Advertisement

ವಿಶಿಷ್ಟ ಚೇತನರಿಗೆ ಸೂಕ್ತ ಪರಿಹಾರ ಕೊಡಿ: ನಾಗರಾಜ್‌

05:42 PM Aug 28, 2019 | Naveen |

ಬಳ್ಳಾರಿ: ಉತ್ತರ ಕರ್ನಾಟಕದಲ್ಲಿ ಪ್ರವಾಹ ಮತ್ತು ನೆರೆಹಾವಳಿಯಿಂದ ಉಂಟಾದ ಸಂತ್ರಸ್ತರಿಗೆ ಅದರಲ್ಲೂ ವಿಶಿಷ್ಟ ಚೇತನರಿಗೆ ರಾಜ್ಯ ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ವಿಶಿಷ್ಟಚೇತನರ ಹಾಗೂ ಪಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ಜಿ.ಎನ್‌.ನಾಗರಾಜ್‌ ಆಗ್ರಹಿಸಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯಿಂದ ಭೀಕರ ಪ್ರವಾಹ ಉಂಟಾಗಿ ಸಾಕಷ್ಟು ಜನರು ನೆಲೆ ಕಳೆದುಕೊಂಡಿದ್ದಾರೆ. ಅವರ ಬದುಕು ಮೂರಾಬಟ್ಟೆಯಾಗಿದೆ. ಅದರಲ್ಲೂ ವಿಶಿಷ್ಟಚೇತನರು ಅನುಭವಿಸುತ್ತಿರುವ ಸಮಸ್ಯೆಗಳಂತೂ ಹೇಳತಿರದಾಗಿದೆ. ದೇಹದ ಅಂಗಾಂಗಳು ಸರಿ ಇದ್ದವರು ಹೇಗಾದರೂ ಮಾಡಿ ಪ್ರವಾಹದಿಂದ ಬಚಾವ್‌ ಆಗಲು ಪ್ರಯತ್ನಿಸಿರಬಹುದು. ಆದರೇ, ವಿಶಿಷ್ಟಚೇತನರು ಹೆಚ್ಚು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡಬೇಕು. ಎಲ್ಲರಿಗಿಂತ ಮೊದಲು ವಿಶಿಷ್ಟಚೇತನರಿಗೆ ದುಪ್ಪಟ್ಟು ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಸದ್ಯ ವಿಶಿಷ್ಟಚೇತನರಿಗೆ ಸದ್ಯ ತಿಂಗಳಿಗೆ 600 ರೂ. ಜೀವನ ಭತ್ಯೆ ನೀಡಲಾಗುತ್ತಿದೆ. ಇದು ಸಾಲುತ್ತಿಲ್ಲ. ಎಲ್ಲ ಅಗತ್ಯ ವಸ್ತುಗಳು ದುಬಾರಿಯಾಗಿದ್ದು, ಎಲ್ಲರಿಗೂ ಮಾಸಿಕ 5 ಸಾವಿರ ರೂ. ಗಳನ್ನು ನೀಡಬೇಕು. ಅರ್ಹ ವಿಶಿಷ್ಟಚೇತನರಿಗೆ ಎಲ್ಲ ಕ್ಷೇತ್ರಗಳಲ್ಲೂ ಆದ್ಯತೆ ನೀಡಬೇಕು. ಅರ್ಹರಿಗೆ ಶಾಶ್ವತ ಉದ್ಯೋಗ ಕಲ್ಪಿಸಬೇಕು, ಎಸ್‌ಎಸ್‌ಎಲ್ಸಿ ಗಿಂತ ಹೆಚ್ಚು ಅಭ್ಯಾಸ ಮಾಡಿದ ಎಲ್ಲ ವಿಶಿಷ್ಟಚೇತನರಿಗೆ ಶಾಶ್ವತ ಉದ್ಯೋಗ ಕಲ್ಪಿಸಲು ನೇಮಕಾತಿ ಆಂದೋಲನ ನಡೆಸಬೇಕು.

ಈವರೆಗೂ ಅನೇಕ ಬಾರಿ ಸರ್ಕಾರದ ಗಮನಸೆಳೆದರೂ ಇಲ್ಲಿವರೆಗೂ ಕ್ರಮವಿಲ್ಲ. ವಿಶಿಷ್ಟಚೇತನರಿಗೆ ಮಾಸಿಕ 5 ಸಾವಿರ ರೂ.ಗಳನ್ನು ನೀಡಬೇಕು, ಮಹಿಳೆಯರಿಗೆ 6 ಸಾವಿರ ರೂ.ಗಳನ್ನು ನೀಡಬೇಕು. ಶೇ.75ಕ್ಕಿಂತ ಹೆಚ್ಚಿನ ವಿಶಿಷ್ಟಚೇತನರಿಗೆ ತಿಂಗಳಿಗೆ 7500 ರೂ.ಪಿಂಚಣಿ ನೀಡಬೇಕು ಎಂದು ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ವಿಶಿಷ್ಟಚೇತನರಿಗಾಗಿ ಹೊಸ ಕಾನೂನು ಜಾರಿಗೊಳಿಸಬೇಕು ಎಂದು ವ್ಯಾಪಕ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಈ ಹಿಂದೆ ಕಾನೂನ್ನು ರೂಪಿಸಲಾಗಿತ್ತು.

Advertisement

ಆದರೆ, ಅದು ಇಲ್ಲಿವರೆಗೆ ಜಾರಿಗೆ ಬಂದಿಲ್ಲ. ಸಂಬಂಧಿಸಿದ ಇಲಾಖೆ ಮೇಲಧಿಕಾರಿಗಳು, ಸರ್ಕಾರದ ಮುಖ್ಯಸ್ಥರನ್ನು ಪ್ರಶ್ನಿಸಿದರೇ ನಾನಾ ಹೇಳಿಕೆ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಇದು ಸರಿಯಾದ ಬೆಳವಣೀಗೆಯಲ್ಲ. ಕೂಡಲೇ ಸರ್ಕಾರ ಈ ಕಾನೂನ್ನು ಜಾರಿಗೊಳಿಸಿ, ವಿಶಿಷ್ಟಚೇತನರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಡಿ.ಸುರೇಶ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ್‌, ಮುಖಂಡರಾದ ಜವಳಿ ಕೊಟ್ರೇಶ್‌, ಶೇಖಪ್ಪ, ಆಲಮಪ್ಪ, ಎನ್‌.ಕುಮಾರ್‌, ರಾಮಾ ನಾಯ್ಕ, ಹುಸೇನ್‌ ಬಾಷಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next