Advertisement

ಜೋಳದರಾಶಿ ದೊಡ್ಡನಗೌಡರದ್ದು ದೈತ್ಯ ಪ್ರತಿಭೆ

02:55 PM May 12, 2019 | Naveen |

ಬಳ್ಳಾರಿ: ಜೋಳದರಾಶಿ ದೊಡ್ಡನಗೌಡರದ್ದು ಅದ್ಭುತ ದೈತ್ಯ ಪ್ರತಿಭೆಯಷ್ಟೇ ಅಲ್ಲ. ಗುರುಶಿಷ್ಯ ಪರಂಪರೆಯಲ್ಲಿ ಅಪ್ರತಿಮ ಸಾಂಸ್ಕೃತಿಕ ವ್ಯಕ್ತಿಯಾಗಿದ್ದರು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಬಿ. ಸಿದ್ಧಲಿಂಗಪ್ಪ ಹೇಳಿದರು.

Advertisement

ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ರಂಗತೋರಣ, ಜೋಳದರಾಶಿ ರಾಮೇಶ ಟ್ರಸ್ಟ್‌ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಜೋಳದರಾಶಿ ದೊಡ್ಡನಗೌಡರ 25ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೊಡ್ಡನಗೌಡರು ‘ನಾಟಕ ನನ್ನ ಬೆಂಬಿಡದ ಬ್ರಹ್ಮರಾಕ್ಷಸವೆನ್ನುತ್ತಲೇ ರಂಗಭೂಮಿಗೆ ಬಂದವರು. ಆ ಕಾಲದಲ್ಲೇ ನಾಲ್ಕು ನೂರು ಎಕರೆ ಜಮೀನು ಹೊಂದಿದ್ದ ದೊಡ್ಡನಗೌಡರು, ಮನೆಯಲ್ಲಿ ಕೂತು ಗೌಡಕಿ ಮಾಡದೇ ಇಡೀ ಗ್ರಾಮದ ಅಭಿವೃದ್ಧಿಗೈದ ಅಪರೂಪದ ವ್ಯಕ್ತಿಯಾಗಿದ್ದರು. ಗ್ರಾಮಕ್ಕೆ ಪ್ರಪ್ರಥಮ ಬಾರಿಗೆ ಆಸ್ಪತ್ರೆ, ಶಾಲೆ, ಪೋಸ್ಟ್‌ ಆಫೀಸು ತಂದುದಲ್ಲದೇ ಊರಿನ ಶ್ರೀ ರಾಮೇಶ ದೇವಸ್ಥಾನವನ್ನು ಶ್ರೀರಾಮೇಶ ಟ್ರಸ್ಟ್‌ ರಚಿಸುವ ಮೂಲಕ ಪೂಜಾ ಮಂದಿರವನ್ನು ಸಾಂಸ್ಕೃತಿಕ ಕಲಾ ಮಂದಿರವನ್ನಾಗಿ ಮಾಡಿದರು. ಅದರಲ್ಲಿ ಸಾಹಿತ್ಯ, ನಾಟಕ, ಬಯಲಾಟ, ಪ್ರವಚನ, ಗ್ರಂಥ ಪ್ರಕಟಣೆ ನಡೆಯಲು ಸ್ವಂತದ 25 ಎಕರೆ ದಾನ ಮಾಡಿದ ಹೃದಯವಂತರಾಗಿದ್ದವರು ಎಂದು ಗುಣಗಾನ ಮಾಡಿದರು.

ರಂಗಭೂಮಿ ಮೂಲಕ ದೇಶ, ವಿದೇಶಗಳಲ್ಲಿ ಪ್ರಸಿದ್ಧರಾಗಿದ್ದ ಬಳ್ಳಾರಿ ರಾಘವಾಚಾರ್ಯರ ಗರಡಿಯಲ್ಲಿ ಅಂತರಂಗದ ಶಿಷ್ಯರಾಗಿ ಬೆಳೆದ ದೊಡ್ಡನಗೌಡರು ಕನ್ನಡ-ತೆಲುಗು ಭಾಷೆಗಳಲ್ಲಿ ಸಂಗೀತ, ಸಾಹಿತ್ಯ, ನಾಟಕ ರಚಿಸಿದ್ದರು. ಗುರುಗಳ ಸ್ಮರಣೆಗಾಗಿ ನಗರದಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್‌ ಸ್ಥಾಪಿಸಿ ರಾಘವ ಕಲಾಮಂದಿರ ಆರಂಭಕ್ಕೂ ಕಾರಣೀಭೂತರಾಗಿದ್ದಾರೆ. ಈ ಗುರುಶಿಷ್ಯ ಪರಂಪರೆ ಇಂದಿಗೂ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಗೌರವಾಧ್ಯಕ್ಷ ಬಿ.ಸಿದ್ದನಗೌಡ, ಜುಲೈ 27 ರಂದು ಜೋಳದರಾಶಿ ದೊಡ್ಡನಗೌಡರ ಜನ್ಮದಿನವಿದ್ದು, ಅಂದು ನಗರದಲ್ಲಿ ದೊಡ್ಡನಗೌಡರ ಸುಂದರ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲು ನಿರ್ಧರಿಸಲಾಗಿದ್ದು, ಅದಕ್ಕೆ ಸಾರ್ವಜನಿಕರು, ಕಲಾಭಿಮಾನಿಗಳು ಸಹಕಾರ ನೀಡಬೇಕು ಎಂದರು. ದೊಡ್ಡನಗೌಡರ ಮಗಳು ಪಾರ್ವತಮ್ಮ ಹಾಜರಿದ್ದರು. ರಂಗತೋರಣದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಸ್ವಾಗತಿಸಿದರು. ರಾಮೇಶ ಟ್ರಸ್ಟ್‌ ಅಧ್ಯಕ್ಷ ಜೋಳದರಾಶಿ ಪೊಂಪನಗೌಡ ವಂದಿಸಿದರು. ಜೋಳದರಾಶಿಯ ಯರ್ರೆಪ್ಪಗೌಡ ದೊಡ್ಡನಗೌಡರ ಹೋಗಿ ಬರ್ತೆನ್ರಯ್ಯ ನಮ್ಮೂರಿಗೆ ಎಂಬ ಹಾಡನ್ನು ಹಾಡಿ ಗಮನ ಸೆಳೆದರು.

Advertisement

ಮನಸೂರೆಗೊಳಿಸಿದ ಕುರುಕ್ಷೇತ್ರ: ಬಳಿಕ ಕುರುಕ್ಷೇತ್ರ ನಾಟಕ ಪ್ರದರ್ಶನಗೊಂಡು ಜನಮನಸೂರೆಗೊಳಿಸಿತು. ಹಿರಿಯ ಕಲಾವಿದರಾದ ಬೆಳಗಲ್ಲು ವೀರಣ್ಣ, ಸುಭದ್ರಮ್ಮ ಮನ್ಸೂರ, ಗೆಣಿಕೆಹಾಳು ತಿಮ್ಮನಗೌಡ, ಚನ್ನಬಸಪ್ಪ, ಡಾ. ಪಿ.ಎಲ್.ಗಾದಿಲಿಂಗನಗೌಡ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕುರುಕ್ಷೇತ್ರ ನಾಟಕದಲ್ಲಿ ಸಂಗೀತಮಯ ಹಾಡುಗಳನ್ನು ಕಲಾವಿದರೇ ಸೊಗಸಾಗಿ ಹಾಡುವುದು, ಅದೇ ಬಣ್ಣದ ಪರದೆ-ಸಿಂಹಾಸನ ಸೆಟ್ ಬಳಸಿ ಸಿನಿಮೀಯ ರೀತಿಯಲ್ಲಿ ಶ್ರೀಕೃಷ್ಣ ಏಕಕಾಲಕ್ಕೆ ಇಬ್ಬರು ಕೃಷ್ಣರಾಗಿ ರಂಗದಲ್ಲಿ ಕಾಣಿಸಿಕೊಳ್ಳುವ ರೀತಿ ಎಲ್ಲವೂ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು. ಕೃಷ್ಣ ಪಾತ್ರಧಾರಿ ಸಿರಿಗೇರಿಯ ಮಂಜುನಾಥ, ಸಿರಿಗೇರಿಯ ಶರಣಬಸವ ಮಿಂಚಿದರು.

Advertisement

Udayavani is now on Telegram. Click here to join our channel and stay updated with the latest news.

Next