Advertisement

Belagavi ಕಾಂಗ್ರೆಸ್ ಒಳಜಗಳ: ಸತೀಶ್ ಬೆಂಬಲಕ್ಕೆ ನಿಂತ ಅಣ್ಣ ರಮೇಶ್ ಜಾರಕಿಹೊಳಿ

02:54 PM Jan 15, 2025 | Team Udayavani |

ಬೆಳಗಾವಿ :ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡ ‌ನಿರ್ಮಾಣ ವಿಚಾರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಒಳಜಗಳದಲ್ಲಿ ಸಚಿವ ಸತೀಶ ಜಾರಕಿಹೊಳಿ ಬೆಂಬಲಕ್ಕೆ ಅವರ ಅಣ್ಣ ಬಿಜೆಪಿ ರಮೇಶ ಜಾರಕಿಹೊಳಿ ನಿಂತಿದ್ದಾರೆ.

Advertisement

ಬೆಳಗಾವಿಯಲ್ಲಿ ಬುಧವಾರ(ಜ15) ದಿಢೀರ್ ಸುದ್ದಿಗೋಷ್ಠಿ ನಡೆಸಿದ ರಮೇಶ್ ಜಾರಕಿಹೊಳಿ ”ಕಾಂಗ್ರೆಸ್ ಕಚೇರಿ ವಿಚಾರವಾಗಿ ಧ್ವನಿ ಎತ್ತಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಸೈಲೆಂಟ್ ಆಗಿದ್ರೆ ಸತೀಶ್ ಜಾರಕಿಹೊಳಿಗೆ ಉಳಿಗಾಲವಿಲ್ಲ” ಎಂದರು.

”ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾದ ಬಳಿಕ ಕಟ್ಟಡ ನಿರ್ಮಾಣಕ್ಕೆ ಒಂದು ಕೋಟಿ ರೂ. ಕೊಟ್ಟಿದ್ದೆ, ಒಟ್ಟು 1. 27 ,ಕೋಟಿ ರೂಪಾಯಿ ನಾನೇ ಕೊಟ್ಟಿದ್ದೇನೆ. ಕಟ್ಟಡ ನಿರ್ಮಾಣದಲ್ಲಿ ಗೋಲ್‌ಮಾಲ್ ಆಗಿದೆ‌‌‌,ಮುಂದಿನ ದಿನಗಳಲ್ಲಿ ಅದನ್ನು ಹೇಳುತ್ತೇನೆ. ಕಾಂಗ್ರೆಸ್ ಕಚೇರಿ ನಾನೇ ನಿರ್ಮಾಣ ಮಾಡಿದ್ದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳುತ್ತಿರುವುದು ತಪ್ಪು. ಆಗ ಇರುವ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು 20 ರಿಂದ 25 ಲಕ್ಷ ರೂ.ಹಣ ನೀಡಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ್ ಎಷ್ಟು ಹಣ ಕೊಟ್ಟಿದ್ದಾರೆ ಎಂದು ನನಗೆ ಗೊತ್ತಿಲ್ಲ. ಕಚೇರಿ ಕಟ್ಟಡ ನಿರ್ಮಾಣ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಸುಳ್ಳು ಹೇಳಿದ್ದಾರೆ, ಅದನ್ನು ಖಂಡಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಕಿಡಿ ಕಾರಿದರು.

ಕಾಂಗ್ರೆಸ್‌ ಕಚೇರಿ ಇರುವ ಜಾಗ ಮಾಜಿ ಕೇಂದ್ರ ಸಚಿವ ಬಿ. ಶಂಕರಾನಂದ ಹೆಸರಿನಲ್ಲಿತ್ತು. ಬಿ.ಶಂಕರಾನಂದ ಮಕ್ಕಳ ಬಳಿ ಜಾಗ ಕಚೇರಿಗೆ ಬಿಟ್ಟು ಕೊಡಲು ಮನವೊಲಿಸಿದೆ. ಬಳಿಕ ಸಚಿವ ಸಂಪುಟ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿ ಕಟ್ಟಡಕ್ಕೆ ಜಾಗ ಮಂಜೂರಾಯಿತು. ಜಾಗ ಫ್ರೀ ಆಗಿ ಕೊಡಬಹುದಿತ್ತು, ಆದರೆ 54 ಲಕ್ಷ ರೂ.ನಿಗದಿ ಮಾಡಿದರು. ಹಣ ಕಡಿಮೆ ಮಾಡಲು ಪ್ರಯತ್ನ ಪಟ್ಟೆ ಆದರೂ ಆಗಲಿಲ್ಲ.ಆಗ ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಹಣ ತುಂಬಲು ಮನವಿ ಮಾಡಿದರು. ಒಂದೇ ಹಂತದಲ್ಲಿ ಕಾಂಗ್ರೆಸ್ ಕಚೇರಿಗೆ 54 ಲಕ್ಷ ರೂಪಾಯಿ ಕಟ್ಟಬೇಕಿತ್ತು. ಅದು ಬಹಳ ಆಗುತ್ತದೆ ಎಂದು ಎರಡು ಹಂತದಲ್ಲಿ ಹಣ ಪಾವತಿಗೆ ಮನವಿ ಮಾಡಿ, ಮೊದಲ ಕಂತು 27 ಲಕ್ಷರೂ. ಹಣವನ್ನು ತುಂಬಿದೆ. ಜಾಗ ಖರೀದಿ ಆಯಿತಾದರೂ ಕಟ್ಟಡ ಕಾಮಗಾರಿ ಆರಂಭವಾಗಿರಲಿಲ್ಲ” ಎಂದು ಹೇಳಿದರು.

ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹಸ್ತಕ್ಷೇಪ ವಿಚಾರ ಕುರಿತು ಪ್ರತಿಕ್ರಿಯಿಸಿ ”ಅದು ಕಾಂಗ್ರೆಸ್ ಆಂತರಿಕ ಸಮಸ್ಯೆ, ಆ ಬಗ್ಗೆ ನನಗೆ ಸಂಬಂಧ ಇಲ್ಲ. ನಾನು ಬಿಜೆಪಿ ನಿಷ್ಠಾವಂತ ಎಂಎಲ್‌ಎ, ಕಾರ್ಯಕರ್ತ” ಎಂದರು.

Advertisement

”ಕಾಂಗ್ರೆಸ್ ಕಚೇರಿ ನಿರ್ಮಾಣದಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ದೊಡ್ಡದಿತ್ತು ಎಂಬುದು ನಿಜ. ಇಂದು ಬೆಳಗಾವಿಯಲ್ಲಿ ಬಿಜೆಪಿ ಕಚೇರಿ ನಿರ್ಮಾಣ ಆಗಲು ಜಾಗ ಕೊಡಿಸಲು ನಾನು ಓಡಾಡಿದ್ದೇ‌ನೆ” ಎಂದರು.

ಕಾಂಗ್ರೆಸ್ ಕಚೇರಿ ಆಗಲು ಸತೀಶ್ ಜಾರಕಿಹೊಳಿ ಕೊಡುಗೆ ಏನು ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ”ಕಚೇರಿ ನಿರ್ಮಾಣಕ್ಕೆ ಸತೀಶ ಜಾರಕಿಹೊಳಿ ಕೊಡುಗೆ ಇದೆ. ಅರ್ಧ ಕಾಮಗಾರಿ ಆಗಿದ್ದ ಕಟ್ಟಡ ಪೂರ್ಣಗೊಳಿಸಿದ್ದಾರೆ. ಇಂದಿಗೂ ಕಚೇರಿ ನಿರ್ವಹಣೆಗೆ ಸತೀಶ ಜಾರಕಿಹೊಳಿ ದುಡ್ಡು ನೀಡುತ್ತಿದ್ದಾರೆ ಎಂದು ಕೇಳಿದ್ದೇನೆ” ಎಂದರು.

”ನಾನು ಜಿಲ್ಲಾ ಉಸ್ತುವಾರಿ ಸಚಿವನಿದ್ದಾಗ ಬೆಳಗಾವಿ ರಾಜಕಾರಣಕ್ಕೆ ಡಿ.ಕೆ.ಶಿವಕುಮಾರ್ ಎಂಟ್ರಿ ಆಗಲು ಅವಕಾಶ ಕೊಟ್ಟಿಲ್ಲ, ಅಲ್ಲೇ ಅವನ ಬ್ಲಾಕ್ ಮಾಡಿದ್ದೇನೆ. ನಾನು ಕಾಂಗ್ರೆಸ್ ಪಕ್ಷದಲ್ಲಿ ಶಾಸಕ, ಮಂತ್ರಿಯಾಗಿದ್ದಾಗಲೂ ಆತನನ್ನು ಇಲ್ಲಿ ಬರಲು ಬಿಟ್ಟಿರಲಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ಮಟ್ಟದಲ್ಲಿ ಅಂದು ಡಿಕೆಶಿ ಸಲಹೆ ಸ್ವೀಕಾರ ಮಾಡಿದ್ದೆ” ಎಂದರು.

”ಕಟ್ಟಡ ನಿರ್ಮಾಣ ಆಗುವಾಗ ಲಕ್ಷ್ಮೀ ಹೆಬ್ಬಾಳಕರ್ ಅಧ್ಯಕ್ಷರಿದ್ದರು.ಆ ವೇಳೆ ಏನು ಲೆಕ್ಕ ಪತ್ರ ಮಾಡಿದ್ದಾರೆ ದೇವರಿಗೆ ಗೊತ್ತು. ಈಗಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಕೇಳಿ, ಯಾರ್ಯಾರು ಗೋಲ್‌ಮಾಲ್ ಮಾಡಿದ್ದಾರೆ ಎಂದು ನನಗೆ ಹೇಳಿದ್ದಾರೆ. ನಾನು ಬಹಿರಂಗಪಡಿಸುವುದಿಲ್ಲ. ಆ ಹಣದಲ್ಲಿ ಯಾರೂ ಕಾರು ಖರೀದಿಸಿದ್ದಾರೆ ವಿನಯ್‌ನನ್ನು ಕೇಳಿ‌” ಎಂದು ಬಾಂಬ್ ಸಿಡಿಸಿದರು.

Advertisement

Udayavani is now on Telegram. Click here to join our channel and stay updated with the latest news.