ಬಳ್ಳಾರಿ; ಗಣಿನಾಡು ಬಳ್ಳಾರಿ ಜಿಲ್ಲೆಯ ಶೀಘ್ರದಲ್ಲೇ ಕೊರೊನಾ ವೈರಸ್‌ನಿಂದ ಮುಕ್ತವಾಗಲಿದ್ದು, ಈ ಕುರಿತು ಬಳ್ಳಾರಿ ಜಿಲ್ಲಾಡಳಿತ ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
ನಗರದ ಡಿಸಿ ಕಚೇರಿಯಲ್ಲಿ ಶನಿವಾರ ನಡೆದ ಸರ್ವ ಪಕ್ಷಗಳ ಸದಸ್ಯರ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಬಳ್ಳಾರಿ ಜಿಲ್ಲೆ ಕೋವಿಡ್ ಸೋಂಕು ಆವರಿಸಿದ್ದು, ಇದರಿಂದ ಬಳ್ಳಾರಿ ಜಿಲ್ಲೆ ಮುಕ್ತವಾಗುವ ದಿನ ಹತ್ತಿರದಲ್ಲೇ ಇದ್ದು, ಜಿಲ್ಲಾಡಳಿತ ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಸರ್ವ ಪಕ್ಷಗಳ ಶಾಸಕರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಸಂಸದರು, ವಿಧಾನ ಪರಿಷತ್ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. ಹಲವರು ಆರೋಗ್ಯ ಕ್ಷೇತ್ರ, ರೈತರು, ಬೆಳೆಗಾರರ ಪರವಾಗಿ ಬೆಳೆಹಾನಿಗೆ ಕ್ರಮಕೈಗೊಳ್ಳಬೇಕು ಎಂಬ ವಿಷಯಗಳನ್ನು ಪ್ರಸ್ತಾಪಿಸಲಾಗಿದ್ದು, ಈ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎಂದು ತಿಳಿಸಿದರು.
ಕೋವಿಡ್ ವಾರಿಯರ್ ಗೆ ಸಹಾಯ
ಜಿಲ್ಲೆಯಲ್ಲಿ ಆವರಿಸಿದ್ದ ಕೋವಿಡ್-19 ವೈರಸ್‌ನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಬಹುದೊಡ್ಡದಿದೆ. ಲಾಕ್‌ಡೌನ್ ಆದಾಗಿನಿಂದ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಈ ಖೊವಿಡ್ ವಾರಿಯರ್ಸ್ ಗಳಿಗೆ ಸರ್ಕಾರದಿಂದ ಏನಾದರೂ ಸಹಾಯ ಮಾಡಬೇಕು ಎಂದು ವೈದ್ಯರು, ವಕೀಲರ ಸಂಘದ ಅಧ್ಯಕ್ಷರು, ಸಂಘ ಸಂಸ್ಥೆಗಳ ಮುಖಂಡರು ಸಲಹೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಕ್ರಮಕೈಗೊಳ್ಳಲು ಪ್ರಯತ್ನಿಸಲಾಗುವುದು. ಈ ಮೂರು ಕ್ಷೇತ್ರಗಳ ಅಧಿಕಾರಿಗಳ ಧ್ವನಿಯಾಗಿ ನಾನು ನಿಲ್ಲುತ್ತೇನೆ ಎಂದವರು ಭರವಸೆ ನೀಡಿದ ಸಚಿವ ಆನಂದ್ ಸಿಂಗ್, ಮುಂದಿನ ದಿನಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಬೆಳೆಹಾನಿ ಸೇರಿ ಇನ್ನಿತರೆ ಸಮಸ್ಯೆಗಳು ಬಂದರೂ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ಲಭಿಸುವ ಸೌಲಭ್ಯಗಳನ್ನು ಒದಗಿಸುವಲ್ಲಿ ಕ್ರಮಕೈಗೊಳ್ಳುತ್ತೇನೆ ಎಂದವರು ಭರವಸೆ ನೀಡಿದರು.
ಸಭೆಯಲ್ಲಿ ಸಂಸದರಾದ ವೈ.ದೇವೇಂದ್ರಪ್ಪ, ಸಂಗಣ್ಣ ಕರಡಿ, ಶಾಸಕರಾದ ಜಿ.ಸೋಮಶೇಖರರೆಡ್ಡಿ, ಬಿ.ನಾಗೇಂದ್ರ, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಡಿಸಿ ಎಸ್.ಎಸ್.ನಕುಲ್, ಸಿಇಒ ಕೆ.ನಿತೀಶ್, ಎಸ್‌ಪಿ ಸಿ.ಕೆ.ಬಾಬಾ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ, ಸಂಘ ಸಂಸ್ಥೆಗಳ ಮುಖಂಡರು, ಅಧ್ಯಕ್ಷರು ಇದ್ದರು.