Advertisement

ಬೆಳಗಾವಿ: ಉತ್ತರ ಕರ್ನಾಟಕದ ಲೇಖಕರನ್ನು ಗುರುತಿಸುತ್ತಿಲ್ಲ-ಡಾ. ಬಸವರಾಜ

06:02 PM Jul 03, 2023 | Team Udayavani |

ಬೆಳಗಾವಿ: ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಪ್ರತಿಭಾವಂತ ಬರಹಗಾರರಿದ್ದಾರೆ. ಅಭ್ಯಾಸಪೂರ್ಣ ಕೃತಿಗಳನ್ನು ರಚಿಸುತ್ತಿದ್ದಾರೆ. ಯಾವುದೇ ಪಿಎಚ್‌ಡಿ ಪ್ರಬಂಧಗಳಿಗೆ ಕಡಿಮೆ ಇಲ್ಲದ ಕೃತಿಗಳು ಹೊರಬರುತ್ತಿವೆ. ಆದರೆ ಉತ್ತರ ಕರ್ನಾಟಕದ ಇಂತಹ ಕೆಲಸಗಳನ್ನು ಗುರುತಿಸಿ, ಗೌರವಿಸದಿರುವುದು ಬೇಸರದ ವಿಷಯ ಎಂದು ಖ್ಯಾತ ವಿದ್ವಾಂಸ ಡಾ. ಬಸವರಾಜ ಜಗಜಂಪಿ
ವಿಷಾದಿಸಿದರು.

Advertisement

ಇಲ್ಲಿಯ ಅನಗೋಳದ ಆಶೀರ್ವಾದ ಮಂಗಲ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಲೇಖಕ ಶಿರೀಷ ಜೋಶಿ ಅವರು ರಚಿಸಿದ ಗುಜರಿ ತೋಡಿ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಅತ್ಯಂತ ಹೆಮ್ಮೆಯ ಬರಹಗಾರರಲ್ಲಿ ಶಿರೀಷ ಜೋಶಿ ಸಹ ಒಬ್ಬರು. ಅವರ ಈ ಗುಜರಿ ತೋಡಿ ಕಾದಂಬರಿ ಕೂಡ ಸಾಕಷ್ಟು ಮಹತ್ವದ ವಿವರಗಳನ್ನು ಒಳಗೊಂಡ ಕೃತಿಯಾಗಿದ್ದು ಲೇಖಕರು ವಿಶ್ವವಿದ್ಯಾಲಯದ ಅಕಾಡೆಮಿಯ ಗೌರವಕ್ಕೆ ಅರ್ಹರಾಗಿದ್ದಾರೆ ಎಂದರು.

ಕರ್ನಾಟಕದಲ್ಲಿ ಸಾಕಷ್ಟು ಅಕಾಡೆಮಿಗಳಿವೆ. ವಿಶ್ವವಿದ್ಯಾಲಯಗಳಿವೆ. ಉತ್ತಮ ಗುಣಮಟ್ಟದ ಮೌಲಿಕ ಬರಹಗಾರರಿದ್ದಾರೆ. ಸಂಶೋಧನಾತ್ಮಕ ಕೃತಿಗಳನ್ನು ರಚಿಸುತ್ತಿದ್ದಾರೆ. ಆದರೆ ಅಂಥವರನ್ನು ಗುರುತಿಸುವ ಕೆಲಸವಾಗುತ್ತಿಲ್ಲ. ಸಂಬಂಧಿಸಿದವರು ಇದರ ಕಡೆ ಗಮನಿಸಬೇಕಾದ ಅಗತ್ಯವಿದೆ ಎಂದು ಡಾ| ಬಸವರಾಜ ಜಗಜಂಪಿ ಹೇಳಿದರು.

ಕೃತಿಯ ಕುರಿತು ಡಾ| ಪಿ ಜಿ ಕೆಂಪಣ್ಣವರ ಮತ್ತು ಪ್ರೊ| ಜಿ ಆರ್‌ ಕುಲಕರ್ಣಿ ಮಾತನಾಡಿ, ಲೇಖಕ ಅತ್ಯಂತ ತಾಳ್ಮೆಯಿಂದ ಮತ್ತು ಶ್ರಮದಿಂದ ಈ ಕೃತಿ ರಚಿಸಿದ್ದು ಇದೊಂದು ಮೌಲಿಕ ಗ್ರಂಥವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಚಿಂಚಣಿಯ ಅಲ್ಲಮಪ್ರಭು ಸ್ವಾಮಿಜಿ ಅವರು ಮಾತನಾಡಿ, ಶಿರೀಷ ಜೋಶಿಯವರ ಪ್ರತಿಯೊಂದು ಕೃತಿಯೂ ಅಭ್ಯಾಸಪೂರ್ಣವಾಗಿರುತ್ತದೆ ಉದ್ದೇಶಕ್ಕೆ ಭಂಗವಾಗದಂತೆ ಅವರ ಬರವಣಿಗೆ ಇರುತ್ತದೆ. ಕೃತಿಗಳ ರಚನೆ ಅಷ್ಟೇ ಅಲ್ಲ ಅವರು ಚಲನಚಿತ್ರ ಕಥಾ ಸಂಭಾಷಣೆಗಳನ್ನು ಕೂಡ ತುಂಬಾ ಚೆನ್ನಾಗಿ ಬರೆಯುತ್ತಾರೆ. ಅವರ ಕೃತಿಗಳ ಕಥಾ ವಸ್ತು ವಿಶೇಷವಾಗಿದ್ದು ಅವರ ಬರವಣಿಗೆಯ ಶೈಲಿ ಕೂಡ ಓದುಗನಿಗೆ ಬೇಸರವಾಗದಂತಿರುತ್ತದೆ ಎಂದರು.

Advertisement

ಜೋಶಿ ಅವರ ಈ ಗುಜರಿ ತೋಡಿ ಕಾದಂಬರಿ ವಿಶ್ವವಿದ್ಯಾಲಯಕ್ಕೆ ಪಠ್ಯವಾಗಬೇಕು, ಬರಹಗಾರರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಅಭಿಯಂತರ ಅರುಣಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ| ರಾಮಕೃಷ್ಣ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಜಿಸ್ಟ್ರಾರ್‌ ಕೆ ನಾಗೇಂದ್ರ, ಡಾ| ಸರಜೂ ಕಾಟ್ಕರ್‌, ಪ್ರೊ| ಡಿ ಎಸ್‌ ಚೌಗಲೆ, ಶ್ರೀಧರ ಕುಲಕರ್ಣಿ, ಯ ರು ಪಾಟೀಲ, ರಂಗಕರ್ಮಿ ಝಕೀರ ನದಾಫ, ಕೆ ಟಿ ಜೋಶಿ, ರಮೇಶ ಜಂಗಲ್‌, ಮಂಜುಳಾ ಜೋಶಿ, ಬಂಡು ಕುಲಕರ್ಣಿ, ಡಾ ಅರವಿಂದ ಕುಲಕರ್ಣಿ, ಅನಂತ ಪಪ್ಪು, ಪ್ರಾ| ಬಿ ಎಸ್‌ ಗವಿಮಠ ಮುಂತಾದವರು ಉಪಸ್ಥಿತರಿದ್ದರು.

ಲೇಖಕ ಶಿರೀಷ ಜೋಶಿ ತಮ್ಮ ಸಾಹಿತ್ಯ, ರಂಗಭೂಮಿ ಮತ್ತು ಸೇವಾ ಅನುಭವಗಳನ್ನು ಹಂಚಿಕೊಂಡರು. ಬಸವರಾಜ ಗಾರ್ಗಿ ನಿರೂಪಿಸಿದರು. ಶ್ರದ್ಧಾ ಪಾಟೀಲ ಸ್ವಾಗತಿಸಿದರು. ನೀರಜಾ ಗಣಾಚಾರಿ ಪರಿಚಯ ಮಾಡಿದರು. ಶ್ರೀನಾಥ ಜೋಶಿ ವಂದಿಸಿದರು. ಇದೆ ಸಂದರ್ಭದಲ್ಲಿ ಚಿತ್ರಕಲಾವಿದರಾದ ಬಾಳು ಸದಲಗೆ ದಂಪತಿಗಳನ್ನು ಸತ್ಕರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next