Advertisement

ಭಾರತದಲ್ಲಿ ಬೆಳ್ಳಗಿದ್ದರೆ ಹೆಚ್ಚುತ್ತದೆ ಲಾಭ!

10:50 AM Apr 12, 2017 | Harsha Rao |

ದಕ್ಷಿಣ ಆಫ್ರಿಕಾದಲ್ಲಿ ಮತ್ತು ಮುಖ್ಯವಾಗಿ ಭಾರತದಲ್ಲಿ ಶ್ವೇತವರ್ಣೀಯರಿಗೆ ಮನ್ನಣೆ ಜಾಸ್ತಿ

Advertisement

ಬ್ರಿಟನ್‌ ಮೂಲದ ಆ ಹೆಡ್‌ಮಾಸ್ಟರ್‌, “ನನಗೆ ಭಾರತಕ್ಕೆ ಬಂದಿರುವುದಕ್ಕೆ ಸಂತಸವಾಗುತ್ತಿದೆ. ಏಕೆಂದರೆ ನನ್ನ ಪೂರ್ವಿಕರಲ್ಲಿ ಒಬ್ಬರು ಭಾರತೀಯರಾಗಿದ್ದರು’ ಎಂದು ಹೇಳಿದರಂತೆ. ಈ ಬ್ರಿಟಿಷ್‌ ವ್ಯಕ್ತಿ ತಮ್ಮ ಪೂರ್ವಿಕರಲ್ಲೊಬ್ಬರು “ಭಾರತೀಯರಾಗಿದ್ದರು’ ಎಂದು ಹೇಳಿದ್ದನ್ನು ಕೇಳಿ, ಆ ಶಾಲೆಯ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದರಂತೆ!

ನಾನು ದೆಹಲಿಯ ದಕ್ಷಿಣ ಭಾಗದಲ್ಲಿರುವ ಗುರುಗ್ರಾಮದಲ್ಲಿ ಶ್ವೇತವರ್ಣೀಯ ಡಚ್‌ ವ್ಯಕ್ತಿಯ ಸಂದರ್ಶನ ಮಾಡಿದೆ. ಅದೇ ದಿನವೇ ಆಫ್ರಿಕಾದ ಕಾಂಗೋ ರಾಷ್ಟ್ರದ ಕಪ್ಪುವರ್ಣೀಯ ವ್ಯಕ್ತಿಯನ್ನೂ ಮಾತನಾಡಿಸಿದೆ. ಇವರಿಬ್ಬರ ವಿಭಿನ್ನ ಅನುಭವವು, ಹೇಗೆ ಅವರ ಮೈ ಬಣ್ಣ  ಅವರುಗಳ ನಿತ್ಯ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ಸಾರುತ್ತಿತ್ತು. 

ಮೂವತ್ತರ ಹರೆಯದಲ್ಲಿರುವ ಡಚ್‌ ವ್ಯಕ್ತಿ, ತಾವು ಭಾರತದಲ್ಲಿ ಮೀಟಿಂಗ್‌ಗಳಿಗೆ ಹಾಜರಾದರೆ ಸಾಕು ವ್ಯಾಪಾರ ಒಪ್ಪಂದಗಳಿಗೆ ಸುಲಭವಾಗಿ ಸಹಿ ಬೀಳುತ್ತದೆ, ತಾವು ಕೇವಲ ಸಭೆಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ತಂಡದ ಯಶಸ್ಸನ್ನು ಹೆಚ್ಚಿಸಿರುವುದಾಗಿ ಹೇಳಿದರು. 

“”ಪ್ರಾಮಾಣಿಕವಾಗಿ ಹೇಳುತ್ತೇನೆ. ನಾನು ಹಾಜರಾದ‌ ಪ್ರತಿ ಸಭೆಗಳಲ್ಲೂ ಬ್ಯುಸಿನೆಸ್‌ ಡೀಲ್‌ಗ‌ಳು ಸುಲಭವಾಗಿ ಆಗುತ್ತವೆ. ನಾನಿದ್ದರೆ ಸಾಕು ನಮ್ಮ ಕಂಪೆನಿಯ ವ್ಯಾಪಾರ ವೃದ್ಧಿಯಾಗುತ್ತದೆ ಎನ್ನುವುದನ್ನು ಅರ್ಥಮಾಡಿಕೊಂಡಿದ್ದೇನೆ. ಹಾಗೆಂದು ನಾನೇನು ಎಲ್ಲರಿಗಿಂತಲೂ ಉತ್ತಮ ಎಂಬ ಕಾರಣಕ್ಕೆ ಹೀಗಾಗುತ್ತಿಲ್ಲ, ಬದಲಾಗಿ ನಾನು ಪಶ್ಚಿಮ ರಾಷ್ಟ್ರದ ವ್ಯಕ್ತಿ ಎಂಬುದೇ ಇದಕ್ಕೆ ಕಾರಣ. ಬ್ಯುಸಿನೆಸ್‌ ಮೀಟಿಂಗ್‌ಗಳಿಗೆ ಪಾಶ್ಚಿಮಾತ್ಯ ವ್ಯಕ್ತಿಯನ್ನು ಕರೆತಂದರೆ ಸಭೆಯಲ್ಲಿ ನೆರೆದವರೆಲ್ಲ ವಿಶೇಷವಾಗಿ ವರ್ತಿಸುತ್ತಾರೆ. ಅಂಥ ಕಡೆ ಹೋದಾಗಲೆಲ್ಲ ನನಗೆ “ನಾನೇ ದೇವರು’ ಎಂದನಿಸುವಂತಿರುತ್ತದೆೆ..” ಎಂದರವರು.    

Advertisement

ಇನ್ನು ಕಪ್ಪು ವರ್ಣೀಯ ವ್ಯಕ್ತಿಯ ವಿಷಯಕ್ಕೆ ಬಂದರೆ, ಅವರು ಸುಮಾರು ಹತ್ತು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಾರಂತೆ. ಇತ್ತೀಚೆಗಷ್ಟೇ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆೆ. ಅಲ್ಲದೆ ಅವರನ್ನು ಅಪಾರ್ಟ್‌ಮೆಂಟ್‌ನಿಂದಲೂ ಹೊರಹಾಕಲಾಗಿದೆ. ಈ ಎರಡೂ ಘಟನೆಗಳಿಗೂ ತಮ್ಮ ಕಪ್ಪು ಮೈ ಬಣ್ಣವೇ ಕಾರಣ ಎಂದು ಅವರು ಅನುಮಾನಿಸುತ್ತಾರೆ. ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ದಕ್ಷಿಣ ದೆಹಲಿಯಲ್ಲಿ ಆಫ್ರಿಕನ್‌ ಜನರಿಗೆ ಮನೆ ಬಾಡಿಗೆಗೆ ಸಿಗುವುದು ಬಹಳ ಕಷ್ಟ. ಏಕೆಂದರೆ ಆಫ್ರಿಕನ್ನರಿಗೆ ಬಾಡಿಗೆ ಮನೆ ಕೊಡಲು ಜನರಿಗೆ ಇಷ್ಟವಿರುವುದಿಲ್ಲ. ಇನ್ನು ಮನೆ ಸಿಕ್ಕರೂ ಓನರ್‌ ಬಂದು ಅವರನ್ನು ಹಠಾತ್ತಾಗಿ ಹೊರಹಾಕುವುದೋ ಅಥವಾ ಅವಧಿಗೂ ಮುನ್ನವೇ ಬಾಡಿಗೆ ಹಣ ಕೊಡಬೇಕು ಎಂದು ಪೀಡಿಸುವ ಸುದ್ದಿಗಳು ವರದಿಯಾಗುತ್ತಿರುತ್ತವೆ.      

ಈ ಡಚ್‌ ವ್ಯಕ್ತಿಗೆ ಬಿಳಿ ಬಣ್ಣ ಎಷ್ಟು ಸಹಕಾರಿಯಾಗಿದೆಯೆಂದರೆ ಅವರು ಮತ್ತವರ ಕುಟುಂಬದವರು ತಾವು ವಾಸಿಸುತ್ತಿರುವ ಗೇಟೆಡ್‌ ವಸತಿ ಸಮುದಾಯದಲ್ಲಿ ವಿಶೇಷ ಸ್ಥಾನಮಾನಕ್ಕೆ ಪಾತ್ರರಾಗಿದ್ದಾರೆ. ಆದಾಗ್ಯೂ ಆ ಅಪಾರ್ಟ್‌ಮೆಂಟ್‌ನಲ್ಲಿ ಈ ಕುಟುಂಬದವರು ಬಾಡಿಗೆಗಿದ್ದಾರಾದರೂ, ಮನೆ ಮಾಲೀಕರೆಲ್ಲ ತಿಂಗಳ ಸಭೆಗಳಲ್ಲಿ ಇವರನ್ನು ಆಹ್ವಾನಿಸುತ್ತಾರಂತೆ. ಈ ಸವಲತ್ತು ಅದೇ ಸಮುದಾಯದಲ್ಲಿ ವಾಸಿಸುವ ಭಾರತೀಯ ಬಾಡಿಗೆದಾರರಿಗಿಲ್ಲ!
ಡಚ್‌ ಮತ್ತು ಕಾಂಗೋ ವ್ಯಕ್ತಿಗಳ ಅನುಭವಗಳು, ಜಗತ್ತಿನ ಅನೇಕ ಉದಯೋನ್ಮುಖ ಮಾರುಕಟ್ಟೆ ಅರ್ಥವ್ಯವಸ್ಥೆಗಳಲ್ಲೂ ಪ್ರತಿಧ್ವನಿಸುತ್ತಿವೆ. ನಾನು ವಲಸೆ ಮತ್ತು ಜಾಗತೀಕರಣದ ಕುರಿತು ಸಂಶೋಧನೆ ನಡೆಸುತ್ತಿದ್ದೇನೆ. ನನ್ನ ಸಂಶೋಧನಾ ವಿಷಯವು ಮುಖ್ಯವಾಗಿ “ಅಭಿವೃದ್ಧಿ ಹೊಂದಿದ’ ರಾಷ್ಟ್ರಗಳಿಂದ  “ಅಭಿವೃದ್ಧಿ  ಹೊಂದುತ್ತಿರುವ’ ರಾಷ್ಟ್ರಗಳಿಗೆ ನಡೆಯುವ ವಲಸೆ ಪ್ರಕ್ರಿಯೆಯ ಮೇಲೆ ಕೇಂದ್ರಿತವಾಗಿದೆ. ಇದರಲ್ಲಿ ತಂತ್ರಜ್ಞಾನ, ಜನರು ಮತ್ತು ಆರ್ಥಿಕತೆಯ ವಲಸೆಯೂ ಇದೆ.

ಈ ವಿಷಯವಾಗಿ ಭಾರತದಲ್ಲಿ ಮತ್ತು ಅದಕ್ಕೂ ಮುನ್ನ  ದಕ್ಷಿಣ ಆಫ್ರಿಕಾದಲ್ಲಿ ನಾನು ನಡೆಸಿರುವ ಸಂಶೋಧನೆಯ ಆಧಾರದಲ್ಲಿ ಒಂದು  ಅಭಿಪ್ರಾಯಕ್ಕೆ ಬಂದಿದ್ದೇನೆ. ವಲಸಿಗರ ನಿತ್ಯದ ಅನುಭವಗಳಲ್ಲಿ ಅವರ ಜನಾಂಗೀಯ ಹಿನ್ನೆಲೆ, ಕಣ್ಣಿನ ಆಕಾರ, ಎತ್ತರ, ಬಣ್ಣಗಳೇ ಪ್ರಮುಖ ಪಾತ್ರವಹಿಸುತ್ತವೆ. 

ಒಬ್ಬ ಶ್ವೇತವರ್ಣೀಯ ವ್ಯಕ್ತಿ ತನ್ನ ಮೈಬಣ್ಣವೊಂದರ ಮೂಲಕವೇ ಹೇಗೆ ವ್ಯಾಪಾರವನ್ನು ಕುದುರಿಸಿಕೊಳ್ಳುತ್ತಾನೆ ಅಥವಾ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತಾನೆ ಎನ್ನುವುದನ್ನು ಗುರುತಿಸಲು ಅಥವಾ ಅಳೆಯಲು ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರಿಗೆ ಸಾಧ್ಯವಿಲ್ಲ.  ಏಕೆಂದರೆ ಬಿಳಿ ಬಣ್ಣದ ಲಾಭವನ್ನು ಅಷ್ಟು ಸುಲಭವಾಗಿ ಅಳೆಯಲು-ಗುರುತಿಸಲು ಸಾಧ್ಯವಿಲ್ಲ. 

ಬಿಳಿ ಬಣ್ಣದ ಅನುಕೂಲ: ದಕ್ಷಿಣ ಆಫ್ರಿಕಾದಲ್ಲಿ ಮತ್ತು ನಿರ್ದಿಷ್ಟವಾಗಿ ಭಾರತದಲ್ಲಿ, ಶ್ವೇತವರ್ಣೀಯ ವ್ಯಕ್ತಿಗಳು ಜನರಿಂದ ಪಾಸಿಟಿವ್‌ ಅಭಿಪ್ರಾಯವನ್ನು ಎದುರಿಸುತ್ತಾರೆ. ಜನರು ಇವರನ್ನು ಶ್ರೀಮಂತರೆಂದೂ, ಇವರಿಂದ ಆರ್ಥಿಕತೆಗೆ ಲಾಭವಿದೆಯೆಂದೂ ಮತ್ತು ಇವರೆಲ್ಲ “ಸಕ್ರಮ’ ವಲಸಿಗರೆಂದೇ ಭಾವಿಸುತ್ತಾರೆ. 

ಭಾರತದಲ್ಲಿ ಒಂದು ಅಂಶವಂತೂ ಎಲ್ಲದಕ್ಕಿಂತಲೂ ಎತ್ತರಕ್ಕೆ ನಿಲ್ಲುತ್ತದೆ. ನಾನು ಇದುವರೆಗೂ ಮಾತನಾಡಿಸಿದ ಬಹುತೇಕ ಎಲ್ಲಾ ಬಿಳಿಯ ವ್ಯಕ್ತಿಗಳೂ “ತಮ್ಮ ಮೈ ಬಣ್ಣದಿಂದಾಗಿ ಬಹಳ ಅನುಕೂಲ’  ಪಡೆದೆವೆಂದು ಹೇಳಿದರು. ಅವರೆಲ್ಲ, ಬಿಳಿಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ದೇಶದಿಂದ, ಶ್ವೇತವರ್ಣೀಯರು ಅಲ್ಪಸಂಖ್ಯಾತಗಿರುವ ದೇಶಕ್ಕೆ ವಲಸೆ ಬರುವುದರ ಲಾಭದ ಬಗ್ಗೆ ಅಚ್ಚರಿಯಿಂದ ಮಾತನಾಡುತ್ತಾರೆ. ಭಾರತದಂಥ ರಾಷ್ಟ್ರಗಳಲ್ಲಿ ಅವರೆಲ್ಲ ತಮ್ಮ ಮೈ ಬಣ್ಣದಿಂದಾಗಿ ಎಲ್ಲರಿಗಿಂತಲೂ ವಿಭಿನ್ನ ಸ್ಥಾನ ಪಡೆಯುತ್ತಾರೆೆ. ಇದಷ್ಟೇ ಅಲ್ಲ, ಇದರಿಂದಾಗಿ ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯೂ ಉತ್ತಮವಾಗಿದೆಯಂತೆ. ತಮಗೆ ನೈಟ್‌ಕ್ಲಬ್‌ಗಳಿಗೆ ಸುಲಭವಾಗಿ ಪ್ರವೇಶ ಸಿಗುತ್ತದೆ ಮತ್ತು ಜನ ತಮ್ಮನ್ನು ಕಾನ್ಸರ್ಟ್‌ಗಳಿಗೆ ಮುತುವರ್ಜಿಯಿಂದ ಕರೆದೊಯ್ಯುತ್ತಾರೆ ಎನ್ನುತ್ತಾರವರು. ಬೆಂಗಳೂರಿನಲ್ಲಿ ವಾಸಿಸುವ ಸುಮಾರು 20 ಅಮೆರಿಕನ್‌ ಯುವಕರನ್ನು ನಾನು ಮಾತನಾಡಿಸಿದೆ. “ಟಿಂಡರ್‌’ನಂಥ ಆ್ಯಪ್‌ಗ್ಳಲ್ಲಿ ತಮಗೆ ಹೆಚ್ಚು ಇಂಪಾರ್ಟೆನ್ಸ್‌ ಸಿಗುತ್ತದೆ ಎನ್ನುತ್ತಾರೆ ಅವರೆಲ್ಲ. 

ಇನ್ನು ಬಹಳಷ್ಟು ಉದ್ಯೋಗದಾತರಿಗೂ ತಮ್ಮ ಉದ್ಯೋಗಿಗಳ “ಬಿಳಿ ಬಣ್ಣ’ ಬಹಳ ಲಾಭದಾಯಕ ಅಂಶವೂ ಹೌದು. ದಕ್ಷಿಣ ಭಾರತದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಹೆಡ್‌ಮಾಸ್ಟರ್‌ ಆಗಿರುವ 60 ವರ್ಷದ ಬ್ರಿಟಿಷ್‌ ವ್ಯಕ್ತಿಯನ್ನು ನಾನು ಮಾತನಾಡಿಸಿದೆ. ಒಮ್ಮೆ ಅವರು ವಿದ್ಯಾರ್ಥಿಗಳ ಪೋಷಕರೆದುರು ಭಾಷಣ ಮಾಡುತ್ತಿದ್ದರಂತೆ. ಭಾಷಣದ ಮಧ್ಯದಲ್ಲಿ ಅವರು, “ನನಗೆ ಭಾರತಕ್ಕೆ ನೆಲೆ ಬದಲಿಸಿರುವುದಕ್ಕೆ ಸಂತಸವಾಗುತ್ತಿದೆ. ಏಕೆಂದರೆ ನನ್ನ ಪೂರ್ವಿಕರಲ್ಲಿ ಒಬ್ಬರು ಭಾರತೀಯರಾಗಿದ್ದರು’ ಎಂದು ಹೇಳಿದರಂತೆ. ಈ ಬ್ರಿಟಿಷ್‌ ವ್ಯಕ್ತಿ ತಮ್ಮ ಪೂರ್ವಿಕರಲ್ಲೊಬ್ಬರು “ಭಾರತೀಯರಾಗಿದ್ದರು’ ಎಂದು ಹೇಳಿದ್ದನ್ನು ಕೇಳಿ, ಆ ಶಾಲೆಯ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದರಂತೆ! ಸತ್ಯವೇನೆಂದರೆ ಆ ಶಾಲೆ ಸ್ಪರ್ಧಾತ್ಮಕವಾಗಿ ಮುಂದಿರುವುದಕ್ಕೆ ಮತ್ತು ಛಾಪು ಮೂಡಿಸಿರುವುದಕ್ಕೆ… ಅದರ ಹೆಡ್‌ಮಾಸ್ಟರ್‌ “ಬಿಳಿ ವ್ಯಕ್ತಿ’ಯಾಗಿರುವುದೂ ಕಾರಣ!

ಕಪ್ಪು ಬಣ್ಣವೂ, ಬಡತನವೂ: ಭಾರತದಲ್ಲಿ, ಅದರಲ್ಲೂ ಉತ್ತರ ಭಾರತದಲ್ಲಿ ಕಪ್ಪು ಬಣ್ಣವನ್ನು ಬಡತನ ಮತ್ತು ಕೆಳ ಜಾತಿಯೊಂದಿಗೆ ಸಮೀಕರಿಸಲಾಗುತ್ತದೆ. ಜನರಲ್ಲಿನ ಈ ಪೂರ್ವಗ್ರಹವನ್ನು ಬ್ರಿಟಿಷ್‌ ವಸಾಹತು ಉಲ್ಬಣಗೊಳಿಸಿಬಿಟ್ಟಿತು. ಭಾರತೀಯರು ತಮಗೆ ಎದುರಾಗುವ ವ್ಯಕ್ತಿಯ ಮೈಬಣ್ಣದ ಆಧಾರದ ಮೇಲೆ ಆತನನ್ನು ಅಳೆಯುತ್ತಾರೆ. ಕಪ್ಪು ಬಣ್ಣದ ಭಾರತೀಯರೂ ದಿನನಿತ್ಯ ಈ ವಾಸ್ತವದೊಂದಿಗೆ ಸೆಣಸುತ್ತಲೇ ಇರುತ್ತಾರಾದರೂ, ಅವರಿಗಿಂತಲೂ ಆಫ್ರಿಕಾದ ಜನರಿಗೆ ಮಾತ್ರ ಈ “ಪೂರ್ವಗ್ರಹ’ ಹೆಚ್ಚಾಗಿ ಬಾಧಿಸುತ್ತದೆ. ಇತ್ತೀಚೆಗೆ ಉತ್ತರ ಭಾರತದಲ್ಲಿ ಆಫ್ರಿಕನ್‌ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಗಳು ಈ ಅಂಶವನ್ನು ನಿರ್ದಯವಾಗಿ ಸಾದರ ಪಡಿಸುತ್ತಿವೆ.  

ಭಾರತದಲ್ಲಿ ಶ್ವೇತವರ್ಣವನ್ನು ಮೇಲ್ಜಾತಿಯೊಂದಿಗೆ ಥಳಕು ಹಾಕಲಾಗುತ್ತದೆ. ಬಹುತೇಕ ಸಂದರ್ಭದಲ್ಲಿ ಮೇಲ್ಜಾತಿಯವರು ಸಮಾಜೋ ಆರ್ಥಿಕವಾಗಿ ಉತ್ತಮ ಸ್ತರದಲ್ಲಿರುವುದರಿಂದಲೋ ಏನೋ ಬಿಳಿ ಬಣ್ಣವನ್ನೂ ಮೇಲ್‌ಸ್ತರಕ್ಕೇರಿಸಲಾಗಿದೆ. ಈ ಕಾರಣಕ್ಕಾ ಗಿಯೇ ವಿದೇಶಗಳ ಬಿಳಿ ವ್ಯಕ್ತಿಗಳು ಭಾರತೀಯರ ಈ “ಉತ್ತಮ ಪೂರ್ವಗ್ರಹದ’ ಲಾಭ ಪಡೆಯುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿ ಶ್ವೇತವರ್ಣೀಯರೂ ಇದ್ದಾರೆ. ಅಲ್ಲಿಂದ ಭಾರತಕ್ಕೆ ಬಂದ ಅಂಥ ಆಫ್ರಿಕನ್‌ ಪ್ರಜೆಯೊಬ್ಬರನ್ನು ಮಾತನಾಡಿಸಿದಾಗ ಅವರಂದರು: “”ಭಾರತದಲ್ಲಿ ನನಗೆ ಬಹಳ ಆಪ್ತ ಸ್ವಾಗತ ಸಿಗುತ್ತದೆ. ಏಕೆಂದರೆ ಎಲ್ಲರೂ ನನ್ನನ್ನು ಪಾಶ್ಚಿಮಾತ್ಯ ರಾಷ್ಟ್ರದ ಬಿಳಿಯ ಎಂದೇ ಭಾವಿಸಿದ್ದಾರೆ”

ಬಣ್ಣದ ಲಾಭವ ಅಳೆಯುವುದೆಂತು?: ಜಾಗತಿಕ ಆರ್ಥಿಕತೆಯಲ್ಲಿ ಶ್ವೇತ ವರ್ಣಕ್ಕೆ ಇರುವ ಲಾಭವನ್ನು ಅಳತೆ ಮಾಡುವುದಕ್ಕೆ ಯಾವುದೇ ಸುಲಭ ಮಾರ್ಗಗಳಿಲ್ಲ. ಆದರೂ, ಅರ್ಥಶಾಸ್ತ್ರಜ್ಞರು ಈ ವಿಷಯದಲ್ಲಿ ಸಮಾಜಶಾಸ್ತ್ರಜ್ಞರು ಮತ್ತು ವಸಾಹತು ಇತಿಹಾಸಕಾರರ ಜೊತೆ ಕೈ ಜೋಡಿಸಿ ಕೆಲಸ ಮಾಡಬೇಕು. ಏಕೆಂದರೆ ಭಾರತ ಮತ್ತು ಚೀನಾದಂಥ ರಾಷ್ಟ್ರಗಳು ಜಾಗತಿಕ ಜಿಡಿಪಿ ಯಲ್ಲಿ ಹೆಚ್ಚೆಚ್ಚು ಭಾಗವನ್ನು ಪ್ರತಿನಿಧಿಸುತ್ತಾ ಸಾಗುತ್ತಿವೆ. ಈ ದೇಶಗಳು ಬೆಳೆದಂತೆಲ್ಲ, ಅವುಗಳಲ್ಲಿ  “ಶ್ವೇತ ಸವಲತ್ತೂ’  ಬೆಳೆಯುತ್ತದೆ. 

ನನ್ನ ಸಂಶೋಧನೆಗಳಲ್ಲಿ “ಜಾಗತಿಕ ಜನಾಂಗೀಯ ಆರ್ಥಿಕತೆಯ ಬಗ್ಗೆಯೂ ನಾವು ಮಾತನಾಡುವುದು ಮುಖ್ಯವಾಗುತ್ತದೆ’ ಎಂದು ನಾನು ವಾದಿಸಿದ್ದೇನೆ. ಬೆಳೆಯುತ್ತಿರುವ ಅರ್ಥವ್ಯವಸ್ಥೆಯಲ್ಲಿ ಉದ್ಯಮಿಗಳ ಪಾತ್ರದ ಬಗ್ಗೆ ಯಾರಾದರೂ ಸಂಶೋಧನೆ ನಡೆಸುತ್ತಿದ್ದರೆ ಅಥವಾ  ಕಾರ್ಮಿಕ ಮಾರುಕಟ್ಟೆಯ ಡೈನಮಿಕ್ಸ್‌ಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅವರು ಇವುಗಳೆಲ್ಲದರಲ್ಲಿ ಜನಾಂಗೀಯತೆ, ಲಿಂಗ ಮತ್ತು ಬಣ್ಣದ ಪಾತ್ರವನ್ನೂ ಪರಿಗಣಿಸಬೇಕು. ಹಾಗಾದಾಗ, ದಿನನಿತ್ಯದ ಜಾಗತಿಕ ವ್ಯವಹಾರಗಳೆಡೆಗಿನ ನಮ್ಮ ಜ್ಞಾನವೂ ವಿಸ್ತಾರವಾಗುತ್ತದೆ.

(ಲೇಖಕಿ, ದಕ್ಷಿಣ ಆಫ್ರಿಕಾದ ವಿಟ್ಸ್‌ ವಿ.ವಿ.ಯ “ಸೆಂಟರ್‌ ಫಾರ್‌ ಇಂಡಿಯನ್‌ ಸ್ಟಡೀಸ್‌’ ವಿಭಾಗದಲ್ಲಿ ಸಹಾಯಕ ಸಂಶೋಧಕಿಯಾಗಿದ್ದಾರೆ) 

– ಮೆಲಿಸ್ಸಾ ಟಾಂಡಿವೆ

Advertisement

Udayavani is now on Telegram. Click here to join our channel and stay updated with the latest news.

Next