ಬಳ್ಳಾರಿ: ಕೇಂದ್ರ ಸರ್ಕಾರದ ಹಣಕಾಸು ಇಲಾಖೆ ಜವಾಬ್ದಾರಿ ಹೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಚೊಚ್ಚಲ ಬಜೆಟ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವ್ಯಾಪಾರಿಗಳು ಉತ್ತಮ ಯೋಜನೆಗಳನ್ನು ಜಾರಿಗೊಳಿಸಿ ಜನರಿಂದ ವಾಪಸ್ ಪಡೆಯುವ ಬಜೆಟ್ ಆಗಿದೆ ಎಂದು ವಿಶ್ಲೇಷಿಸಿದರೆ, ಕೆಲವರು ಗ್ರಾಮೀಣ ಭಾಗದಲ್ಲಿ ಮನೆಗಳ ನಿರ್ಮಾಣ, ರಸ್ತೆ ಸೇರಿ ಮೂಲಸೌಲಭ್ಯಕ್ಕೆ 100 ಲಕ್ಷ ಕೋಟಿ ರೂ. ಮೀಸಲಿಟ್ಟಿರುವುದು, ಜಿಎಸ್‌ಟಿ ಪಾವತಿಸುವ ಸಣ್ಣ ವ್ಯಾಪಾರಿಗೆ ಪೆನಶನ್ ನೀಡುವುದು ಒಳ್ಳೆಯ ಬೆಳವಣಿಗೆ ಎಂದು ಬಣ್ಣಿಸಿದ್ದಾರೆ.
ಬಜೆಟ್‌ನಲ್ಲಿ 5 ಲಕ್ಷ ರೂ.ಗಳಿಗೆ ಇದ್ದ ತೆರಿಗೆ ವಿನಾಯಿತಿಯನ್ನು ಇದೀಗ 8.5 ಲಕ್ಷ ರೂ.ಗಳಿಗೆ ಹೆಚ್ಚಿಸಿರುವುದು ಸಾಮಾನ್ಯ ಜನರಿಗೆ ಅನುಕೂಲವಾಗಲಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬ್ಯಾಂಕ್‌ಗಳಲ್ಲಿ ಪಡೆದ ಸಾಲಕ್ಕೆ ಮರುಪಾವತಿಸುವ ಬಡ್ಡಿಯಲ್ಲಿ ಶೇ. 2ರಷ್ಟು ವಾಪಸ್ ಕೈಗಾರಿಕೋದ್ಯಮಿಗಳಿಗೆ ಲಭಿಸಲಿದೆ. ಇದು ಸಣ್ಣ, ಮಧ್ಯಮ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವುದು ಒಂದೆಡೆಯಾದರೆ, ಶೇ. 2ರಷ್ಟು ಬಡ್ಡಿ ವಾಪಸ್ ನೀಡುವುದಾಗಿ ಆಸೆ ತೋರಿಸಿ, ಕೈಗಾರಿಕೋದ್ಯಮಿಗಳು ಬ್ಯಾಂಕ್‌ಗಳಿಂದ ಪಡೆದಿರುವ ಸಾಲವನ್ನು ವಾಪಸ್ ಪಡೆದುಕೊಳ್ಳುವ ತಂತ್ರವಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಡಾ| ಡಿ.ಎಲ್.ರಮೇಶ್ ಗೋಪಾಲ್ ವಿಶ್ಲೇಷಿಸಿದ್ದಾರೆ.
ಇನ್ನು ಬಜೆಟ್‌ನಲ್ಲಿ ಇಂಧನ ಚಾಲಿತ ಕಾರುಗಳ ಬಳಕೆಯನ್ನು ನಿಯಂತ್ರಿಸುವ ಸಲುವಾಗಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ 1.5 ಲಕ್ಷ ರೂ. ವಿನಾಯಿತಿ ನೀಡುವುದಾಗಿ ಘೋಷಿಸಲಾಗಿದೆ. ಇದು ಸದ್ಯ ದೇಶದಲ್ಲಿ ಏರಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ನಿಯಂತ್ರಿಸಲು ಒಳ್ಳೆಯ ಯೋಜನೆಯಾಗಿದೆ. ವಿದ್ಯುತ್ ಚಾಲಿತ ವಾಹನಗಳನ್ನು ಬಳಕೆ ಮಾಡುವುದರಿಂದ ಪರಿಸರ ಮಾಲಿನ್ಯದಿಂದ ಮುಕ್ತಗೊಳ್ಳಲಿದೆ. ವಿದ್ಯುತ್ ಚಾಲಿತ ವಾಹನಗಳ ಗಾತ್ರವೂ ಕಡಿಮೆಯಾಗಿರುವುದರಿಂದ ನಗರ ಪ್ರದೇಶಗಳಲ್ಲಿ ದಿನೇದಿನೆ ಹೆಚ್ಚುತ್ತಿರುವ ವಾಹನ ದಟ್ಟಣೆಯೂ ಕಡಿಮೆಯಾಗುತ್ತದೆ. ಇಂಧನ ಚಾಲಿತ ಬೃಹತ್ ವಾಹನಗಳ ಸಂಖ್ಯೆ ನಿಯಂತ್ರಣಗೊಳ್ಳುತ್ತವೆ. ಪೆಟ್ರೋಲ್, ಡೀಸೆಲ್ ಬೆಲೆಯೂ ನಿಯಂತ್ರಣಗೊಳ್ಳಲು ಸಹಕಾರಿಯಾಗುತ್ತದೆ. ಈ ಯೋಜನೆ ಸದ್ಯದ ಮಟ್ಟಿಗೆ ಅಗತ್ಯವಿದ್ದು, ಸಮರ್ಪಕವಾಗಿ ಜಾರಿಗೆಗೊಳ್ಳಬೇಕಿದೆ ಎಂದವರು ತಿಳಿಸಿದರು.
ಉದ್ಯಮಿಗಳಿಗೂ ಪೆನ್‌ಶನ್: ಮೊದಲ ಬಾರಿಗೆ ಕೈಗಾರಿಕೋದ್ಯಮಿಗಳಿಗೂ ಪೆನ್‌ಶನ್ ನೀಡುವುದಾಗಿ ಘೋಷಿಸಲಾಗಿದೆ. ಆದರೆ, ಅಂಥ ಕೈಗಾರಿಕೋದ್ಯಮಿಗಳು ವಾರ್ಷಿಕ ಒಂದೂವರೆ ಕೋಟಿ ರೂಗಳ ವಹಿವಾಟು ನಡೆಸಬೇಕು. ಜತೆಗೆ ಜಿಎಸ್‌ಟಿ ಪಾವತಿಸುತ್ತಿರಬೇಕು. ಅಂತಹ ಕೈಗಾರಿಕೋದ್ಯಮಿಗಳು ನಿವೃತ್ತಿಯಾದ ಬಳಿಕ ಅವರ ಹಿಂದಿನ ಐದು ವರ್ಷಗಳ ವಹಿವಾಟನ್ನು ಪರಿಶೀಲಿಸಿ ಪೆನ್‌ಶನ್ ನೀಡಲಾಗುತ್ತದೆ. ಆದರೆ, ಕೈಗಾರಿಕೋದ್ಯಮಿಗಳ ನಿವೃತ್ತಿಗೆ ವಯಸ್ಸು ನಿಗದಿಗೊಳಿಸಿಲ್ಲ. ಎಷ್ಟು ಪೆನ್‌ಶನ್ ನೀಡಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಈ ಯೋಜನೆಯು ಸಹ ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲಿದೆ.
ಮೂಲಸೌಲಭ್ಯಕ್ಕೆ 100 ಲಕ್ಷ ಕೋಟಿ ರೂ. ಮೀಸಲು: ಇನ್ನು ರಸ್ತೆ ಸೇರಿ ಮೂಲಭೂತ ಸೌಲಭ್ಯಕ್ಕೆ 100 ಲಕ್ಷ ಕೋಟಿ ರೂ. ಮೀಸಲಿಡುವುದಾಗಿ ಘೋಷಿಸಲಾಗಿದೆ. ಇದು ಮುಂದಿನ ಐದು ವರ್ಷಗಳ ಯೋಜನೆಯಾಗಿದೆ. ಇಷ್ಟೊಂದು ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿದಲ್ಲಿ ದೇಶ ನಿರೀಕ್ಷೆಗೂ ಮೀರಿ ಅಭಿವೃದ್ಧಿಯಾಗಲಿದೆ. ಚತುಷ್ಪಥ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳು, ವಿಮಾನ ನಿಲ್ದಾಣ, ಬಂದರುಗಳನ್ನು ನಿರ್ಮಿಸಬಹುದು. ಆದರೆ, ಈ ಯೋಜನೆಗಳು ಸಮರ್ಪಕವಾಗಿ ಜಾರಿಗೆ ಬರಬೇಕಾಗಿದೆ. ಇನ್ನು ರೈತರು ಇಂದು ದುಡಿಯುತ್ತಿರುವ ಆದಾಯ ಐದು ವರ್ಷಗಳಲ್ಲಿ ದ್ವಿಗುಣಗೊಳಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಆ ಆದಾಯವನ್ನು ಹೇಗೆ ಯಾವ ರೀತಿ ದ್ವಿಗುಣಗೊಳಿಸಲಾಗುತ್ತದೆ ಎಂಬುದಕ್ಕೆ ಸ್ಪಷ್ಟತೆಯಿಲ್ಲ ಎಂಬುದು ಕೆಲವರ ವಿಶ್ಲೇಷಣೆಯಾಗಿದೆ.
ಮನೆ ನಿರ್ಮಾಣಕ್ಕೆ 195 ಕೋಟಿ ರೂ.: ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಿಸಲು ಕೇಂದ್ರದ ಬಜೆಟ್‌ನಲ್ಲಿ 195 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಆದರೆ, ಈ ಮನೆಗಳನ್ನು ಕೇವಲ 114 ದಿನಗಳಲ್ಲಿ ನಿರ್ಮಿಸುವುದಾಗಿ ತಿಳಿಸಿರುವುದು ಕುತೂಹಲ ಮೂಡಿಸಿದೆ. ಈ ಮೊದಲು ಕಾಮಗಾರಿ ಚಾಲನೆಯಾದರೆ ಹಲವಾರು ಕೊರತೆಗಳ ನೆಪವೊಡ್ಡಿ ಮನೆ ಪೂರ್ಣಗೊಳ್ಳುವುದರೊಳಗೆ ವರ್ಷಗಳೇ ಉರುಳುತ್ತಿದ್ದವು. ಆದರೆ, ಕೇವಲ 114 ದಿನಗಳಲ್ಲಿ ಮನೆಗಳನ್ನು ಪೂರ್ಣಗೊಳಿಸುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಫಲಾನುಭವಿಗಳಿಗೂ ಅಧಿಕಾರಿಗಳನ್ನು ಗೋಗರೆಯುವುದು ತಪ್ಪುತ್ತದೆ. ಅದೇ ರೀತಿ ಮಹಿಳಾ ಕೈಗಾರಿಕೋದ್ಯಮಿಗಳಿಗೆ ಶೇ. 2ರಷ್ಟು ಬಡ್ಡಿ ವಿನಾಯಿತಿ ನೀಡುವುದಾಗಿ ಘೋಷಣೆಯಾಗಿದೆ. ಇಂಧನ ಬೆಲೆ ಪುನಃ 2ರೂ. ಹೆಚ್ಚಿಸಿರುವುದು ಇತರೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಲಿದೆ. ಎಟಿಎಂ ಕೇಂದ್ರಗಳಲ್ಲಿ ವರ್ಷಕ್ಕೆ 1 ಕೋಟಿ ರೂ. ಡ್ರಾ ಮಾಡಿದರೆ ಶೇ. 2ರಷ್ಟು (20 ಸಾವಿರ ರೂ.) ತೆರಿಗೆ ವಿಧಿಸಲಾಗುತ್ತದೆ. ಚಿನ್ನದ ಮೇಲೆ ಶೇ. 12ರಷ್ಟು ತೆರಿಗೆ ಹೆಚ್ಚಿಸಲಾಗಿದ್ದು, ಇದೊಂದು ದುಬಾರಿ ಬಜೆಟ್ ಅಗಲಿದೆ ಎಂದು ವ್ಯಾಪಾರಿಗಳು, ಉದ್ಯಮಿಗಳು ವಿಶ್ಲೇಷಿಸಿದ್ದಾರೆ.