Advertisement

ಸರ್ವಜ್ಞರ ಆದರ್ಶ ಅಳವಡಿಸಿಕೊಳ್ಳಿ

11:41 AM Feb 23, 2020 | Naveen |

ಬಳ್ಳಾರಿ: ಶರಣರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗಬಾರದು. ಅವರ ವ್ಯಕ್ತಿತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಹಶೀಲ್ದಾರ್‌ ಯು. ನಾಗರಾಜ್‌ ಹೇಳಿದರು.

Advertisement

ನಗರದ ಜೋಳದರಾಶಿ ಡಾ| ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂತಕವಿ ಸರ್ವಜ್ಞರ 500ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕನ್ನಡ ಸಾಹಿತ್ಯದಲ್ಲಿ ತ್ರಿಪದಿಗಳ ಬ್ರಹ್ಮ ಸರ್ವಜ್ಞರ ವಿಚಾರಗಳು, ಅವರ ತತ್ವಗಳನ್ನು ಹಾಗೂ ಜೀವನಶೈಲಿ ಮಾರ್ಗಗಳನ್ನು ತಿಳಿದು ಅವುಗಳನ್ನು ಮಕ್ಕಳಲ್ಲಿ ಅಳವಡಿಸುವ ಕಾರ್ಯವನ್ನು ಪೋಷಕರು ಮಾಡಬೇಕು. ಕುಂಬಾರ ಸಮುದಾಯವು ತನ್ನ ಏಳಿಗೆಗಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢರಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಹಾಗೂ ಶರಣರ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಅವರು ಹೇಳಿದರು.

ಸಂತಕವಿ ಸರ್ವಜ್ಞ ಕುರಿತು ದಾವಣಗೆರೆಯ ಹಿರಿಯ ಸಾಹಿತಿ ಹಾಗೂ ಖ್ಯಾತ ಸಂಶೋಧಕ ಮಂಜಪ್ಪ ಕುಂಬಾರ ವಿಶೇಷ ಉಪನ್ಯಾಸ ನೀಡಿದರು. ಕೆ.ದೊಡ್ಡಬಸಪ್ಪ ಅವರ ವಚನ ಗಾಯನ ಜನರ ಗಮನಸೆಳೆಯಿತು. ಸಂತಕವಿ ಸರ್ವಜ್ಞರ ಜೀವನ-ಸಾಧನೆಯನ್ನು ಬಿಂಬಿಸುವ ಕಿರು ಪುಸ್ತಕಗಳನ್ನು ಇದೇ ಸಂದರ್ಭದಲ್ಲಿ ಗಣ್ಯರು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ.ರಂಗಣ್ಣವರ, ಜಿಲ್ಲಾ ಕುಂಬಾರರ ಶಾಲಿವಾಹನ ಸಂಘದ ಜಿಲ್ಲಾಧ್ಯಕ್ಷ ಕೆ. ರಂಗಸ್ವಾಮಿ, ಕುಂಬಾರ ಸಂಘದ ಅಧ್ಯಕ್ಷ ಕೆ. ಸಿದ್ದಪ್ಪ, ಕುಂಬಾರ ಸಮಾಜದ ಮುಖಂಡ ಕೆ.ಯರ್ರಿಸ್ವಾಮಿ, ಕುಂಬಾರ ಸಮುದಾಯದ ಹಾಗೂ ವಿವಿಧ ಸಮುದಾಯಗಳ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.

Advertisement

ಗಮನ ಸೆಳೆದ ಮೆರವಣಿಗೆ: ಸಂತಕವಿ ಸರ್ವಜ್ಞ ಜಯಂತಿ ಅಂಗವಾಗಿ ನಗರದ ಮುನಿಸಿಪಲ್‌ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಸರ್ವಜ್ಞರ ಬೃಹತ್‌ ಭಾವಚಿತ್ರದ ಮೆರವಣಿಗೆ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್‌ ಕೆ. ರಂಗಣ್ಣವರ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮೆರವಣಿಗೆಯು ಮುನ್ಸಿಪಲ್‌ ಕಾಲೇಜು ಮೈದಾನದಿಂದ ಪ್ರಾರಂಭವಾಗಿ ಗಡಗಿ ಚನ್ನಪ್ಪ ವೃತ್ತದ ಮಾರ್ಗವಾಗಿ ಎಚ್‌.ಆರ್‌. ಗವಿಯಪ್ಪ ವೃತ್ತದ ಮೂಲಕ ಡಾ| ಜೋಳದರಾಶಿ ದೊಡ್ಡನಗೌಡ ರಂಗಮಂದಿರಕ್ಕೆ ತಲುಪಿತು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳ ಹಾಗೂ ವೇಷಧಾರಿಗಳ ಪ್ರದರ್ಶನಗಳು ಜನರ ಗಮನಸೆಳೆದವು. ಮೆರವಣಿಗೆಯಲ್ಲಿ ಜಿಲ್ಲಾ ಕುಂಬಾರ ಶಾಲಿವಾಹನ ಸಂಘದ ಜಿಲ್ಲಾಧ್ಯಕ್ಷ ಕೆ.ರಂಗಸ್ವಾಮಿ, ವಿವಿಧ ಇಲಾಖೆಯ ಅಧಿಕಾರಿಗಳು, ಕುಂಬಾರ ಸಮುದಾಯದ ಮುಖಂಡರು, ಜನರು ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಮತ್ತು ಇತರೆ ಗಣ್ಯವ್ಯಕ್ತಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next