪತ್ತು, ಐತಿಹಾಸಿಕ ಚರಿತ್ರೆ ಮತ್ತು ವಿವಿಧತೆಯಲ್ಲಿ ಏಕತೆಯುಳ್ಳ ಕರ್ನಾಟಕ ರಾಜ್ಯವಾಗಿದೆ ಎಂದು ಹೇಳಿದ ಅವರು ಕರ್ನಾಟಕವೆಂಬುದು ಕೇವಲ ಒಂದು ಭೂ ಪ್ರದೇಶಕಷ್ಟೇ ಸೀಮಿತವಾಗಿಲ್ಲ, ಕರ್ನಾಟಕವೆಂದರೆ ಒಂದು ಸಂಸ್ಕೃತಿ, ಒಂದು ಜನ ಸಮುದಾಯ, ಒಂದು ಜೀವನ ಪದ್ಧತಿ ಎಂಬ ವಿಶಾಲಾರ್ಥ ಹೊಂದಿದೆ. ರಾಜ್ಯದ ಪರಂಪರೆಯನ್ನು ಪ್ರತಿನಿಧಿಸುವ ಪ್ರಾಚೀನ ಪದವಾಗಿದೆ. ಕರ್ನಾಟಕ ಇತಿಹಾಸ ಸುದೀರ್ಘ‌ವಾಗಿದೆ. ಕರ್ನಾಟಕವು ಸರ್ವಧರ್ಮ ರಕ್ಷಣೆ, ಸತ್ಯಾರಾಧನೆ, ಧರ್ಮನೀತಿ, ಸರ್ವಧರ್ಮ, ಸಹಿಷ್ಣುತೆ, ಧಾರ್ಮಿಕ ಸಮನ್ವಯ, ಸಹಬಾಳ್ವೆ, ಸೌಹಾರ್ದತೆ ಮತ್ತು ಭಾವೈಕ್ಯತೆಯ ಸ್ವರ್ಗವಾಗಿದೆ ಎಂದರು.

Advertisement

ಇಡೀ ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯ, ಪರಂಪರೆ ಮತ್ತು ಆಲೋಚನೆಗಳ ಸಮಗ್ರ ಅಭಿವೃದ್ಧಿಗೆ ನೆರವಾಗುವ ಉದ್ದೇಶದಿಂದ ಏಕೀಕರಣಗೊಂಡ ನಮ್ಮ ನಾಡಿನ ಉಜ್ವಲ ಮತ್ತು ಭವ್ಯ ಸಾಂಸ್ಕೃತಿಕ ಪರಂಪರೆ, ಕನ್ನಡ ನಾಡು-ನುಡಿಯ ಸಂರಕ್ಷಣೆಯ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಈ ಸಂದರ್ಭದಲ್ಲಿ ಸಂಸದ ವೈ. ದೇವೇಂದ್ರಪ್ಪ, ಶಾಸಕರಾದ ಸೋಮಶೇಖರ ರೆಡ್ಡಿ , ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ, ಜಿಪಂ ಸಿಇಓ ನಿತೀಶ್‌. ಕೆ, ಎಸ್ಪಿ ಸಿ.ಕೆ. ಬಾಬಾ, ಪ್ರೊಬೆಷನರಿ ಐಎಎಸ್‌ ಈಶ್ವರ್‌ ಕಾಂಡೂ ಸೇರಿದಂತೆ ಅನೇಕರು ಇದ್ದರು.

ಇದೇ ವೇಳೆ ಹಂಪಿಯ ಭುವನೇಶ್ವರಿ ದೇವಸ್ಥಾನದಿಂದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಂದ ಕನ್ನಡ ಜ್ಯೋತಿಯನ್ನು ಬರಮಾಡಿಕೊಳ್ಳಲಾಯಿತು. ನಂತರ ಸಾರಿಗೆ, ಕೃಷಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಮಹಾನಗರ ಪಾಲಿಕೆಯಿಂದ ಸಿದ್ಧಪಡಿಸಲಾದ ಸ್ತಬ್ಧಚಿತ್ರಗಳನ್ನು ಗಣ್ಯರು ವೀಕ್ಷಿಸಿದರು. ನಂತರ ಶಾಲಾ ಮಕ್ಕಳು ನಂದಿಕೋಲು ಕುಣಿತ, ಡೊಳ್ಳುವಾದನ, ತಮಟೆ ವಾದನ ಮೊದಲಾದ ಜನಪದ ಕಲಾ ತಂಡಗಳೊಂದಿಗೆ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಜರುಗಿತು.

ಈ ಮೆರವಣಿಗೆಯಲ್ಲಿ ನಾಡು ನುಡಿ ಹಾಗೂ ಅಭಿವೃದ್ಧಿ ಕುರಿತಾಗಿ ರಚಿಸಿದ್ದ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಸಹ ಪಾಲ್ಗೊಂಡಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next