ಬಳ್ಳಾರಿ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ರಾಜ್ಯದಲ್ಲೇ ಮೊದಲ ಬಾರಿ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ ಆರಂಭಿಸಲಾಗುತ್ತಿದ್ದು, ಮುಂದಿನ ತಿಂಗಳು ಜುಲೈ 1 ರಿಂದ ಚಾಲನೆ ಪಡೆದುಕೊಳ್ಳಲಿದೆ ಎಂದು ಸಂಸ್ಥೆ ಅಧ್ಯಕ್ಷ ಡಾ| ಡಿ.ಎಲ್.ರಮೇಶ್‌ಗೋಪಾಲ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಮೊದಲು 7 ಕೌಶಲ್ಯ ತರಬೇತಿಗಳನ್ನು ಆರಂಭಿಸಲಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಸಂವಹನ ಅತ್ಯಂತ ಮುಖ್ಯ. ಬಹುತೇಕ ಯುವಕರಲ್ಲಿ ಆಂಗ್ಲಭಾಷೆಯ ಕೊರತೆಯಿದೆ. ಮುಂದಿನ ದಿನಗಳಲ್ಲಿ ಜೀವನಕ್ಕೆ ಇಂಗ್ಲಿಷ್ ಅತ್ಯಂತ ಮುಖ್ಯ. ಹಾಗಾಗಿ 4 ತಿಂಗಳ ಕಾಲ ಕೇಂದ್ರದಲ್ಲಿ ನ್ಪೋಕನ್ ಇಂಗ್ಲಿಷ್ ತರಬೇತಿ ಹೇಳಿಕೊಡಲಾಗುತ್ತಿದ್ದು, ಕೇವಲ 1000 ರೂ. ಶುಲ್ಕ ನಿಗದಿಪಡಿಸಲಾಗಿದೆ. 2 ತಿಂಗಳ ಬೇಸಿಕ್ ಕಂಪ್ಯೂಟರ್ ತರಬೇತಿಗೆ 750 ರೂ., 1ತಿಂಗಳ ಅಡ್ವಾನ್ಸ್‌ಡ್ ಎಕ್ಸೆಲ್ ತರಬೇತಿಗೆ 750 ರೂ., 45 ದಿನಗಳ ಟ್ಯಾಲಿ ಏಸ್ ಜಿಎಸ್‌ಟಿ ಮತ್ತು ಟ್ಯಾಲಿ ಕಂಪನಿ ಪ್ರಮಾಣ ಪತ್ರಕ್ಕೆ 1500ರೂ,, ಆಟೊ ಕ್ಯಾಡ್ ಎಸೆನ್ಷಿಯಲ್ ವಿತ್ ಕ್ಯಾಡ್ ಸೆಂಟರ್ ಪ್ರಮಾಣ ಪತ್ರಕ್ಕೆ 2500 ರೂ., 1 ತಿಂಗಳ ವೃತ್ತಿನಿರತ ಫೋಟೋಗ್ರಫಿ ತರಬೇತಿಗೆ 1000 ರೂ., 2 ತಿಂಗಳ ಸಂಗೀತ ಪರಿಕರಗಳ ತರಬೇತಿಗೆ 2500 ರೂ. ಶುಲ್ಕ ನಿಗದಿಪಡಿಸಲಾಗಿದೆ. ಆಸಕ್ತರು ಜೂನ್ 25 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಪ್ರತಿ ತರಬೇತಿಗೆ ಅತ್ಯಂತ ಕಡಿಮೆ ಶುಲ್ಕ ನಿಗದಿಪಡಿಸಲಾಗಿದೆ. ಒಂದು ವೇಳೆ ಈ ಶುಲ್ಕ ಕಟ್ಟಲಾಗದ ಬಡ ಯುವಕ-ಯುವತಿಯರು ಇದ್ದಲ್ಲಿ ಅಂತಹವರ ಶುಲ್ಕವನ್ನು ಭರಿಸುವ ದಾನಿಗಳನ್ನು ನಾವು ಗುರುತಿಸಲಾಗಿದ್ದು, ಅಗತ್ಯವಿದ್ದಲ್ಲಿ ಶುಲ್ಕ ಪಾವತಿಸಲಿದ್ದಾರೆ. ಪ್ರಸ್ತುತ ದಿನಗಳಲ್ಲಿ ಕೌಶಲ್ಯದ ಕೊರತೆಯಿಂದ ಇಂಜಿನಿಯರಿಂಗ್ ಮುಗಿಸಿದ ಪ್ರತಿ 100 ಜನರಲ್ಲಿ ಕೇವಲ 16 ಜನರು ಮಾತ್ರ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ. ವೈದ್ಯರಲ್ಲಿ ಈ ಸಂಖ್ಯೆ ಕೇವಲ 9 ಇದೆ. ಹಾಗಾಗಿ ಕೌಶಲ್ಯ ಎಂಬುದು ಅತ್ಯಂತ ಮುಖ್ಯ ಎಂದು ತಿಳಿಸಿದರು.
ದೇಶದಲ್ಲಿ ಪ್ರತಿವರ್ಷ ಒಂದರಿಂದ ಒಂದೂವರೆ ಕೋಟಿ ಯುವಕ-ಯುವತಿಯರು ಎಸ್‌ಎಸ್‌ಎಲ್ಸಿ, ಪಿಯುಸಿ ಪಾಸಾಗಿ ಹೊರ ಬರುತ್ತಿದ್ದು, ಮಾರುಕಟ್ಟೆಯಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳಿಗೆ ಇಷ್ಟೊಂದು ಜನರಿಗೆ ಕೆಲಸ ನೀಡಲು ಸಾಧ್ಯವಿಲ್ಲ. ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗವಿದೆಯಾದರೂ, ಈ ಯುವಕ-ಯುವತಿಯರಲ್ಲಿ ಕೆಲಸಕ್ಕೆ ತಕ್ಕಂತಹ ಕೌಶಲ್ಯವಿಲ್ಲ. ಹಾಗಾಗಿ ಉದ್ಯೋಗ ದೊರೆಯುವ ಗುಣಮಟ್ಟದ ಕೌಶಲ್ಯವನ್ನು ಸಂಸ್ಥೆಯಿಂದ ಕೊಡಿಸುವ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸಂಸ್ಥೆಯ ಜಿಲ್ಲಾ ಸಂಯೋಜಕರ ಸಂಘದ ರಾಜ್ಯಾಧ್ಯಕ್ಷ ಯಶ್ವಂತರಾಜ್, ಕಾರ್ಯದರ್ಶಿ ಗಾದೆಂ ಗೋಪಾಲಕೖಷ್ಣ, ಸೊಂತಗಿರಿಧರ್, ಗುತ್ತಾ ಚಂದ್ರಶೇಖರ್, ಸುರೇಶ್‌ಬಾಬು, ದೀಪಕ್, ಚನ್ನಪ್ಪ, ರಾಮಚಂದ್ರ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.