Advertisement

ಬೆಳ್ಳಂದೂರು-ವರ್ತೂರು ಕೆರೆಯಲ್ಲಿ ಮತ್ತೆ ದಟ್ಟ ನೊರೆ

11:41 AM Mar 24, 2017 | Team Udayavani |

ಬೆಂಗಳೂರು: ಮಹದೇವಪುರ ಬಳಿಯ ಬೆಳ್ಳಂದೂರು-ವರ್ತೂರು ಕೆರೆಗಳಲ್ಲಿ ದಿನೇ ದಿನೇ ನೊರೆ ಸಮಸ್ಯೆ ತೀವ್ರಗೊಳ್ಳುತ್ತಿದೆ. ಆದರೆ, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ. ಕೆರೆಗಳಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಆತಂಕ ಶುರುವಾಗಿದೆ. 

Advertisement

ಕಳೆದ ಮೂರ್‍ನಾಲ್ಕು ದಿನಗಳಿಂದ ಎರಡೂ ಕೆರೆಗಳಲ್ಲಿ ನೊರೆಯ ಸಮಸ್ಯೆ ತೀವ್ರಗೊಂಡಿದ್ದು, ಗಾಳಿ ಬೀಸಿದಾಗ ನೊರೆ ಹಾರಾಡುತ್ತಿದೆ. ಹೀಗಾಗಿ ಸ್ಥಳೀಯರು ಕಿರಿಕಿರಿ ಅನುಭವಿಸುವಂತಾಗಿದೆ. ವಾಹನ ಚಾಲಕರು ಅದರಲ್ಲೂ ಪ್ರಮುಖವಾಗಿ ದ್ವಿಚಕ್ರ ವಾಹನ ಸವಾರರಿಗೆ ನೊರೆಯ ತೇಲಾಟದಿಂದ ತೊಂದರೆಯಾಗುತ್ತಿದೆ. ರಾತ್ರಿ ವೇಳೆ ಭಾರಿ ಪ್ರಮಾಣದ ನೊರೆ ರಸ್ತೆಯ ಮೇಲೆಲ್ಲಾ ಹರಡಿಕೊಳ್ಳುವುದರಿಂದ ರಸ್ತೆ, ವಿಭಜಕ, ಪಾದಚಾರಿ ಮಾರ್ಗ, ಕೆರೆ ಏರಿ ಸರಿಯಾಗಿ ಕಾಣದೆ ಅಪಘಾತಗಳು ಸಂಭವಿಸುವ ಆತಂಕ ಎದುರಾಗಿದೆ. 

ಕೆರೆಗೆ ಭಾರಿ ಪ್ರಮಾಣದಲ್ಲಿ ರಾಸಾಯನಿಕ ಅಂಶಗಳು ಸೇರುತ್ತಿರುವುದರಿಂದ ಕಳೆದ ತಿಂಗಳೂ ಕೆರೆಯಲ್ಲಿ ಬೆಂಕಿ ಮತ್ತು ದಟ್ಟ ಹೊಗೆ ಕಾಣಿಸಿಕೊಂಡಿತ್ತು. ಈ ಬೆಳವಣಿಗೆಯಿಂದ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಕುಖ್ಯಾತಿಗೆ ಒಳಗಾಗಿತ್ತು. ಹೀಗಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರು ಬಿಡಿಎ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೊರೆ ಸಮಸ್ಯೆಗೆ ತುರ್ತು ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಸಭೆ ನಡೆದು ತಿಂಗಳು ಕಳೆದರೂ ಪರಿಹಾರ ಕ್ರಮಗಳಿಗೆ ಬಿಡಿಎ ಅಧಿಕಾರಿಗಳು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

ಬೆಳ್ಳಂದೂರು ಹಾಗೂ ವರ್ತೂರು ಕೆರೆಗೆ ಸೇರುವ ರಾಸಾಯನಿಕಗಳ ಪ್ರಮಾಣ ಹೆಚ್ಚುತ್ತಿದೆ. ಕೆರೆಯನ್ನು ಸಂಪೂರ್ಣವಾಗಿ ನೊರೆ ಆವರಿಸಿಕೊಂಡಿರುವುದರಿಂದ ಕೆರೆ ಅಂಚಿನಲ್ಲಿ ಸಾರ್ವಜನಿಕರು ಓಡಾಡಲು ಭಯಧಿಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನೋರೆ ತಾಗಿದರೆ ತುರಿಕೆ, ಅಲರ್ಜಿಯಂತಹ ಚರ್ಮ ಸಮಸ್ಯೆಗಳು ಕಾಣಿಧಿಸಿಧಿಕೊಳ್ಳುತ್ತಿವೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. 

ನೊರೆಯಲ್ಲಿ ಎಷ್ಟು ಪ್ರಮಾಣದ ರಾಸಾಯನಿಕ ಅಂಶಗಳಿವೆಯೆಂದರೆ ನೀರು ಹರಿಯುವ ಕಾಲುವೆಯ ಬಳಿ ನೊರೆ ತುಂಬಿಸಿದ್ದ ಕಾಲುವೆಯ ತಡೆಗೋಡೆ ಸಂಪೂರ್ಣವಾಗಿ ಕಪ್ಪಾಗಿದೆ. ಇದರೊಂದಿಗೆ ಕೆರೆಯ ದಡದಲ್ಲಿರುವ ಗಿಡಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿವೆ. ಹೀಗಾಗಿ ಬಿಡಿಎ ಅಧಿಕಾರಿಗಳು ಆದಷ್ಟು ಬೇಗ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ವರ್ತೂರು ನಿವಾಸಿ ಮಹದೇವರೆಡ್ಡಿ ಒತ್ತಾಯಿಸಿದ್ದಾರೆ. 

Advertisement

ಕುಂಟುತ್ತಿರುವ ಕಾಮಗಾರಿ!: ಕೆರೆಯಲ್ಲಿನ ನೊರೆ ರಸ್ತೆಗೆ ಹರಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆರೆಯ ನೀರು ಹರಿಯುವ ಭಾಗದಲ್ಲಿ ತಂತಿಬೇಲಿ ಅಳವಡಿಸುವಂತೆ ಸಚಿವರು ಸೂಚಿಸಿದ್ದಾರೆ. ಇದಕ್ಕಾಗಿ ಬಿಡಿಎ ವತಿಯಿಂದ ಕಬ್ಬಿಣದ ಸರಳುಗಳ ಅಳವಡಿಕೆಗೆ ಗುಂಡಿ ತೆಗೆದು ವಾರದ ಕಳೆದಿದೆ. ಆದರೆ, ಈವರೆಗೆ ತಂತಿಧಿಬೇಲಿ ಅಳವಡಿಕೆಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದರೊಂದಿಗೆ ಕೆರೆಯಲ್ಲಿ ಹೂಳೆತ್ತುವುದು, ಕಳೆ- ಜೊಂಡು ತೆಗೆಯುವುದು ಸೇರಿದಂತೆ ನೊರೆ ಸಮಸ್ಯೆ ನಿಯಂತ್ರಿಸಲು ಸಾಧ್ಯವಾಗದ ಬಿಡಿಎ ಅಲ್ಪಾವಧಿ ಟೆಂಡರ್‌ ಆಹ್ವಾನಿಸುವ ಪ್ರಕ್ರಿಯೆಯಲ್ಲಿ ನಿರತವಾಗಿದೆ. 

ತಜ್ಞರ ಶಿಫಾರಸುಗಳು ಜಾರಿಯಾಗಿಲ್ಲ ಬೆಳ್ಳಂದೂರು ಕೆರೆಯಲ್ಲಿನ ನೊರೆ ಸಮಸ್ಯೆ
ಯನ್ನು ನಿಯಂತ್ರಿಸಿ ಕೆರೆ ಸಂರಕ್ಷಣೆ ಮಾಡುವ ಉದ್ದೇಶದಿಂದ ಸರ್ಕಾರ ತಜ್ಞರ ಸಮಿತಿ ನೇಮಿಸಿತ್ತು. ಕೆರೆಯಲ್ಲಿನ ಸಮಸ್ಯೆಗಳನ್ನು ಗುರುತಿಸಿದ ಸಮಿತಿ ಸಮಸ್ಯೆ ನಿವಾರಿಸಿ ಕೆರೆ ಉಳಿಸಲು ತುರ್ತಾಗಿ ಕೈಗೊಳ್ಳಬೇಕಾದ ಮತ್ತು ಶಾಶ್ವತ ಪರಿಹಾರಕ್ಕೆ ಹಲವು ಶಿಫಾರಸುಗಳನ್ನು ಸೂಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಈವರೆಗೆ ತಜ್ಞರ ವರದಿಯಲ್ಲಿ ಸೂಚಿಸಿರುವ ತುರ್ತು ಮತ್ತು ಶಾಶ್ವತ ಪರಿಹಾರಗಳು ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯಗತವಾಗುತ್ತಿಲ್ಲ. 

ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು?
ಕೆರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆದಿರುವ ಜೊಂಡಿನ ಒಣಗಿದ ಭಾಗಕ್ಕೆ ರಾಸಾಯನಿಕ ಪ್ರಕ್ರಿಯೆಯಿಂದ ಬೆಂಕಿ ಹೊತ್ತಿಕೊಂಡು ಹೊಗೆ ಬಂದಿರಬಹುದು. ಹೀಗಾಗಿ ಜೊಂಡು ಹಾಗೂ ಹೂಳು ತೆರವು ಅನಿವಾರ್ಯ. ಒಂದೊಮ್ಮೆ ಸರ್ಕಾರ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಭಾರಿ ಅನಾಹುತ ಸಂಭವಿಸಿ ಸುತ್ತಮುತ್ತಲಿನ ವಾತಾವರಣ ಹದಗೆಡುವ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. 

ಸರ್ಕಾರದಿಂದ ರಚಿಸಲಾಗಿದ್ದ ತಜ್ಞರ ಸಮಿತಿ ನೀಡಿರುವ ವರದಿಯನ್ನು ಆದಷ್ಟು ಬೇಗ ಅನುಷ್ಠಾನಗೊಳಿಸಿ ಸಮಸ್ಯೆ ಪರಿಹರಿಸುವ ಜತೆಗೆ, ಕೆರೆಯ ಸಂಕ್ಷರಣೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಡಿಎ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮತ್ತೂಮ್ಮೆ ಸಮಸ್ಯೆ ನಿವಾರಣೆಗೆ ಶೀಘ್ರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. 
-ಲಕ್ಷ್ಮಣ್‌, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next