ಬಳ್ಳಾರಿ: ನಗರದ ಕೋವಿಡ್ (ಜಿಲ್ಲಾ) ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾದ ಐವರನ್ನು ಬುಧವಾರ ಬಿಡುಗಡೆಗೊಳಿಸಲಾಯಿತು.
ಮಹಾರಾಷ್ಟ್ರದ ಮುಂಬೈನಿಂದ ಬಂದಿರುವ ತಾಲೂಕಿನ ಚಾಗನೂರು ಗ್ರಾಮದ 14 ವರ್ಷದ ಬಾಲಕ ಪಿ.1542, ಜಿ.ನಾಗೇನಹಳ್ಳಿಯ 33 ವರ್ಷದ ಪಿ.1544, ಚಾಗನೂರಿನ 18 ವರ್ಷದ ಪಿ. 1549, ರೂಪನಗುಡಿ ಗ್ರಾಮದ 31 ವರ್ಷದ ಪಿ.1546 ಮತ್ತು ದೆಹಲಿಯಿಂದ ಬಂದಿರುವ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಪಿ. 2155 ಅವರಿಗೆ ಕೊರೊನಾ ಸೋಂಕು ಆವರಿಸಿದ್ದು, ನಗರದ ಕೋವಿಡ್ (ಜಿಲ್ಲಾ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಐವರು ಸೋಂಕಿನಿಂದ ಗುಣಮುಖವಾದ ಹಿನ್ನೆಲೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಎನ್. ಬಸಾರೆಡ್ಡಿಯವರು ಹೂಗುತ್ಛ, ಹಣ್ಣು-ಹಂಪಲು, ಕಂದಾಯ ಇಲಾಖೆಯಿಂದ ಪಡಿತರ ಕಿಟ್‌ಗಳನ್ನು ನೀಡಿ ಚಪ್ಪಾಳೆ ತಟ್ಟುವ ಮೂಲಕ ಆಂಬ್ಯುಲೆನ್ಸ್ ಮೂಲಕ ಮನೆಗೆ ಕಳುಹಿಸಲಾಯಿತು.
ಬುಧವಾರ ಪತ್ತೆಯಾದ 2 ಪಾಸಿಟಿವ್ ಸೇರಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 53 ಸೋಂಕು ದೃಢವಾಗಿದ್ದು, ಈ ಪೈಕಿ 32 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದು, ಇನ್ನುಳಿದ 19 ಪ್ರಕರಣಗಳು ಸಕ್ರಿಯವಾಗಿವೆ. ಕೋವಿಡ್ ನೋಡಲ್ ಅಧಿಕಾರಿ ಡಾ| ಯೋಗಾನಂದರೆಡ್ಡಿ, ಹಿರಿಯ ತಜ್ಞರಾದ ಡಾ| ಪ್ರಕಾಶ್ ಭಾಗವತಿ, ಡಾ| ಶಂಕರ್ ನಾಯಕ್, ಡಾ| ನಿಖೀಲ್, ಶುಶ್ರೂಷ ಅಧಿಧೀಕ್ಷಕಿ ಶಾಂತಾಬಾಯಿ, ಡಾ| ಕೊಟ್ರೇಶ್, ಡಾ| ಚಿತ್ರಶೇಖರ ಇದ್ದರು.
ಮತ್ತಿಬ್ಬರಿಗೆ ಸೋಂಕು: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮತ್ತಿಬ್ಬರಿಗೆ ಕೋವಿಡ್ -19 ಸೋಂಕು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ನೆರೆಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ಮೂಲದ 42 ವರ್ಷದ ಮಹಿಳೆಗೆ ಕೋವಿಡ್-19 ಸೋಂಕು ದೃಢವಾಗಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು, ಚಿಕಿತ್ಸೆ ನಿಮಿತ್ತ ಈಚೆಗೆ ಬಳ್ಳಾರಿ ನಗರಕ್ಕೆ ಬಂದಿದ್ದು, ಇಲ್ಲಿನ ವೈದ್ಯರೊಬ್ಬರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಮಹಿಳೆಗೆ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಎರಡು ದಿನಗಳ ಹಿಂದೆ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆಗ ಮಹಿಳೆಯ ಗಂಟಲು ದ್ರವ ಮತ್ತು ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷಿಸಿದಾಗ ಪಾಸಿಟಿವ್ ಎಂದು ಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ವಿಮ್ಸ್ ಆಸ್ಪತ್ರೆಯಿಂದ ಕೋವಿಡ್ (ಜಿಲ್ಲಾ) ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಜಿಲ್ಲೆಯ ತೋರಣಗಲ್ ಬಳಿಯ ಜಿಂದಾಲ್‌ನ(ಜೆಎಸ್‌ಡಬ್ಲೂ) ನೌಕರನಿಗೆ ಸೋಂಕು ಇರುವುದು ದೃಢಪಟ್ಟಿದೆ. ಜಿಂದಾಲ್ ಸಂಸ್ಥೆಯ 35 ವರ್ಷದ ಈ ನೌಕರ ತಮಿಳುನಾಡಿನ ಸೇಲಂನಲ್ಲಿರುವ ತನ್ನ ತಾಯಿ ಭೇಟಿಯಾಗಿ ಬಂದಿದ್ದರು. ಇವರ ತಾಯಿಗೆ ಕೊರೊನಾ ವೈರಸ್ ಇರುವುದು ಖಚಿತವಾಗುತ್ತಿದ್ದಂತೆಯೇ ವಿದ್ಯಾನಗರದಲ್ಲಿ ವಾಸವಾಗಿದ್ದ ಈತನನ್ನು 3 ದಿನಗಳ ಹಿಂದೆ ಕ್ವಾರಂಟೈನ್ ಮಾಡಲಾಗಿತ್ತು. ಜತೆಗೆ ಗಂಟಲುದ್ರವ ಪಡೆದು ವೈದ್ಯಕೀಯ ಪರೀಕ್ಷೆಗೂ ಕಳಿಸಲಾಗಿತ್ತು. ಬುಧವಾರ ರಾತ್ರಿ ಈತನಿಗೆ ಸೋಂಕು ಇರುವುದು ಖಚಿತವಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಜಿಂದಾಲ್‌ನ ವಿದ್ಯಾನಗರ ಪ್ರದೇಶವನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ.