ಬಳ್ಳಾರಿ: ಯೋಗಾಸನದಿಂದ ಆರೋಗ್ಯ ವೃದ್ಧಿಸಿಕೊಳ್ಳವುದರ ಜತೆಗೆ ಮಾನಸಿಕ ಹಾಗೂ ದೈಹಿಕವಾಗಿಯೂ ಸದೃಢವಾಗಿರಬಹುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.
ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಸರ್ಕಾರಿ ತಾರಾನಾಥ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ 5ನೇ ವರ್ಷದ ವಿಶ್ವ ಯೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಜೂ.21, ವರ್ಷದ ಅತ್ಯಂತ ದೀರ್ಘ ಹಗಲು ಇರುವ ದಿನವೆಂದು ಹೇಳಲಾಗಿದೆ. ಜಗತ್ತಿನ ಅತಿಹೆಚ್ಚು ಭೂ ಭಾಗದಲ್ಲಿ ಅಂದು ಸೂರ್ಯನ ಕಿರಣಗಳು ಬೀಳುತ್ತವೆ. ಸೂರ್ಯನು ಜ್ಞಾನದ ಹಾಗೂ ಆರೋಗ್ಯದ ಅಧಿಪತಿ ಎಂದು ನಮ್ಮ ದೇಶದ ಋಷಿ ಮುನಿಗಳು ಸಾರಿದ್ದಾರೆ. ಅದಕ್ಕಾಗಿ ವಿಶ್ವಸಂಸ್ಥೆಯು 2015ರಲ್ಲಿ ಜೂ.21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಎಂದು ಘೋಷಿಸಿದ್ದು, ಇದೀಗ 5ನೇ ವರ್ಷದ ಯೋಗ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಜಾಗತಿಕ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯ ಎಂದರೆ ಕೇವಲ ದೈಹಿಕವಾಗಿ ಅನಾರೋಗ್ಯವಿಲ್ಲದ ಸ್ಥಿತಿ ಅಲ್ಲ, ಬದಲಿಗೆ ಅದು ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ವ್ಯಕ್ತಿಯು ನೆಮ್ಮದಿಯಿಂದ ಇರುವ ಸ್ಥಿತಿ. ಯೋಗಾಭ್ಯಾಸದಿಂದ ನಮ್ಮ ದೈಹಿಕ, ಮಾನಸಿಕ ಸಾಮರ್ಥ್ಯ ವೃದ್ಧಿಸುತ್ತದೆ. ರೋಗ ಪ್ರತಿರೋಧಕ ಶಕ್ತಿ ಹೆಚ್ಚುವುದರ ಜತೆಗೆ ನಿರ್ಭಯ ಆಂತರಿಕ ಆರೋಗ್ಯಪೂರ್ಣ ಬದುಕಿಗೆ ಯೋಗ ಅತ್ಯುತ್ತಮ ಸಾಧನ ಎಂದು ತಿಳಿಸಿದರು.
ವಿಶ್ವಸಂಸ್ಥೆಯು ತನ್ನ 69ನೇ ಸಾಮಾನ್ಯ ಸಭೆಯಲ್ಲಿ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನವಾಗಿ ಘೋಷಿಸಿರುವುದು ಎಲ್ಲಾ ಭಾರತೀಯರಿಗೆ ಹಾಗೂ ಜಗತ್ತಿನೆಲ್ಲಾ ಯೋಗಪ್ರೇಮಿಗಳಿಗೆ ಹೆಮ್ಮೆಯ ಸಂಗತಿ ಎಂದರು.
ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ ಮಾತನಾಡಿ, ಪ್ರಸ್ತುತ ಯಾಂತ್ರಿಕ ಜೀವನದಲ್ಲಿ ಹೆಚ್ಚುತ್ತಿರುವ ಒತ್ತಡ ನಿಯಂತ್ರಿಸಲು ಯೋಗ ಸಾಧನೆಯಿಂದ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೆ ತಮ್ಮ ಆರೋಗ್ಯದತ್ತಲೂ ಸ್ವಲ್ಪ ಸಮಯ ಮೀಸಲಿಟ್ಟು, ಯೋಗಾಭ್ಯಾಸ ಮಾಡುವತ್ತ ಗಮನ ಹರಿಸಬೇಕು ಎಂದರು.
ಸರ್ಕಾರಿ ತಾರಾನಾಥ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಾದ ನವೀನ್, ಲಕ್ಷಣ, ಐಶರ್ಯ, ದರ್ಶಿನಿ, ಶ್ವೇತಾ, ಸಹನಾ ತಂಡದವರ ಸಾಮೂಹಿಕ ಯೋಗಾಸನ ಗಮನ ಸೆಳೆಯಿತು. ಬಳಿಕ ಜಾಥಾ ಕಾರ್ಯಕ್ರಮ ನಡೆಯಿತು. ಜಿಪಂ ಸಿಇಒ ಕೆ.ನಿತೀಶ್, ಎಸ್‌ಪಿ ಲಕ್ಷ ್ಮಣ ನಿಂಬರಗಿ, ಎಎಸ್‌ಪಿ ಬಿ.ಎಸ್.ಲಾವಣ್ಯ, ಪಾಲಿಕೆ ಆಯುಕ್ತೆ ತುಷಾರಮಣಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ವಂದನಾ ಜೆ. ಗಾಳಿಯವರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಇತರರು ಇದ್ದರು.