Advertisement

ನಂಬಿಕೆಯ ಬೀಜದಿಂದ ಬದುಕು ಬೆಳೆಯುತ್ತದೆ!

12:07 AM May 07, 2021 | Team Udayavani |

ವಿಶ್ವಾಸ, ನಂಬಿಕೆ ಎನ್ನುವುದು ಸಂಪೂರ್ಣ. ಇವುಗಳ ಪೂರ್ಣತ್ವದಲ್ಲಿ ಕೂದಲಿನ ಎಳೆಯಷ್ಟು ಕೊರತೆ ಇದ್ದರೂ ಅವು ವಿಶ್ವಾಸ, ನಂಬಿಕೆ ಎನ್ನಿಸಿಕೊಳ್ಳು ವುದಿಲ್ಲ. ನಮ್ಮನ್ನು ಸೃಷ್ಟಿಸಿದ ಶಕ್ತಿ ನಮ್ಮನ್ನು ಉದ್ಧರಿಸುತ್ತದೆ ಎಂಬ ಪೂರ್ಣ ನಂಬಿಕೆಯು ನೂರಾರು ಸಂಕಷ್ಟಗಳ ನಡುವೆಯೂ ಆಶಾವಾದದ ಬೆಳ್ಳಿಕಿರಣ ವನ್ನು ಪಸರಿಸುತ್ತದೆ. ಇರುವುದರಲ್ಲಿ ತೃಪ್ತಿಪಡುವ, ಒಳ್ಳೆಯ ನಾಳೆಗಳು ಬರಲಿವೆ ಎಂಬ ಭರವಸೆಯನ್ನು ಹುಟ್ಟುಹಾಕುತ್ತವೆ.

Advertisement

ಇಲ್ಲೊಂದು ಸುಂದರ ಕಥೆಯಿದೆ. ಇದು ದೇವರು ಮತ್ತು ಭಕ್ತನ ನಡುವಣ ಭಕ್ತಿ, ನಂಬಿಕೆ, ವಿಶ್ವಾಸಗಳ ಕುರಿತಾಗಿದೆ. ಆದರೆ ಬದುಕಿನ ಪ್ರತೀ ಯೊಂದು ಮಗ್ಗುಲಿಗೂ ಅದನ್ನು ಅನ್ವಯಿಸಿ ಕೊಂಡು ಭರವಸೆಯನ್ನು ತಾಳುವುದಕ್ಕೆ ಊರುಗೋಲಿನಂತಿದೆ ಈ ಕಥೆ.

ಒಮ್ಮೆ ನಾರದರು ಪ್ರಪಂಚ ಪರ್ಯಟನೆ ಪೂರೈಸಿ ವೈಕುಂಠದತ್ತ ಮರು ಪ್ರಯಾಣದಲ್ಲಿದ್ದರು. ಶ್ರೀಮನ್ನಾರಾಯಣ ಸ್ಮರಣೆಯನ್ನು  ಮಾಡುತ್ತ ಅವರು ಹೋಗುತ್ತಿರಬೇಕಾ ದರೆ ಒಂದೂರಿನ ಹೊರಭಾಗದಲ್ಲಿ ಅರಳೀ ಮರದ ಕೆಳಗೆ ತಪಸ್ಸಿಗೆ ಕುಳಿತಿದ್ದ ಸಾಧುವೊಬ್ಬರು ಸಿಕ್ಕಿದರು. ಅವರು ನಾರ ದರನ್ನು ಕರೆದು ಮಾತನಾಡಿಸಿದರು, ನಾರದರು ವೈಕುಂಠಕ್ಕೆ ಹೋಗುತ್ತಿರುವ ವಿಚಾರ ತಿಳಿದು, ತನಗೆ ಯಾವಾಗ ಮೋಕ್ಷ ಸಿಗುತ್ತದೆ ಎನ್ನುವುದಾಗಿ ಶ್ರೀಹರಿಯನ್ನು ವಿಚಾರಿಸುವಂತೆ ಆ ಸಾಧು ಕೇಳಿಕೊಂಡರು.

ನಾರದರು ಒಪ್ಪಿ ಪ್ರಯಾಣ ಮುಂದುವರಿಸಿದರು. ಅದೇ ಊರಿನಲ್ಲಿ ಒಬ್ಬ ಚಮ್ಮಾರನೂ ನಾರದರನ್ನು ಕರೆದು ಮಾತನಾಡಿಸಿದ. ತನ್ನ ಗುಡಿಸಲಿನ ಮುಂಭಾಗದಲ್ಲಿ ಕುಳಿತು ಖುಷಿ ಖುಷಿಯಾಗಿ ಚಪ್ಪಲಿ ಹೊಲಿಯುತ್ತಿದ್ದ ಅವನೂ ತನಗೆ ಯಾವಾಗ ಮೋಕ್ಷ ಎಂಬುದಾಗಿ ವಿಷ್ಣುವನ್ನು ಕೇಳುವಂತೆ ನಾರದರನ್ನು ವಿನಂತಿಸಿಕೊಂಡ. ಇದಕ್ಕೂ ಒಪ್ಪಿಕೊಂಡ ನಾರದರು ಪ್ರಯಾಣ ಮುಂದುವರಿಸಿದರು.

ವೈಕುಂಠದಲ್ಲಿ ನಾರದರು ಸಾಧುಗಳ ಮೋಕ್ಷದ ಬಗ್ಗೆ ವಿಷ್ಣುವನ್ನು ಕೇಳಿದರು. “ಕನಿಷ್ಠ ಇನ್ನೊಂದು ಹತ್ತು ಜನ್ಮಗಳಾದ  ಬಳಿಕವೇ ಅವರಿಗೆ ಜೀವನ್ಮುಕ್ತಿ’ ಎಂದ ವಿಷ್ಣು. ಚಮ್ಮಾರನ ಬಗ್ಗೆ ನಾರದರು ಕೇಳಿದಾಗ, “ಆತ ಈ ಜನ್ಮವಾದ ಕೂಡಲೇ ನನ್ನಲ್ಲಿ ಐಕ್ಯನಾಗುತ್ತಾನೆ’ ಎಂಬ ಉತ್ತರ ಶ್ರೀಹರಿಯಿಂದ ಬಂತು.

Advertisement

ನಾರದರಿಗೆ ವಿಚಿತ್ರ ಎನಿಸಿತು. “ಅದ್ಯಾಕೆ ಹಾಗೆ’ ಎಂದು ಪ್ರಶ್ನಿಸಿದರು.

“ಅದನ್ನು ಅರ್ಥ ಮಾಡಿಕೊಳ್ಳಲು ನಿನಗೆ ಒಂದು ಉಪಾಯ ಹೇಳುತ್ತೇನೆ. ಈಗ ಹಿಂದಿರುಗಿ ಹೋಗಿ ಇಬ್ಬರಿಗೂ ನಾನು ಕೊಟ್ಟ ಉತ್ತರಗಳನ್ನು ತಿಳಿಸು. ಅವರಿಬ್ಬರೂ ವೈಕುಂಠ ದಲ್ಲಿ ನಾನು ಏನು ಮಾಡುತ್ತಿದ್ದೆ ಎಂದು ಕೇಳುತ್ತಾರೆ. ಅದಕ್ಕೆ, ವಿಷ್ಣು ಸೂಜಿಯ ರಂಧ್ರದಲ್ಲಿ ಆನೆ ಯೊಂದನ್ನು ಹೊಗ್ಗಿಸಲು ಪ್ರಯತ್ನಿಸು ತ್ತಿದ್ದ ಎನ್ನು. ಅವರು ಕೊಡುವ ಉತ್ತರದಿಂದ ನಿನಗೇ ಅರ್ಥವಾಗುತ್ತದೆ’ ಎಂದು ಹೇಳಿ ಶ್ರೀಮನ್ನಾರಾಯಣ ನಾರದರನ್ನು ಕಳುಹಿಸಿಕೊಟ್ಟ.

ನಾರದರು ಸಾಧುಗಳ ಬಳಿಗೆ ಹೋಗಿ ಶ್ರೀಹರಿಯ ಉತ್ತರವನ್ನು ತಿಳಿಸಿದರು. ಅವರು ಬೇಸರಗೊಂಡರು. ಬಳಿಕ ವಿಷ್ಣು ವೈಕುಂಠದಲ್ಲಿ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ನಾರದರು ಶ್ರೀಹರಿ ಹೇಳಿಕೊಟ್ಟಂತೆಯೇ ಉತ್ತರಿಸಿದರು. ಸಾಧು ನಕ್ಕು, “ಅದೆಲ್ಲಾದರೂ ಆಗುವ ಹೋಗುವ ಮಾತೇ’ ಎಂದರು.

ನಾರದರು ಅಲ್ಲಿಂದ ಹೊರಟು ಚಮ್ಮಾರನ ಬಳಿ ಬಂದರು. ಶ್ರೀಹರಿಯ ಉತ್ತರವನ್ನು ತಿಳಿಸಿದರು. ಆತನಿಂದಲೂ ನಾರಾಯಣನೇನು ಮಾಡುತ್ತಿದ್ದ ಎಂಬ ಪ್ರಶ್ನೆ ಬಂತು. ನಾರದರ ಉತ್ತರವನ್ನು ಕೇಳಿ ಆತ ಆನಂದದಿಂದ ಕುಣಿದಾಡಿದ. “ಏನಾಯಿತು’ ಎಂಬ ನಾರದರ ಪ್ರಶ್ನೆಗೆ, “ದೇವರ ಲೀಲೆ ಎಂದರೆ ಹೀಗಪ್ಪ! ಅಸಾ ಧ್ಯವನ್ನೂ ಆತ ಸಾಧ್ಯ ಮಾಡುತ್ತಾನೆ. ಪುಟ್ಟ ಬೀಜದಿಂದ ಬೃಹದಾಕಾರದ ಮರ ಹುಟ್ಟುವಂತೆ ಮಾಡುವ ದೇವರಿಗೆ ಸೂಜಿಯ ರಂಧ್ರದಲ್ಲಿ ಆನೆಯನ್ನು ತೂರಿಸುವುದೆಷ್ಟರ ಮಾತು!’ ಎಂದು ಚಮ್ಮಾರ ಹೇಳಿದ.

ನಾರದರಿಗೆ ಎಲ್ಲವೂ ಅರ್ಥ ವಾಯಿತು. ವಿಶ್ವಾಸ, ನಂಬಿಕೆ ಎಂದರೆ ಹೀಗೆ!

( ಸಾರ ಸಂಗ್ರಹ )

Advertisement

Udayavani is now on Telegram. Click here to join our channel and stay updated with the latest news.

Next