ಬಳ್ಳಾರಿ: ವಸತಿ ತೆರಿಗೆ, ಕುಡಿವ ನೀರು, ಶೌಚಾಲಯ ಸೇರಿ ಬಳ್ಳಾರಿ ಮಹಾನಗರ ಪಾಲಿಕೆ ವಿಧಿಸುವ ಹಲವು ಬಗೆಯ ತೆರಿಗೆಗಳನ್ನು ಪಾವತಿಸುತ್ತಿರುವ ಸಾರ್ವಜನಿಕರು ಇದೀಗ ವಾಹನಗಳ ಮೇಲೂ ವಿಧಿಸುವ ಮೂಲಸೌಕರ್ಯ ತೆರಿಗೆಯನ್ನು ಭರಿಸಲು ಸಜ್ಜಾಗಬೇಕಿದೆ.
Advertisement
ಹೌದು….! ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಷ್ಟು ವರ್ಷಗಳ ಕಾಲ ಇಲ್ಲದ ವಾಹನಗಳ ಮೂಲಸೌಕರ್ಯ ಉಪಕರವನ್ನು ಇದೀಗ ಹೊಸದಾಗಿ ವಿಧಿಸಲಾಗುತ್ತಿದ್ದು, ವರ್ಷಕ್ಕೊಮ್ಮೆ ವಾಹನಗಳ ಮಾಲೀಕರ ಜೇಬಿಗೆ ಕತ್ತರಿ ಬೀಳಲಿದೆ. ವಾಹನಗಳ ಮೇಲೆ ಮೂಲಸೌಕರ್ಯ ಉಪಕರವನ್ನು ವಿಧಿಸುವಂತೆ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಸೂಚನೆ ಮೇರೆಗೆ ಇಲ್ಲಿನ ಮಹಾನಗರ ಪಾಲಿಕೆ ಆಯುಕ್ತರು ನ. 13ರಂದು ಆದೇಶ ಹೊರಡಿಸಿದ್ದಾರೆ.
Related Articles
Advertisement
ಆರ್‌ಟಿಒ ವಿಧಿಸಿಲ್ಲ: ವಾಹನಗಳನ್ನು ಹೊಸದಾಗಿ ಖರೀದಿಸಿದಾಗ ನೋಂದಣಿಗಾಗಿ ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಇಲಾಖೆಗೆ ಕೊಂಡೊಯ್ದಾಗ ಅಲ್ಲಿಯೂ ಮೂಲಸೌಕರ್ಯ ಉಪಕರವನ್ನು ಮಾಲೀಕರಿಂದ ವಸೂಲಿ ಮಾಡಬೇಕಿತ್ತು. ಆದರೆ, ಇಲ್ಲಿನ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ವಾಹನಗಳ ಬೆಲೆಗಷ್ಟೇ ತೆರಿಗೆ ಪಡೆಯಲಾಗುತ್ತಿದೆ. ಉಪಕರವನ್ನು ಸಂಗ್ರಹಿಸುವ ಪದ್ಧತಿ ಅಲ್ಲಿಯೂ ಸ್ಥಗಿತಗೊಂಡಿದೆ. ಹೀಗಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಈ ಕುರಿತು ಸ್ಪಷ್ಟಪಡಿಸಿಕೊಂಡು ಈ ಆದೇಶವನ್ನು ಹೊರಡಿಸಲಾಗಿದೆ.
ಇನ್ನುಮುಂದೆ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲೂ ವಾಹನ ನೋಂದಣಿ ವೇಳೆ ಕರ ವಿಧಿಸುವಂತೆ ಸೂಚಿಸಲಾಗುವುದು. ಅಲ್ಲಿ ಪಾವತಿಸಿರುವ ಬಗ್ಗೆ ಬಿಲ್‌ಗಳನ್ನು ಮನೆಗೆ ಬರುವ ಕರವಸೂಲಿಗಾರರಿಗೆ ತೋರಿಸಬಹುದು.
ಯಾವ ವಾಹನಗಳಿಗೆ ಎಷ್ಟೆಷ್ಟು ಉಪಕರ: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ದ್ವಿಚಕ್ರ ವಾಹನಕ್ಕೆ 50 ರೂ, ಮೂರು ಚಕ್ರ ವಾಹನ 100 ರೂ, ನಾಲ್ಕು ಚಕ್ರ ವಾಹನ 300 ರೂ, ಪ್ರಯಾಣಿಕರನ್ನು ಸಾಗಿಸುವ ವಾಹನಗಳಿಗೆ 400 ರೂ., ಸರಕು ಸಾಗಾಣಿಕಾ ವಾಹನಗಳಿಗೆ 500 ರೂ.ಗಳ ಉಪಕರವನ್ನು ನಿಗ ಪಡಿಸಲಾಗಿದೆ. ವರ್ಷಕ್ಕೊಮ್ಮೆ ವಾಹನಗಳ ಮೇಲೆ ಈ ಉಪಕರವನ್ನು ಮಾಲೀಕರು ಪಾವತಿಸಬೇಕಿದೆ. ಬಳ್ಳಾರಿ ಮಹಾನಗರ ಪಾಲಿಕೆಯು ಮನೆ ತೆರಿಗೆ, ಕುಡಿವ ನೀರಿನ ತೆರಿಗೆಯನ್ನೇ ಸಮರ್ಪಕವಾಗಿವಸೂಲಿ ಮಾಡದ ಪಾಲಿಕೆ ಸಿಬ್ಬಂದಿ, ಇದೀಗ ಹೊಸದಾಗಿ ವಾಹನಗಳ ಮಾಲೀಕರಿಂದ ಉಪಕರ ವಸೂಲಿಯನ್ನು ಎಷ್ಟರ ಮಟ್ಟಿಗೆ ಯಶಸ್ವಿಗೊಳಿಸುತ್ತಾರೋ ಅಥವಾ ಉಪಕರವನ್ನು ಪಾವತಿಸದಿದ್ದಲ್ಲಿ ಅಂತಹ ವಾಹನಗಳ ಮಾಲೀಕರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಹಾಗಾಗಿ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿ ಮಟ್ಟಿಗೆ ಈ ಉಪಕರ ಸಂಗ್ರಹ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಕಾದು ನೋಡಬೇಕಾಗಿದೆ.