Advertisement

ಬೆಳಗಾವಿ: ಹಬ್ಬದ ವೇಳೆ ಹದ್ದು ಮೀರಿದರೆ ಹುಷಾರ್‌-ಪೊಲೀಸ್‌ ಕಮಿಷನರ್‌ ಮಾರ್ಟಿನ್‌

04:54 PM Mar 23, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಹೋಳಿ ಹಾಗೂ ರಂಜಾನ್‌ ಹಬ್ಬ ಸಮೀಪಿಸಿದ್ದು, ಈ ಹಬ್ಬದ ನೆಪದಲ್ಲಿ ಯಾರಾದರೂ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ಜರುಗಿಸಲಾಗುವುದು. ಹದ್ದು ಮೀರಿ ಕಾನೂನು ಉಲ್ಲಂಘಿಸಿದರೆ ಪೊಲೀಸರು ಸುಮ್ಮನಿರುವುದಿಲ್ಲ ಎಂದು ಮಹಾನಗರ ಪೊಲೀಸ್‌ ಕಮಿಷನರ್‌ ಇಡಾ ಮಾರ್ಟಿನ್‌ ಎಚ್ಚರಿಕೆ ನೀಡಿದರು.

Advertisement

ನಗರದ ಹಳೆ ಪೊಲೀಸ್‌ ಕಮಿಷನರೇಟ್‌ ಸಭಾ ಭವನದಲ್ಲಿ ಹೋಳಿ ಹಾಗೂ ರಂಜಾನ್‌ ಹಬ್ಬದ ಶಾಂತಿ ಸಭೆಯಲ್ಲಿ ಅವರು
ಮಾತನಾಡಿದರು.

ಹೋಳಿ ಹಬ್ಬದಂದು ನಗರದ ವಿವಿಧ ಕಡೆಗಳಲ್ಲಿ ಬಣ್ಣದ ಓಕುಳಿ ಅದ್ಧೂರಿಯಾಗಿ ನಡೆಯುತ್ತದೆ. ಬೆಳಗಾವಿಯಲ್ಲಿ ಹೋಳಿ
ಹಾಗೂ ರಂಗ ಪಂಚಮಿ ಸಂಭ್ರಮದಿಂದ ಆಚರಿಸಲಾಗುತ್ತದೆ. ರವಿವಾರ ಹೋಳಿ ಹುಣ್ಣಿಮೆ, ಸೋಮವಾರ ಬಣ್ಣದ ಓಕುಳಿ
ಹಾಗೂ ಐದನೇ ದಿನದಂದು ರಂಗ ಪಂಚಮಿ ಇರುತ್ತದೆ. ಈ ವೇಳೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಯಾವ ಪ್ರದೇಶದಲ್ಲಿಯೂ ಗಲಾಟೆ ಆಗಬಾರದು ಎಂದು ಹೇಳಿದರು.

ಯಾವುದೇ ಗಲಾಟೆ ಆಗದಂತೆ ಪೊಲೀಸರು ನಿಗಾ ಇಡುತ್ತಾರೆ. ಆಯಾ ಯುವಕ ಮಂಡಳಿಗಳು ತಮ್ಮ ವ್ಯಾಪ್ತಿಯಲ್ಲಿ ಅಹಿತಕರ
ಘಟನೆ ಆಗದಂತೆ ಎಚ್ಚರಿಕೆ ವಹಿಸಬೇಕು. ಬಣ್ಣ ಆಡುವ ನೆಪದಲ್ಲಿ ಜಗಳ, ತಂಟೆ-ತಕರಾರು  ಮಾಡಬಾರದು. ವೈಯಕ್ತಿಕ ದ್ವೇಷ ಇಟ್ಟುಕೊಂಡು ಜಗಳ ಮಾಡಬಾರದು. ಮಹಿಳೆಯರು, ಯುವತಿಯರು, ಅಪರಿಚಿತರು, ವೃದ್ಧರ ಮೇಲೆ ಬಣ್ಣ ಹಾಕಿ ಸುಮ್ಮನೆ ಜಗಳಕ್ಕೆ ಕಾರಣವಾಗಬಾರದು. ಬಣ್ಣ ಹಚ್ಚುವಾಗ ಎಚ್ಚರಿಕೆಯಿಂದ ಇರಬೇಕು. ಶಾಂತಿ ಭಂಗ ಉಂಟು ಮಾಡುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಮುಸ್ಲಿಂ ಬಾಂಧವರು 10 ದಿನಗಳಿಂದ ರಂಜಾನ್‌ ಹಬ್ಬದ ಉಪವಾಸ ಆರಂಭಿಸಿದ್ದಾರೆ. ಉಪವಾಸ ಆರಂಭಿಸಲು ಬೆಳಗ್ಗೆ ಬೇಗ
ಏಳುತ್ತಾರೆ. ಜತೆಗೆ ತಡರಾತ್ರಿವರೆಗೂ ಜಾಗರಣೆ ಮಾಡುತ್ತಿದ್ದಾರೆ. ಹೀಗಾಗಿ ಪ್ರತಿ ರಸ್ತೆ, ಗಲ್ಲಿಗಳಲ್ಲಿ ಜನದಟ್ಟಣೆ ಹೆಚ್ಚಾಗಿ ಕಂಡು ಬರುತ್ತಿದೆ. ಈ ವೇಳೆ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಆಗದಂತೆ ಪೊಲೀಸರು ಹೆಚ್ಚಿನ ನಿಗಾ ಇಟ್ಟಿದ್ದಾರೆ. ಸಂಚಾರ ದಟ್ಟಣೆಗೂ ಯಾವುದೇ ತೊಂದರೆ ಆಗಬಾರದು ಎಂದು ಹೇಳಿದರು.

Advertisement

ನಗರದ ವಿವಿಧ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು ಸಲಹೆ-ಸೂಚನೆ ನೀಡಿದರು. ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರೋಹನ್‌ ಜಗದೀಶ, ಸಂಚಾರ ಮತ್ತು ಅಪರಾಧ ವಿಭಾಗ ಡಿಸಿಪಿ ಪಿ.ವಿ.ಸ್ನೇಹ, ಖಡೇಬಜಾರ ಎಸಿಪಿ ಶೇಖರಪ್ಪ, ಮಾರ್ಕೆಟ್‌ ಎಸಿಪಿ ಬಸವರಾಜ ಕಟ್ಟಿಮನಿ ಸೇರಿದಂತೆ ಇನ್ಸಪೆಕ್ಟರ್‌ಗಳು, ವಿವಿಧ ಮಂಡಳಿಗಳ ಪದಾ ಕಾರಿಗಳು, ಪಂಚ ಮಂಡಳಿಯವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next