ಬಳ್ಳಾರಿ: ‘ಬಡವರ ಬಂಧು’ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ನೀಡಲಾಗಿದ್ದ ಸಾಲ ಸಮರ್ಪಕವಾಗಿ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಯೋಜನೆಯನ್ನೇ ಮರು ಪರಿಷ್ಕರಿಸಲಾಗಿದ್ದು, ಎರಡನೇ ಹಂತದಲ್ಲಿ ಕೇವಲ ನಗರಸಭೆ, ಮಹಾನಗರ ಪಾಲಿಕೆ, ಬೃಹತ್ ಮಹಾನಗರ ಪಾಲಿಕೆ ವ್ಯಾಪ್ತಿಯ ಬೀದಿಬದಿ ವ್ಯಾಪಾರಿಗಳಿಗಷ್ಟೇ ಯೋಜನೆಯ ಲಾಭ ಸಿಗಲಿದೆ.
Advertisement
ಬೀದಿ ಬದಿಯಲ್ಲಿ ಹೂವು, ಹಣ್ಣು ಸೇರಿ ಇನ್ನಿತರೆ ವಸ್ತು ಮಾರಾಟ ಮಾಡಿ ಜೀವನ ಸಾಗಿಸುವ ವ್ಯಾಪಾರಿಗಳ ಆರ್ಥಿಕಾಭಿವೃದ್ಧಿಗಾಗಿ ಜಾರಿಗೆ ಬಂದಿದ್ದ ‘ಬಡವರ ಬಂಧು’ ಯೋಜನೆಯನ್ನು ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆಗಳಿಗೂ ವಿಸ್ತರಿಸಲಾಗಿತ್ತು. ಈ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ಲಭಿಸುತ್ತಿತ್ತು. ಇದರಿಂದ ಖಾಸಗಿ ಲೇವಾದೇವಿಗಾರರ ಬಡ್ಡಿ, ಚಕ್ರಬಡ್ಡಿ, ಮೀಟರ್ ಬಡ್ಡಿಗಳಿಂದ ವ್ಯಾಪಾರಿಗಳು ಮುಕ್ತರಾಗುತ್ತಿದ್ದರು. ಆದರೆ, ಮೊದಲ ಮೂರು ತಿಂಗಳ ಅವಧಿಗೆ ಸ್ಥಳೀಯ ಡಿಸಿಸಿ, ಬಳ್ಳಾರಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಿಂದ ಕೊಡಿಸಲಾಗಿದ್ದ ಸಾಲದಲ್ಲಿ ಶೇ.60 ರಷ್ಟು ಮರುಪಾವತಿಯಾಗಿಲ್ಲ. ಇದು ಡಿಸಿಸಿ, ಅರ್ಬನ್ ಬ್ಯಾಂಕ್‌ಗಳ ನಿರ್ದೇಶಕರನ್ನು ಚಿಂತೆಗೀಡು ಮಾಡಿತ್ತು. ಈ ಹಿನ್ನೆಲೆಯಲ್ಲಿ ಯೋಜನೆಯನ್ನೇ ಮರುಪರಿಷ್ಕರಿಸಲಾಗಿದ್ದು, ಕೇವಲ ಪಾಲಿಕೆ, ಬೃಹತ್ ಮಹಾನಗರ ಪಾಲಿಕೆ, ನಗರಸಭೆಗಳಿಗಷ್ಟೇ ಸೀಮಿತಗೊಳಿಸಲಾಗಿದೆ.
Related Articles
Advertisement
ವ್ಯಾಪಾರಿಗಳಿಗಿಲ್ಲ ಪರವಾನಗಿ: ಬಹುತೇಕ ಬೀದಿಬದಿ ವ್ಯಾಪಾರಿಗಳ ಬಳಿ ಸ್ಥಳೀಯ ಸಂಸ್ಥೆಯ ಪರವಾನಗಿಯೇ ಇಲ್ಲ. ಇದು ‘ಬಡವರ ಬಂಧು’ ಯೋಜನೆಯಡಿ ಸಾಲ ಪಡೆಯಲು ತೊಡಕಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿನ ಪಾದಚಾರಿ ರಸ್ತೆಯನ್ನೇ ಆವರಿಸಿಕೊಂಡು ಹೂವು, ಹಣ್ಣು, ತಳ್ಳುಬಂಡಿಗಳನ್ನಿಟ್ಟು ವ್ಯಾಪಾರ ಮಾಡುವ ಬೀದಿಬದಿ ವ್ಯಾಪಾರಿಗಳು ಸಾವಿರಾರು ಸಂಖ್ಯೆಯಲ್ಲಿ ಕಂಡುಬಂದರೂ, ಪಾಲಿಕೆ, ನಗರಸಭೆಯಲ್ಲಿ ಪರವಾನಗಿ ಪಡೆದಿರುವವರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು ಮಾತ್ರ. ಇವರಿಗೆ ಪರವಾನಗಿ ನೀಡಲು ಸ್ಥಳೀಯ ಸಂಸ್ಥೆಯಲ್ಲಿ ತಾಂತ್ರಿಕ ಸಮಸ್ಯೆಯೂ ಇದೆ. ಇವರಿಗೆ ಪರವಾನಗಿ ನೀಡಿದರೆ, ಅವರು ವ್ಯಾಪಾರ ಮಾಡಲು ಸ್ಥಳಾವಕಾಶ ಕಲ್ಪಿಸುವುದು ಸಂಸ್ಥೆಯ ಜವಾಬ್ದಾರಿಯಾಗಿದೆ. ಈ ಸ್ಥಳಾವಕಾಶದ ಸಮಸ್ಯೆಯಿಂದಾಗಿ ಸ್ಥಳೀಯ ಸಂಸ್ಥೆಗಳು ಸಹ ಬೀದಿಬದಿ ವ್ಯಾಪಾರಿಗಳಿಗೆ ಪರವಾನಗಿ ನೀಡುವಲ್ಲಿ ಮುಂದೆ ಬರುತ್ತಿಲ್ಲ. ಹೀಗಾಗಿ ಬೀದಿಬದಿ ವ್ಯಾಪಾರ ಮಾಡುವವರು ಸಾವಿರಾರು ಸಂಖ್ಯೆಯಲ್ಲಿದ್ದರೂ, ಯೋಜನೆಯಡಿ ಸಾಲ ಪಡೆಯಲು ಅರ್ಹತೆಯಿರುವವರ ಸಂಖ್ಯೆ ತೀರಾ ಕಡಿಮೆಯಾಗಿದೆ.