Advertisement

ಜಮೀನು ಪರಭಾರೆಗೆ ಮುಂದುವರೆದ ವಿರೋಧ

10:41 AM Jun 20, 2019 | Team Udayavani |

ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ಜಿಂದಾಲ್ ಸಂಸ್ಥೆಗೆ 3667 ಎಕರೆ ಜಮೀನು ಪರಭಾರೆಗೆ ವಿರೋಧ ವ್ಯಕ್ತಪಡಿಸಿರುವ ವಿಜಯನಗರ ಶಾಸಕ ಆನಂದ್‌ಸಿಂಗ್‌, ಅನಿಲ್ಲಾಡ್‌ ಇದೀಗ ತಮ್ಮ ಹೋರಾಟವನ್ನು ಮುಂದುವರೆಸುವ ಸಲುವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಲೋಗೋವೊಂದನ್ನು ಸಿದ್ಧಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲೂ ಈ ಕುರಿತು ಜಾಗೃತಿ ಮೂಡಿಸುವುದರ ಜತೆಗೆ ತಾಲೂಕಿನ ಕುಡಿತಿನಿ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ್ದಾರೆ.

Advertisement

ರಾಜ್ಯದ ಮೈತ್ರಿ ಸರ್ಕಾರ ಜಿಂದಾಲ್ ಸಂಸ್ಥೆಗೆ 3667 ಎಕರೆ ಜಮೀನನ್ನು ಜಿಂದಾಲ್ ಸಂಸ್ಥೆಗೆ ಪರಭಾರೆ ಮಾಡಿಕೊಡಲು ಇತ್ತೀಚೆಗಷ್ಟೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದ್ದು, ಇದಕ್ಕೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಗಣಿನಾಡು ಬಳ್ಳಾರಿಯಲ್ಲೂ ಸಾಕಷ್ಟು ರೈತ, ಕನ್ನಡಪರ ಸಂಘಟನೆಗಳು ದನಿಗೂಡಿಸಿ, ಪ್ರತಿಭಟಿಸಿದ್ದವು. ವಿಜಯನಗರ ಶಾಸಕ ಆನಂದ್‌ಸಿಂಗ್‌, ಮಾಜಿ ಶಾಸಕ ಅನಿಲ್ಲಾಡ್‌ ಸಹ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಲೀಸ್‌ನ್ನು ಮುಂದುವರೆಸಬೇಕು. ಪರಭಾರೆ ಮಾಡಬಾರದು ಎಂಬ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಇದೀಗ ಹೋರಾಟ ಮತ್ತಷ್ಟು ತೀವ್ರ ಪಡೆದುಕೊಳ್ಳುವ ಲಕ್ಷಣಗಳು ಗೋಚರಿಸುತ್ತಿದ್ದು, ವಿಜಯನಗರ ಶಾಸಕ ಆನಂದ್‌ಸಿಂಗ್‌, ಕೈಗಾರಿಕೆಗಳಿಗೆ ಜಮೀನು ನೀಡಿರುವ ತಾಲೂಕಿನ ಕುಡಿತಿನಿ ಗ್ರಾಮದಲ್ಲಿ ಸಂತ್ರಸ್ಥ ರೈತರನ್ನು ಬುಧವಾರ ಭೇಟಿಯಾಗಿ ಸಮಸ್ಯೆಗಳನ್ನು ಆಲಿಸಿದ್ದಾರೆ.

ಲೋಗೋ ಸಿದ್ಧತೆ: ಜಿಂದಾಲ್ ಸಂಸ್ಥೆ ವಿರುದ್ಧ ಹೋರಾಟವನ್ನು ಮುಂದುವರೆಸಿರುವ ಶಾಸಕ ಆನಂದ್‌ಸಿಂಗ್‌, ಮಾಜಿ ಶಾಸಕ ಅನಿಲ್ಲಾಡ್‌, ಅದಕ್ಕಾಗಿ ಪ್ರತ್ಯೇಕ ಲೋಗೋವನ್ನು ಸಿದ್ಧಪಡಿಸಿದ್ದಾರೆ. ಲೋಗೋದ ಮಧ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಮಾಜಿ ಸಚಿವ ಎಚ್.ಕೆ. ಪಾಟೀಲ್ ಭಾವಚಿತ್ರ, ಅವರ ಬಲಕ್ಕೆ ಅನಿಲ್ಲಾಡ್‌, ಎಡಕ್ಕೆ ಆನಂದ್‌ಸಿಂಗ್‌ ಅವರ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಲೋಗೋ ಸುತ್ತಲೂ ಜಿಂದಾಲ್ ಕಾರ್ಖಾನೆಗೆ ಸಾವಿರಾರು ಎಕರೆ ಕೃಷಿ ಭೂಮಿ ನೀಡುವುದನ್ನು ವಿರೋಧಿಸಿ ಎಂದು ಬರೆಯಲಾಗಿದೆ. ಮಧ್ಯದಲ್ಲಿ ‘ಮತ್ತೂಮ್ಮೆ ಸಂಡೂರು ಭೂ ಹೋರಾಟ’ ಎಂದು ದೊಡ್ಡ ಅಕ್ಷರದಲ್ಲಿ ಬರೆಯಲಾಗಿದ್ದು, ‘ರೈತನ ಭೂಮಿ ಉಳಿಯಲಿ, ಬಳ್ಳಾರಿ ಹಸಿರು ವೃದ್ಧಿಸಲಿ’ ಎಂದು ಉಪಶೀರ್ಷಿಕೆಯನ್ನು ಇಡಲಾಗಿದೆ. ಹೋರಾಟದ ಮೊದಲ ಹೆಜ್ಜೆಯಾಗಿ ತಾಲೂಕಿನ ಕುಡಿತಿನಿ ಗ್ರಾಮಕ್ಕೆ ಬುಧವಾರ ಭೇಟಿನೀಡಿ, ಅನ್ಯಾಯಕ್ಕೊಳಗಾದ ರೈತರನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಆಲಿಸುವ ಮೂಲಕ ಜನಾಭಿಪ್ರಾಯವನ್ನು ಸಂರಹಿಸಲು ಮುಂದಾಗುತ್ತಿದ್ದಾರೆ.

ಸ್ವಪಕ್ಷೀಯವರಿಂದಲೇ ಪರ-ವಿರೋಧ: ಜಿಂದಾಲ್ ಸಂಸ್ಥೆಗೆ 3667 ಎಕರೆ ಜಮೀನು ಪರಭಾರೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದಲ್ಲೇ ಪರ-ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಜಿಂದಾಲ್ ಸಂಸ್ಥೆ ಪರ ಬ್ಯಾಟಿಂಗ್‌ ಮಾಡಿರುವ ವಿಧಾನಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯನವರು ಈಗಾಗಲೇ ಜಿಂದಾಲ್ ಸಂಸ್ಥೆಗೆ ಜಮೀನು ಪರಭಾರೆ ಮಾಡುವಲ್ಲಿ ಮೈತ್ರಿ ಸರ್ಕಾರ ಕೈಗೊಂಡಿರುವ ನಿರ್ಣಯ ಸರಿಯಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ಸಂಡೂರು ಶಾಸಕ, ಸಚಿವ ಈ. ತುಕಾರಾಂ ಸಹ ತಾವು ಜಿಂದಾಲ್ ಪರ ಎಂಬುದನ್ನು ಈಗಾಗಲೇ ಸಾಕಷ್ಟು ಸಂದರ್ಭದಲ್ಲಿ ಸ್ಪಷ್ಟವಾಗಿದೆ. ಹಾಗಾಗಿ ಶಾಸಕ, ಸಚಿವರಿಬ್ಬರು ಜಿಂದಾಲ್ ಪರವಿದ್ದರೆ, ಈಗಾಗಲೇ ವಿರೋಧ ವ್ಯಕ್ತಪಡಿಸಿರುವ ಎಚ್.ಕೆ. ಪಾಟೀಲ್ ಅವರಿಗೆ ಅದೇ ಪಕ್ಷದ ವಿಜಯನಗರ ಶಾಸಕ ಆನಂದ್‌ಸಿಂಗ್‌, ಮಾಜಿ ಶಾಸಕ ಅನಿಲ್ಲಾಡ್‌ ದನಿಗೂಡಿಸಿದ್ದು, ಸ್ವಪಕ್ಷೀಯರಲ್ಲೇ ಮೈತ್ರಿ ಸರ್ಕಾರದ ನಿರ್ಣಯಕ್ಕೆ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸುತ್ತಿದೆ.

ಜಿಲ್ಲೆಯಲ್ಲಿ ಸೈಲೆಂಟಾದ ಬಿಜೆಪಿ: ಮೈತ್ರಿ ಸರ್ಕಾರ ಜಿಂದಾಲ್ ಸಂಸ್ಥೆಗೆ 3667 ಎಕರೆ ಪರಭಾರೆ ಮಾಡಬಾರದು ಎಂದು ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸೇರಿ ಹಲವಾರು ಶಾಸಕರು, ಮುಖಂಡರು ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ನಡೆಸಿದರೆ, ಜಿಲ್ಲೆಯಲ್ಲಿನ ಬಿಜೆಪಿ ಶಾಸಕರು ಮಾತ್ರ ಸೈಲೆಂಟಾಗಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಹಾಲಿ, ಮಾಜಿ ಶಾಸಕರೇ ವಿರೋಧ ವ್ಯಕ್ತಪಡಿಸುವುದರ ಜತೆಗೆ ಸಂತ್ರಸ್ತ ರೈತರನ್ನು ಜಾಗೃತಿಗೊಳಿಸಲು ಮುಂದಾಗಿದ್ದರೂ, ಮುಖ್ಯವಾಗಿ ವಿರೋಧ ವ್ಯಕ್ತಪಡಿಸಬೇಕಿದ್ದ ಬಿಜೆಪಿ ಶಾಸಕರು, ಮುಖಂಡರು ತಮಗೇನು ಸಂಬಂಧವಿಲ್ಲದಂತೆ ಕೈಕಟ್ಟಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜಮೀನು ಪರಭಾರೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಇಷ್ಟೆಲ್ಲ ಪರ-ವಿರೋಧಾಭಿಪ್ರಾಯಗಳು ವ್ಯಕ್ತವಾಗಿದ್ದರೂ, ಜಿಂದಾಲ್ ಸಂಸ್ಥೆಯ ಮುಖ್ಯಸ್ಥರು ಮಾತ್ರ ಕ್ಯಾರೆ ಎನ್ನದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next