Advertisement

ನಮ್ಮಲ್ಲಿ ವಿಶ್ವಾಸವಿಡಿ ಸಾಲ ಮನ್ನಾ ನಿಶ್ಚಿತ

12:30 AM Jan 06, 2019 | |

ರಾಯಚೂರು: ರಾಜ್ಯದ ರೈತರು ಯಾವುದೇ ಕಾರಣಕ್ಕೆ ಆತಂಕ ಪಡಬೇಕಾದ ಅಗತ್ಯವಿಲ್ಲ. ಸಾಲ ಮನ್ನಾ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ. ಅದಕ್ಕಾಗಿ ಸರ್ಕಾರದ ಮೇಲೆ ವಿಶ್ವಾಸ ಇರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. 

Advertisement

ಸಿಂಧನೂರಿನ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಪಶು ಮತ್ತು ಮತ್ಸéಮೇಳಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದ 6.5 ಕೋಟಿ ಜನತೆಗೆ ಉತ್ತಮ ಜೀವನ ರೂಪಿಸುವ ಚಿಂತನೆ ಇದೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಸಾಲ ಮನ್ನಾದಿಂದ ಕೇವಲ 800 ಮಂದಿ ಮಾತ್ರ ಅನುಕೂಲವಾಗಿದೆ ಎಂದು ಟೀಕಾ ಪ್ರಹಾರ ನಡೆಸಿದ ಬೆನ್ನಲ್ಲೇ ಸಿಎಂ ಈ ಮಾತುಗಳನ್ನಾಡಿದ್ದಾರೆ.

ರೈತರ ಸಾಲಮನ್ನಾ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಫೆಬ್ರವರಿಯಲ್ಲಿ ಬಜೆಟ್‌ ಮಂಡಿಸಲಾಗುತ್ತದೆ. ಆಗ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಂಪೂರ್ಣ ಸಾಲ ಮನ್ನಾದ ಘೋಷಣೆ ಮಾಡುವೆ. ಈಗಾಗಲೇ ಸಾಲ ಮನ್ನಾಕ್ಕಾಗಿ ಮೊದಲ ಕಂತು ಬಿಡುಗಡೆ ಮಾಡಲು 6,500 ಸಾವಿರ ಕೋಟಿ ಮೀಸಲಿಟ್ಟಿರುವುದಾಗಿ ತಿಳಿಸಿದರು.

ಅತ್ಯಂತ ಸುಲಭ ಮಾರ್ಗ: ದೇಶದಲ್ಲಿಯೇ ಅತ್ಯಂತ ಸುಲಭ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಸಾಲ ಮನ್ನಾ ಮಾಡುತ್ತಿದ್ದೇವೆ. ಆದರೆ, ಸಹಕಾರಿ ಬ್ಯಾಂಕ್‌ಗಳಲ್ಲಿ ಕೆಲ ಕಾರ್ಯದರ್ಶಿಗಳೇ ಸಾಲ ಮನ್ನಾದ ಲಾಭ ಪಡೆಯುತ್ತಿರುವ ಕಾರಣ ಕೆಲ ಷರತ್ತು ವಿ ಧಿಸಲಾಗಿದೆ. ಸಾಲ ಮನ್ನಾಕ್ಕೆ ಬೇರೆ ಇಲಾಖೆಗಳ ಹಣ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಯಾವುದೇ ಇಲಾಖೆಯ ಒಂದು ರೂ. ಹಣ ಬಳಸಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ 50 ಸಾವಿರ ರೂ. ಮನ್ನಾ ಆಗಿದ್ದ ರೈತರಿಗೂ ನಾನು ಘೋಷಿಸಿದ ಸಾಲಮನ್ನಾಕ್ಕೂ ಸಂಬಂಧವಿಲ್ಲ. ಆಗ ಸೌಲಭ್ಯ ಪಡೆದವರೂ ಈಗಲೂ ಸಾಲ ಮನ್ನಾಕ್ಕೆ ಅರ್ಹರು ಎಂದು ಸ್ಪಷ್ಟಪಡಿಸಿದರು.

ರಾಜ್ಯದ ರೈತರು, ಕೂಲಿ ಕಾರ್ಮಿಕರ ಪರಿಸ್ಥಿತಿ ಗಮನಕ್ಕಿದೆ. ಭೂಮಿಯಿಲ್ಲದ ಕುಟುಂಬಕ್ಕೆ ಉದ್ಯೋಗ ನೀಡಬೇಕೆನ್ನುವ ಚಿಂತನೆ ಇದೆ. 4.5 ಲಕ್ಷ ಬೀದಿ ವ್ಯಾಪಾರಿಗಳಿದ್ದಾರೆ. ಕನಿಷ್ಠ ಒಂದು ಸಾವಿರದಿಂದ 10 ಸಾವಿರದವರೆಗೂ ಬಡ್ಡಿರಹಿತ ಸಾಲ ಕೊಡಲಾಗುವುದು. ಮಹಿಳಾ ಗುಂಪುಗಳಿಗೆ ಕಾಯಕ ಯೋಜನೆಯಡಿ ಐದು ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು ಎಂದರು.

Advertisement

ಕೊಪ್ಪಳದಲ್ಲಿ ಆರು ಜನರು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಗೊತ್ತಾಯಿತು. ಕೌಟುಂಬಿಕ ಸಮಸ್ಯೆ ಎಂದು ತಿಳಿದಿದೆ. ಆದರೆ, ಮಾಧ್ಯಮದವರು ಸಾಲಬಾಧೆಯಿಂದ ಎಂದು ಬಿತ್ತರಿಸುವ ಮೂಲಕ ನಮಗೆ ಆತಂಕ ಮೂಡಿಸುತ್ತೀರಿ ಎಂದರು.

ಹೊಸ ಕೃಷಿ ನೀತಿ: ಶೀಘ್ರದಲ್ಲಿಯೇ ಹೊಸ ಕೃಷಿ ನೀತಿ ಜಾರಿಗೊಳಿಸುವ ಚಿಂತನೆ ಇದೆ. ಸೋನಾಮಸೂರಿ ಭತ್ತಕ್ಕೆ 2 ಸಾವಿರ ರೂ. ಬೆಂಬಲ ಬೆಲೆ ನೀಡಲು ಕೋರಿದ್ದಾರೆ. ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು. ಕೃಷಿ ಉತ್ಪನ್ನ ಖರೀದಿಗಾಗಿ ಕೇಂದ್ರ ಸರ್ಕಾರದ ಮುಂದೆ ಅರ್ಜಿ ಹಿಡಿದು ಹೋಗದಿರಲು ನಿರ್ಧರಿಸಿದ್ದೇನೆ ಎಂದರು. ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ, ಕೃಷಿ ಸಚಿವ ಶಿವಶಂಕರ ರೆಡ್ಡಿ ಸೇರಿ ಜಿಲ್ಲೆಯ ಶಾಸಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next