ಬಳ್ಳಾರಿ: ಕೇಂದ್ರ ಸರ್ಕಾರ ಮೋಟಾರ್ ವಾಹನ ಮಸೂದೆ ಕಾಯ್ದೆ-2019 ತಿದ್ದುಪಡಿಯನ್ನು ವಾಪಸ್ಸು ಪಡೆಯಬೇಕು, ಆಟೋ ಚಾಲಕರಿಗೆ ಕಲ್ಯಾಣ ಯೋಜನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿ ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ ಯೂನಿಯನ್ಸ್‌ನ ಜಿಲ್ಲಾ ಸಮಿತಿ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೋಟಾರ್ ವಾಹನ ಮಸೂದೆ ಕಾಯ್ದೆ-2019 ಸಂಪೂರ್ಣ ಅವೈಜ್ಞಾನಿಕವಾಗಿದೆ. ಇದು ಎಲ್ಲ ವರ್ಗದವರಿಗೂ ಮಾರಕವಾಗಿದೆ. ಸರ್ಕಾರ ಇಂಥ ಅವೈಜ್ಞಾನಿಕ ಮಸೂದೆಯನ್ನು ಜಾರಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದ ದಂಡವನ್ನು ತೆರಬೇಕಾಗಿದೆ. ಕೂಡಲೇ ಸರ್ಕಾರ ಈ ಮಸೂದೆಯನ್ನು ವಾಪಸ್ಸು ಪಡೆಯಬೇಕು, ನಿರ್ಲಕ್ಷಿಸಿದರೆ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.
ರಸ್ತೆ ಸುರಕ್ಷತಾ ಮಸೂದೆ ಹೆಸರಿನಲ್ಲಿ ಮೂರು ಬಾರಿ ಬದಲಾವಣೆ ಮಾಡಿದ್ದು, ಮತ್ತೆ ಕೇಂದ್ರ ಸರ್ಕಾರ ಮೋಟಾರ್ ವಾಹನ ಕಾಯ್ದೆಯನ್ನು ಜಾರಿಗೊಳಿಸಿದೆ. ಆಟೋಮೊಬೈಲ್ಸ್ ಇಂಡಸ್ಟ್ರೀಸ್ ಮಾಲೀಕರ ಲಾಬಿಗೆ ಮಣಿದು ಕೇಂದ್ರ ಸರ್ಕಾರ ಅವರಿಗೆ ಲಾಭ ಮಾಡಿಕೊಡಲು ಹೊರಟಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದರಿಂದ ಆಟೋ ಚಾಲಕರ ಆದಾಯ ಕಸಿದುಕೊಂಡಂತಾಗಲಿದೆ. ಸಣ್ಣ ತಪ್ಪಿಗೂ ಕೂಡಾ 10 ಪಟ್ಟು ದಂಡ ಹೆಚ್ಚಳ ಮಾಡಿರುವುದು ತೀರಾ ಖಂಡನೀಯ. ಈ ಅವೈಜ್ಞಾನಿಕ ದುಬಾರಿ ದಂಡ ಹಾಗೂ ಕೇಂದ್ರ ಮೋಟಾರ್ ವಾಹನ ಕಾಯ್ದೆ-2019ನ್ನು ಕೂಡಲೇ ಸರ್ಕಾರ ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಸರ್ಕಾರ 15 ವರ್ಷಗಳ ಹಳೆಯ ಆಟೋಗಳಿಗೆ ಯೋಗ್ಯತಾ ಪ್ರಮಾಣಪತ್ರ ನೀಡುವುದನ್ನು ನಿಲ್ಲಿಸಿದೆ. ಇದನ್ನೇ ನಂಬಿಕೊಂಡಿರುವ ಆಟೋ ಚಾಲಕರ ಬದುಕು ಮೂರಾಬಟ್ಟೆಯಾಗಿದೆ. 15 ವರ್ಷಗಳ ಆಟೋಗಳನ್ನು ನಿಷೇಧಿಸಲು ಹೊರಟಿರುವ ಸರ್ಕಾರ ಪ್ರತಿ ವರ್ಷ ಏಕೆ? ಯೋಗ್ಯತಾ ಪ್ರಮಾಣಪತ್ರವನ್ನು ನವೀಕರಿಸಲು ಆದೇಶಿಸಿದೆ ಎಂಬುದು ತಿಳಿಯುತ್ತಿಲ್ಲ. ಇದನ್ನು ತೆಗೆಯಬೇಕು. 15 ವರ್ಷಗಳ ಆಟೋಗಳನ್ನು ನಿಷೇಧಿಸುವುದಾದರೇ ಹಳೆಯ ಆಟೋಗಳಿಗೆ ನಿಗದಿತ ಬೆಲೆಯನ್ನು ಸರ್ಕಾರವೇ ನೀಡಬೇಕು. ಇದರ ಜೊತೆಗೆ ಪ್ರೋತ್ಸಾಹ ಧನದ ರೂಪವಾಗಿ ಒಬ್ಬರಿಗೆ 50 ಸಾವಿರ ರೂಗಳನ್ನು ನೀಡಬೇಕು, ರಾಷ್ಟ್ರೀಕೃತ ಬ್ಯಾಂಕ್‌ಗಳು, ನಿಗಮಗಳಿಂದ ಸಾಲ ಸೌಲಭ್ಯವನ್ನು ಸರ್ಕಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ. ಸತ್ಯಬಾಬು, ಫೆಡರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ ಯೂನಿಯನ್ಸ್‌ನ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಎಂ. ಸಂತೋಷ್, ಮುಖಂಡರಾದ ಕೆ.ವಿ. ಮಂಜುನಾಥ್, ಶ್ರೀನಿವಾಸು, ಜಿ. ಪ್ರದೀಪ್ ಕುಮಾರ್, ಹೊನ್ನೂರುವಲಿ, ಬಿ.ಎಸ್. ರುದ್ರಪ್ಪ, ರಾಘವೇಂದ್ರ, ತಿಪ್ಪೇಸ್ವಾಮಿ, ಜಿ. ಸಿದ್ದಲಿಂಗೇಶ, ಶರಣಮ್ಮ, ವಿರುಪಾಕ್ಷಿ, ಟಿ. ಚಂದ್ರಶೇಖರ್, ಕೆ. ಹನುಮಂತು ಇದ್ದರು.
ಬಳ್ಳಾರಿ: ನಗರದಲ್ಲಿ ಫೆಡರೇಶನ್ ಆಫ್ ಕರ್ನಾಟಕ ಆಟೋರಿಕ್ಷಾ ಡ್ರೈವರ್ ಯೂನಿಯನ್ಸ್‌ನ ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ನಗರದ ಡಿಸಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.