ಬಳ್ಳಾರಿ: ಪರಿಶಿಷ್ಟ ಪಂಗಡ (ಎಸ್ಟಿ)ಸಮುದಾಯದಕ್ಕೆ ಶೇ.7.5ರಷ್ಟು ಮೀಸಲಾತಿ ನೀಡಬೇಕು. ಪರಿಶಿಷ್ಟ ಪಂಗಡಕ್ಕೆ ಯಾವುದೇ ಸಮುದಾಯವನ್ನು ಸೇರಿಸಬಾರದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಾಲ್ಮೀಕಿ ಎಸ್‌ಟಿ ಮೀಸಲಾತಿ ಹೋರಾಟ ಸಮಿತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಕೇಂದ್ರದಲ್ಲಿ ಪರಿಶಿಷ್ಟ ಪಂಗಡಕ್ಕೆ ರಾಜಕೀಯವಾಗಿ ಶೇ.7.5ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದರೆ ರಾಜ್ಯದಲ್ಲಿ ಶಿಕ್ಷಣ, ಉದ್ಯೋಗ ಸೇರಿದಂತೆ ಸರ್ಕಾರಿ ಸೌಲಭ್ಯಗಳಿಗೆ ಕೇವಲ ಶೇ.3ರಷ್ಟು ಮಾತ್ರ ಮೀಸಲಾತಿ ಕಲ್ಪಿಸಲಾಗುತ್ತಿದೆ. ಇದರಿಂದ ವಾಲ್ಮೀಕಿ ಸಮುದಾಯ ಸೇರಿದಂತೆ ಪರಿಶಿಷ್ಟ ಪಂಗಡ ವ್ಯಾಪ್ತಿಯಲ್ಲಿ ಬರುವ ಸಮುದಾಯದವರಿಗೆ ನಾನಾ ರೀತಿಯ ಅನ್ಯಾಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಸಂವಿಧಾನದ ಅನುಚ್ಛೇದ 340, 341 ಹಾಗೂ 342 ಪ್ರಕಾರ ಜಾತಿ ಜನಸಂಖ್ಯೆಗನುಗುಣವಾಗಿ ಮೀಸಲಾತಿ ನೀಡುವುದು ಸಾಮಾಜಿಕ ನ್ಯಾಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಕೇಂದ್ರ ಸರ್ಕಾರ ನೀಡುವ ಮಾದರಿಯಲ್ಲಿ ಶೇ.7.5ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ಕಳೆದ 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಎಸ್ಟಿ ಸಮುದಾಯದವರು 42,48,987 ರಷ್ಟಿದ್ದಾರೆ. ಜನಗಣತಿ ನಡೆದು 8 ವರ್ಷಗಳು ಕಳೆದಿದ್ದು, ಬಹುತೇಕ ಶೇ.7ರಷ್ಟು ಜನಸಂಖ್ಯೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ವಿವಿಧ ಹುದ್ದೆಗಳಿಗೆ ನಡೆಯುತ್ತಿರುವ ನೇಮಕಾತಿ, ಬಡ್ತಿಯಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳ ಪ್ರವೇಶಗಳಲ್ಲಿ ಕೇವಲ ಶೇ.3ರಷ್ಟು ಮಾತ್ರ ಮೀಸಲಾತಿ ಕಲ್ಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ವರ್ಗದವರು ಸುಮಾರು ವರ್ಷಗಳಿಂದ ನಾನಾ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಕೂಡಲೇ ರಾಜ್ಯ ಸರ್ಕಾರ ನಿಗದಿಪಡಿಸಿದ ಶೇ.3ರಷ್ಟು ಮೀಸಲಾತಿ ಶೇ.7.5ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಕೆಲ ಸಮುದಾಯದವರು ಪರಿಶಿಷ್ಟ ವರ್ಗದ ಪಟ್ಟಿಯಲ್ಲಿರುವ ಹೆಸರುಗಳನ್ನು ಬಳಕೆ ಮಾಡಿಕೊಂಡು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕೂಡಲೇ ಈ ಕುರಿತು ಸರ್ಕಾರ ಗಮನಹರಿಸಿ ಇದಕ್ಕೆ ಕಡಿವಾಣ ಹಾಕಬೇಕು. ಅರ್ಹರಲ್ಲದವರು ಪಡೆದ ಪ್ರಮಾಣ ಪತ್ರಗಳನ್ನು ರದ್ದುಪಡಿಸಬೇಕು. ಸುಳ್ಳು ಪ್ರಮಾಣ ಪತ್ರ ಪಡೆಯುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು. ಸಮುದಾಯದ ಅಭಿವೃದ್ಧಿಗೆ ಕೂಡಲೇ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ತಾಪಂ ಸದಸ್ಯ ಬೋಗರಾಜ, ಮುಖಂಡರಾದ ಕಮಲ ಮರಿಸ್ವಾಮಿ, ತಿಮ್ಮಪ್ಪ ಜೋಳದ ರಾಶಿ, ವಿ.ಕೆ.ಬಸಪ್ಪ, ಸದಾಶಿವಪ್ಪ, ಮೀನಳ್ಳಿ ತಾಯಣ್ಣ ಸೇರಿದಂತೆ ಸಮುದಾಯದ ನೂರಾರು ಮುಖಂಡರು ಇದ್ದರು.