ಸರ್ಕಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪೂರ್ಣಗೊಳಿಸಲಿ: ಜನಾರ್ದನ ರೆಡ್ಡಿ
Team Udayavani, Jun 13, 2019, 11:47 AM IST
ಬಳ್ಳಾರಿ: ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಮಾಜಿ ಸಚಿವ ಜನಾರ್ದನರೆಡ್ಡಿ ಮಾತನಾಡಿದರು.
ಬಳ್ಳಾರಿ: ನ್ಯಾಯಾಲಯದ ಅನುಮತಿ ಮೇರೆಗೆ ಬಳ್ಳಾರಿಗೆ ಆಗಮಿಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಬುಧವಾರ ಸ್ಥಳೀಯ ದೇವಾಲಯಕ್ಕೆ ಭೇಟಿ ನೀಡಿದರಲ್ಲದೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡರು.
ನಗರ ಹೊರವಲಯದಲ್ಲಿರುವ ಕೋಟಿ ಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಸಹೋದರ, ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಮತ್ತು ಆಪ್ತರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ದೇವಸ್ಥಾನದಲ್ಲಿ ಆಯೋಜಿಸಿದ್ದ ಚಂಡಿಕಾ ಹೋಮದಲ್ಲಿ ಪಾಲ್ಗೊಂಡರು.
ನಂತರ ನಗರದ ಕೌಲ್ಬಜಾರ್ ಪ್ರದೇಶದ 24ನೇ ವಾರ್ಡ್‌ನಲ್ಲಿ ಪಾಲಿಕೆ ಸದಸ್ಯ ಗೋವಿಂದರಾಜುಲು ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಉಚಿತ ಕಣ್ಣಿನ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನನ್ನ ಬಹುದಿನದ ಕನಸಿನ ಕೂಸು. ಈಗಾಗಲೇ ನೂರು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಹಾಲಿ ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಅವರು ಅದನ್ನು ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಒದಗಿಸುವ ಮೂಲಕ ಪುಣ್ಯಕಟ್ಟಿಕೊಳ್ಳಲಿ ಎಂದು ಮನವಿ ಮಾಡಿದರು.
ನಾನು ಬಳ್ಳಾರಿಯಲ್ಲೇ ಇದ್ದಿದ್ದರೆ ಆಸ್ಪತ್ರೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದೆ. ಆದರೆ, ಭಗವಂತ ನನಗೆ ಆ ಭಾಗ್ಯ ಕಲ್ಪಿಸಿಲ್ಲ. ಹೀಗಾಗಿ, ನನ್ನ ಪರವಾಗಿ ಶಾಸಕರಾದ ಬಿ.ಶ್ರೀರಾಮುಲು, ಜಿ.ಸೋಮಶೇಖರರೆಡ್ಡಿ ಅವರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಡುವಂತೆ ಸೂಚಿಸಿದ್ದೇನೆ ಎಂದರು.
ನಾಗೇಂದ್ರ ನನ್ನ ಸಹೋದರ ಇದ್ದಂತೆ:
ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೌಲ್ಬಜಾರ್ ಪ್ರದೇಶಕ್ಕೆ ಈ ಮೊದಲು ಬಿ.ಶ್ರೀರಾಮುಲು ಶಾಸಕರಾಗಿದ್ದರು. ಇದೀಗ ಬಿ.ನಾಗೇಂದ್ರ ಶಾಸಕರಾಗಿದ್ದಾರೆ. ಅವರು ನನ್ನ ಸಹೋದರನಿದ್ದಂತೆ. ನನ್ನ ಮಾತುಗಳನ್ನು ತೆಗೆದು ಹಾಕಲ್ಲ. ನಾನು ಹೇಳಿದಂತೆ ಕೇಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಹತ್ತು ವರ್ಷಗಳ ಬಳಿಕ ಬಳ್ಳಾರಿಯ ಕೌಲ್ಬಜಾರ್‌ನಲ್ಲಿ ಮೈಕ್ ಹಿಡಿದು ಮಾತನಾಡುತ್ತಿದ್ದೇನೆ ಎಂದ ಜನಾರ್ದನರೆಡ್ಡಿ, ಬಳ್ಳಾರಿ ನಗರ ಸೇರಿ ಜಿಲ್ಲೆಯ ಬಡಜನರಿಗೆ ಉತ್ತಮ, ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಕೊಡಿಸಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲಾಗಿತ್ತು. ಅದು ಇಂದು ನನೆಗುದಿಗೆ ಬಿದ್ದಿದೆ. ರಾಜ್ಯ ಸರ್ಕಾರ ಅದನ್ನು ಪೂರ್ಣಗೊಳಿಸುವ ಕೆಲಸ ಮಾಡಿಲ್ಲ. ಆಸ್ಪತ್ರೆಯ ನಿರ್ಮಾಣ ಕಾಮಗಾರಿ ಮುಗಿದಿವೆ. ಪರಿಕರಗಳನ್ನು ಹಾಕಿಸಬೇಕಿದೆ. ಆಸ್ಪತ್ರೆ ಪ್ರಾರಂಭಕ್ಕಾಗಿ ಶ್ರೀರಾಮುಲು, ಸೋಮಶೇಖರರೆಡ್ಡಿ ಹಾಗೂ ಶಾಸಕರು ರಾಷ್ಟ್ರೀಯ ಹೆದ್ದಾರಿ ತಡೆದು ಹೋರಾಟ ಮಾಡಬೇಕಿದೆ. ಮುಖ್ಯಮಂತ್ರಿಗಳು ಬಂದು ಕೆಲಸ ಪ್ರಾರಂಭಿಸುವವರೆಗೂ ಧರಣಿ ಮಾಡಬೇಕು ಎಂದರು.
ಶಾಸಕ ಜಿ.ಸೋಮಶೇಖರರೆಡ್ಡಿ ಮಾತನಾಡಿ, ಹಿಂದುಳಿದ ಬಳ್ಳಾರಿ ಜಿಲ್ಲೆ ಜನಾರ್ದನರೆಡ್ಡಿ ಅವಧಿಯಲ್ಲಿ ಅಭಿವೃದ್ಧಿ ಕಂಡಿತ್ತು. ಜಿಲ್ಲೆಗೆ ಮೂಲಸೌಕರ್ಯ ಒದಗಿಸಿದ ಮಂತ್ರಿ ನನ್ನ ಸಹೋದರ ಎಂದು ಹೇಳಿದರು.
ಕಲ್ಯಾಣ ಸ್ವಾಮಿ ಮಾತನಾಡಿ, ಸಂಪತ್ತಿಗಿಂತಲೂ ಆರೋಗ್ಯ ಬಹಳ ಮುಖ್ಯ. ಜನಾರ್ದನ ರೆಡ್ಡಿ ಜನಗಳ ರೆಡ್ಡಿ, ಹೇಮರೆಡ್ಡಿ ಮಲ್ಲಮ್ಮನಂತೆ ಪ್ರಸಿದ್ಧರಾಗಿದ್ದಾರೆ ಎಂದರು. ಜನಾರ್ದನರೆಡ್ಡಿ ಸೋಮಶೇಖರರೆಡ್ಡಿ, ಶ್ರೀರಾಮುಲು ಅವರು ನನಗೆ ರಾಜಕೀಯ ಕಲಿಸಿಲ್ಲ. ಬಡಜನರ ಸೇವೆ ಮಾಡುವುದನ್ನು ಕಲಿಸಿದ್ದಾರೆ ಎಂದು ಪಾಲಿಕೆ ಸದಸ್ಯ ಗೋವಿಂದರಾಜುಲು ಹೇಳಿದರು. ವೈದ್ಯರಾದ ಡಾ|ನಾಗರಾಜ್, ಡಾ|ಮಹಿಪಾಲ್, ನೂರ್ ಸಾಬ್, ಫಾದರ್ ಹೆನ್ರಿ ಡಿಸೋಜಾ ಬಿಷಪ್, ಖಾನ್ ಸಾಬ್, ಅಶೋಕ ಇತರರು ಇದ್ದರು.