ಬೆಳಗಾವಿ: ದ್ವಿಚಕ್ರ ವಾಹನದ ಮೇಲೆ ಹಿಂಬದಿ ಕುಳಿತುಕೊಂಡು ಚಾಕುವಿನಿಂದ ವ್ಯಕ್ತಿಯ ಕುತ್ತಿಗೆ ಕೊಯ್ದು ಕೊಲೆ ಮಾಡಲು ಯತ್ನಿಸಿದ್ದ ಮಹಿಳೆಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಇಲ್ಲಿನ 9ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ಮಹತ್ವದ ತೀರ್ಪು ನೀಡಿದೆ.
ಮೂಲತಃ ಸೋನಟ್ಟಿ ಗ್ರಾಮದ ಸದ್ಯ ಕಾಕತಿ ಗ್ರಾಮದ ಲಕ್ಷ್ಮೀ ನಗರದ ಈರವ್ವ ಸಿದ್ದಪ್ಪ ಮುಚ್ಚಂಡಿಗೆ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಗುರುರಾಜ ಗೋಪಾಲಾಚಾರ್ಯ ಶಿರೋಳ ತೀರ್ಪು ನೀಡಿದ್ದಾರೆ.
2017ರಲ್ಲಿ ಸೋನಟ್ಟಿ ಗ್ರಾಮದಲ್ಲಿ ಆರೋಪಿ ಈರವ್ವಳ ಮಗ ಕಳ್ಳಭಟ್ಟಿ ಸಾರಾಯಿ ತುಂಬಿಕೊಂಡು ಸೈಕಲ್ ಮೇಲೆ ಹೋಗುವಾಗ ಹೊನಗಾ-ದೇವಗಿರಿ ಮಧ್ಯದ ಬಾವಿಯಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದನು. ಈತನನ್ನು ಸಿದ್ಧನಾಥ ರಾಜಕಟ್ಟಿ ಹಾಗು ಶಾನೂರ ರಾಜಕಟ್ಟಿ ಎಂಬವರೇ ಕೊಲೆ ಮಡಿದ್ದಾರೆ ಎಂದು ಸಂಶಯಪಟ್ಟದ್ದಳು. 22 ನವೆಂಬರ್ 2019ರಲ್ಲಿ ದ್ವಿಚಕ್ರ ವಾಹನದ ಮೇಲೆ ಶಾನೂರ ರಾಜಕಟ್ಟಿ ಹೊರಟಾಗ ಈತನ ಹಿಂದೆ ಕುಳಿತುಕೊಂಡು ಕುತ್ತಿಗೆ ಕೊಯ್ದು ಕೊಲೆ ಮಾಡಲು ಯತ್ನಿಸಿದ್ದಳು. ಈ ಬಗ್ಗೆ ಕಾಕತಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮುಖ್ಯ ಪೇದೆ ಎ.ಬಿ. ಕುಂಡೇದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರು ವಾದ-ವಿವಾದ ಆಲಿಸಿ ಆರೋಪಿ ಈರವ್ವಳಿಗೆ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಬಿ.ಎಸ್. ಕೂಗುನವರ ವಾದ ಮಂಡಿಸಿದ್ದರು.
ಇದನ್ನೂ ಓದಿ: ವಿಜಯಪುರ: ಜ್ಞಾನಯೋಗಾಶ್ರಮದಲ್ಲಿದ್ದ ಸಿದ್ದೇಶ್ವರಶ್ರೀಗಳ ತಾತ್ಕಾಲಿಕ ಚಿತಾಕಟ್ಟೆ ತೆರವು