Advertisement

ಬಣ್ಣದ ಲೋಕ ಅನಾವರಣಗೊಳಿಸಿದ ರಂಗೋಲಿ ಚಿತ್ತಾರ

12:00 PM Jan 17, 2020 | Naveen |

ಬಳ್ಳಾರಿ: ನಗರದ ಸತ್ಯನಾರಾಯಣ ಪೇಟೆಯಲ್ಲಿನ ಎಂಎಂಟಿಸಿ ಉದ್ಯಾನವನದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಸಂಕ್ರಾಂತಿ ಸೊಗಡು ಮೇಳೈಸಿತ್ತು. ಹಬ್ಬದ ನಿಮಿತ್ತ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು, ಯುವತಿಯರು ರಸ್ತೆಗಳಲ್ಲಿ ಹಾಕಿದ್ದ ಬಣ್ಣ ಬಣ್ಣದ ರಂಗೋಲಿಗಳು ಬಣ್ಣದ ಲೋಕವನ್ನೇ ಅನಾವರಣಗೊಳಿಸಿತ್ತು.

Advertisement

ಪಾಲಿಕೆ ಮಾಜಿ ಸದಸ್ಯ ಕೆ.ಎಸ್‌. ದಿವಾಕರ್‌ ಮತ್ತು ಬಿಜೆಪಿ ಯುವ ಮುಖಂಡ ಕೆ.ಎಸ್‌. ಅಶೋಕ್‌ ನೇತೃತ್ವದಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ದೇಶದ ಸಂಸ್ಕೃತಿ, ಹಳ್ಳಿಯ ಸೊಗಡನ್ನು ಬಿಂಬಿಸುವಂತೆ ಆಯೋಜಿಸಲಾಗಿದ್ದ ಸಂಕ್ರಾಂತಿ ಹಬ್ಬದಲ್ಲಿ ರಸ್ತೆಬದಿಯ ಮನೆಗಳ ಗೋಡೆಗಳ ಮೇಲೆ ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳನ್ನು ಬಿಡಿಸಲಾಗಿತ್ತು. ಎತ್ತಿನ ಬಂಡಿಯ ಗಾಲಿಗಳಿಗೆ ಬಣ್ಣಗಳಿಂದ ಅಲಂಕರಿಸಲಾಗಿತ್ತು. ಉದ್ಯಾನವನದಲ್ಲಿ ಹಳ್ಳಿ ಪದ್ಧತಿಯನ್ನು ಬಿಂಬಿಸುವ ಕೃತಕ ಗುಡಿಸಲನ್ನು ನಿರ್ಮಿಸಲಾಗಿತ್ತು. ಬಾಳೆಗಂಬ, ತೆಂಗಿನಗೆರೆ, ಕಬ್ಬು ಮತ್ತು ಹೂವುಗಳಿಂದ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಸಿಂಗಾರಗೊಳಿಸುವ ಮೂಲಕ ನಗರದಲ್ಲೂ ಸಂಕ್ರಾಂತಿ ಹಬ್ಬವನ್ನು ಗ್ರಾಮೀಣ ಸೊಗಡಿನಿಂದ ಅತ್ಯಂತ ವಿಜೃಂಭಣೆಯಿಂದ ಬುಧವಾರ ಆಚರಿಸಲಾಯಿತು.

ಹಬ್ಬದ ವಿಶೇಷವಾದ ಎತ್ತುಗಳು, ಕುರಿ, ಕೋಳಿ, ನವಿಲುಗಳನ್ನು ತರಿಸಲಾಗಿತ್ತು. ಕುಂಬಾರರ ಮಡಿಕೆಗಳು, ಕೃಷಿಯ ಚಿತ್ರಣಗಳು ಹಬ್ಬದಲ್ಲಿ ಮೇಳೈಸಿದವು. ರಂಗೋಲಿ ಸ್ಪರ್ಧೆ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ರಂಗೋಲಿ ಬಿಡಿಸುವವರಿಗೆ ಮನೆ ಮಂದಿಯೂ ಹುರಿದುಂಬಿಸುತ್ತಿದ್ದರು. ನಾನಾ ಬಗೆಯ ವರ್ಣಮಯ ರಂಗೋಲಿಗಳು ನೆರೆದವರನ್ನು ಸೆಳೆಯುತ್ತಿದ್ದವು. ಸ್ಪರ್ಧೆಯಲ್ಲಿ 20 ಮಕ್ಕಳು 268 ಮಹಿಳೆಯರು ಸೇರಿ ಒಟ್ಟು 288 ಜನರು ತಮ್ಮ ಹೆಸರುಗಳನ್ನು ನೋಂದಾಯಿಸಿ, ವಿವಿಧ ರೀತಿಯ ರಂಗೋಲಿಗಳನ್ನು ಹಾಕಿ ಅದಕ್ಕೆ ಬಣ್ಣಗಳನ್ನು ತುಂಬುವಲ್ಲಿ ನಿರತರಾಗಿದ್ದರು.

ಸ್ಪರ್ಧೆಯಲ್ಲಿ ವಿಜೇತರಿಗೆ ಮೊದಲನೇ ಬಹುಮಾನ 42 ಇಂಚಿನ ಎಲ್‌ ಇಡಿ ಟಿವಿ, ಎರಡನೇ ಬಹುಮಾನ ರೆಫ್ರಿಜಿರೇಟರ್‌, ತೃತೀಯ ಬಹುಮಾನ ಗ್ರೈಂಡರ್ ಹಾಗೂ ಆಕರ್ಷಕ ಬಹುಮಾನ ಮಿಕ್ಸರ್‌ಗ್ರೈಂಡರ್
ಇಡಲಾಗಿತ್ತು.

ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿದ ಕಮ್ಮರಚೇಡು ಮಠದ ಕಲ್ಯಾಣಸ್ವಾಮೀಜಿ ಮಾತನಾಡಿ, ಸಂಕ್ರಾಂತಿ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಹಬ್ಬ. ಭಾರತ ದೇಶ ವಿಶ್ವಗುರು ಆಗಲು ನಮ್ಮ ಸಂಸ್ಕೃತಿಯೇ ಕಾರಣ. ಸಂಕ್ರಾಂತಿ ಹಬ್ಬದಲ್ಲಿ ವಿಶೇಷವಾಗಿ ಎಳ್ಳುಬೆಲ್ಲವನ್ನು ಸೇವಿಸಲಾಗುತ್ತದೆ. ನಮ್ಮ ಪೂರ್ವಜರು ಹಾಕಿಕೊಟ್ಟಿರುವ ಇದೊಂದು ವೈಜ್ಞಾನಿಕ ಪದ್ಧತಿ ಎಂದರು.

Advertisement

ಪಾಲಿಕೆ ಮಾಜಿ ಸದಸ್ಯ ಕೆ.ಎಸ್‌. ದಿವಾಕರ್‌ ಮಾತನಾಡಿ, ಹೊಸವರ್ಷದ ಮೊದಲ ದೊಡ್ಡ ಹಬ್ಬ ಸಂಕ್ರಾಂತಿ. ಎಲ್ಲರೂ ಒಂದಾಗಿ ಅಣ್ಣತಮ್ಮಂದಿರಂತೆ ಕೂಡಿ ಬಾಳಬೇಕು ಎಂಬ ಉದ್ದೇಶದಿಂದ ಪ್ರತಿವರ್ಷದಂತೆ ಈ ಬಾರಿಯೂ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದರು.

ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರು ರಂಗೋಲಿ ಬಿಡಿಸುವುದರ ಜತೆಗೆ ಕೆಳಗೆ ಐ ಸಪೋರ್ಟ್‌ ಸಿಎಎ ಎಂದು ಅಡಿಬರಹ ಬರೆದಿದ್ದು ಎಲ್ಲರ ಗಮನ ಸೆಳೆಯಿತು.

ಶಾಸಕ ಜಿ.ಸೋಮಶೇಖರರೆಡ್ಡಿ ಭೇಟಿ ನೀಡಿ, ರಂಗೋಲಿ ವೀಕ್ಷಿಸಿದರು. ಈ ವೇಳೆ ಪಾಲಿಕೆ ಸದಸ್ಯ ಮಲ್ಲನಗೌಡ, ಕೃಷ್ಣಮೂರ್ತಿ, ಎಪಿಎಂಸಿ ಪಾಲಣ್ಣ, ರಾಮಲಿಂಗಪ್ಪ, ಪ್ರಕಾಶ್‌, ವೆಂಕಟೇಶ್‌, ರಾಮಾಂಜಿನಿ, ಗಿರೀಶ್‌, ನೇಮಕಲ್‌ರಾವ್‌ ಸೇರಿದಂತೆ
ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next