ಬೆಂಗಳೂರು: ಬೆಂಕಿ ಕಾಣಿಸಿಕೊಂಡು ವಿವಾದಕ್ಕೆ ಕಾರಣವಾಗಿದ್ದ ಬೆಳ್ಳಂದೂರು ಕೆರೆಯನ್ನು ಬಿಡಿಎ ವ್ಯಾಪ್ತಿಯಿಂದ ಸಣ್ಣ ನೀರಾವರಿ ಇಲಾಖೆಯ ಕೆರೆ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ ಎಂದು ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಎಲ್ಲಾ ಕೆರೆಗಳನ್ನು ಒಂದೇ ಇಲಾಖೆಯಿಂದ ಸಂರಕ್ಷಣೆ ಮಾಡುವ ಉದ್ದೇಶದಿಂದ ಬಿಡಿಎ, ಬಿಬಿಎಂಪಿ, ಅರಣ್ಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ತರಲು ಸರ್ಕಾರ ತೀರ್ಮಾನಿಸಿದೆ. ಅದರಂತೆ ಬೆಳ್ಳಂದೂರು ಕೆರೆಯೂ ಸೇರಲಿದೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಇಲಾಖೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ತರಲು ಕಾನೂನು ತೊಡಕಿದೆ. ಆದ್ದರಿಂದ ಅರಣ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಬಿಡಿಎ ಸೇರಿದಂತೆ ಎಲ್ಲ ಕೆರೆಗಳಿಗೆ ಅನ್ವಯವಾಗುವ ಕಾನೂನು ರೂಪಿಸಿ ನಂತರ ಈ ಕೆರೆಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದರು.
ಸಣ್ಣ ನೀರಾವರಿ ವ್ಯಾಪ್ತಿಗೆ ಬರುವ ಕೆರೆ ಸಂಜೀವಿನಿ ಮತ್ತು ಜಲ ಸಂವರ್ಧನಾ ಸಂಘಗಳನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ವಿಲೀನಗೊಳಿಸಿ 60 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ 36 ಸಾವಿರ ಕೆರೆಗಳಲ್ಲಿ ಹೂಳು ತೆಗೆಯುವ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಬಹುತೇಕ ಕೆರೆಗಳಲ್ಲಿ ಶೇ. 20ರಿಂದ 30ರಷ್ಟು ಹೂಳು ತುಂಬಿ ನೀರಿನ ಕೊರತೆ ಎದುರಾಗಿರುವುದರಿಂದ ಈ ಕಾಮಗಾರಿ ನಡೆದಿದೆ ಎಂದರು.
2017ರ ಸಮೀಕ್ಷೆ ಪ್ರಕಾರ 43 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಆತಂಕಕಾರಿ ಸ್ಥಿತಿಗೆ ಕುಸಿದಿದ್ದು, ಬೋರ್‌ವೆಲ್ ಕೊರೆಯಿಸಿದರೂ ನೀರು ಸಿಗುವುದು ಸಾಧ್ಯವಿಲ್ಲ. 36 ತಾಲೂಕುಗಳಲ್ಲಿ ಮಾತ್ರ ನೀರು ಸಿಗುವ ಸಾಧ್ಯತೆಗಳಿವೆ. ಬೋರ್‌ವೆಲ್ ನಿಷೇಧಿಸಲು ಮುಂದಾದರೆ ವಿರೋಧಿಸುತ್ತಾರೆ. ಹೀಗಾಗಿ ಜಾಗೃತಿ ಅಗತ್ಯ ಎಂದರು.
ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಆರೋಪ
ಬೆಳ್ಳಂದೂರು ಕೆರೆಯಲ್ಲಿ ಆಗ್ಗಾಗೆ ಕಾಣಿಸಿಕೊಳ್ಳುವ ಬೆಂಕಿಗೆ ಸರ್ಕಾರದ ನಿರ್ಲಕ್ಷ್ಯವೇ ನೇರ ಕಾರಣ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ವಕ್ತಾರ ಶಿವಕುಮಾರ್‌ಚೆಂಗಲರಾಯ ಆರೋಪಿಸಿದ್ದಾರೆ. ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಬೇಜವಾಬ್ದಾರಿ ತನವೇ ಇದಕ್ಕೆಲ್ಲಾ ಮೂಲ ಕಾರಣವಾಗಿದ್ದು, ಈ ಸಂಬಂಧ ಅವರು ಬೆಂಗಳೂರಿಗರಲ್ಲಿ ಕ್ಷಮೆಯಾಚಿಸಲಿ ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ನಗರದಲ್ಲಿ ಕೆರೆಯ ಒತ್ತುವರಿ ಅವ್ಯಾಹತವಾಗಿ ನಡೆದಿದೆ. ಕೈಗಾರಿಕೆಯಿಂದಾಗಿ ಕೆರೆಗೆ ವಿಷಕಾರಿ ರಾಸಾಯನಿಕ ಸೇರ್ಪಡೆಯಾಗುತ್ತಿದೆ. ಸರ್ಕಾರದ ಕಳಪೆ ನಿರ್ವಹಣೆಯಿಂದಾಗಿ ಬೆಂಗಳೂರು ನಗರ ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ ಎಂದು ದೂರಿದರು. ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಶಾಪಿಂಗ್ ಮಾಲ್ ನಿರ್ಮಿಸಲಾಗಿದೆ. ಸರ್ಕಾರ ಕೂಡಲೇ ಮಾಲ್ ಸೇರಿದಂತೆ ಇನ್ನಿತರ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿ ಕಠಿಣ ಕ್ರಮ ಜರುಗಿಸಲಿ ಎಂದು ಆಗ್ರಹಿಸಿದರು.