ಹುಬ್ಬಳ್ಳಿ: ಬೆಳಗಾವಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿ ಸಿ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ನಗರಕ್ಕೆ ಗುರುವಾರ ಆಗಮಿಸಿ ಕೆಲವು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಳಗಾವಿಯಿಂದ ಕದ್ದಿದ್ದ 4.9 ಕೆಜಿ ಚಿನ್ನವನ್ನು ನಗರದಲ್ಲಿ ಮಾರಾಟ ಮಾಡಲಾಗಿದೆ ಎನ್ನುವ ಮಾಹಿತಿ ಆಧರಿಸಿ ಸಿಐಡಿ ಅಧಿಕಾರಿಗಳು ನಗರಕ್ಕೆ ಆಗಮಿಸಿ ಖರೀದಿದಾರನಿಂದ ಒಂದಿಷ್ಟು ಮಾಹಿತಿ ಪಡೆದರೆಂದು ತಿಳಿದುಬಂದಿದೆ.
ಪ್ರಕರಣ ಏನು?: ಮಂಗಳೂರು ಮೂಲದ ತಿಲಕ ಪೂಜಾರಿ ಎಂಬಾತ ತನ್ನ ಸ್ನೇಹಿತರ ಮೂಲಕ ಎರ್ಟಿಗಾ ಕಾರಿನಲ್ಲಿ ಮಹಾರಾಷ್ಟ್ರಕ್ಕೆ ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದ. ಆದರೆ ಜನವರಿ ತಿಂಗಳಲ್ಲಿ ಬೆಳಗಾವಿಯ ಯಮಕನಮರಡಿ ಪೊಲೀಸರು ಕಾರು ವಶಕ್ಕೆ ಪಡೆದಿದ್ದರು. ಪಕ್ಕಾ ಮಾಹಿತಿ ಮೇರೆಗೆ ಹುಬ್ಬಳ್ಳಿಯ ಕಿರಣ ವೀರನಗೌಡ ಎಂಬಾತ ಪೊಲೀಸರಿಗೆ ಮಾಹಿತಿ ನೀಡಿ ಕಾರು ಹಿಡಿಸಿದ್ದ. ಬಳಿಕ ಕಾರಿನಲ್ಲಿದ್ದ 4.9 ಕೆಜಿ ಚಿನ್ನವನ್ನು ಕದಿಯಲಾಗಿತ್ತು. ಏ. 16ರಂದು ಕೋರ್ಟ್‌ನಿಂದ ಕಾರು ರಿಲೀಸ್ ಆಗಿತ್ತು. ಆದರೆ ಕಾರಿನಲ್ಲಿದ್ದ ದೊಡ್ಡ ಪ್ರಮಾಣದ ಚಿನ್ನ ನಾಪತ್ತೆಯಾಗಿತ್ತು. ಹೀಗಾಗಿ ತಿಲಕ ಪೂಜಾರಿಯು ಐಜಿಪಿ ರಾಘವೇಂದ್ರ ಸಹಾಸ್ ಅವರಿಗೆ ದೂರು ಕೊಟ್ಟಿದ್ದ. ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು. ಪ್ರಕರಣದ ಬೆನ್ನು ಹತ್ತಿರುವ ಸಿಐಡಿ ಪೊಲೀಸರು ಮೇ 26ರಂದು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಬೆನ್ನಲ್ಲೆ ಕಳುವಾದ ಚಿನ್ನ ಹುಬ್ಬಳ್ಳಿಯಲ್ಲಿ ಮಾರಾಟವಾಗಿದೆ ಎನ್ನುವ ಮಾಹಿತಿ ಆಧರಿಸಿ ಗುರುವಾರ ನಗರಕ್ಕೆ ಆಗಮಿಸಿ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆನ್ನಲಾಗಿದೆ. ಪ್ರಕರಣದಲ್ಲಿ ಪ್ರಮುಖ ಆರೋಪ ಎದುರಿಸುತ್ತಿರುವ ಕಿರಣ ಮಧ್ಯವರ್ತಿಯಾಗಿ ಬಂಗಾರ ಮಾರಾಟ ಮಾಡಿಸಿದ್ದಾನೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಆತ ಹುಬ್ಬಳ್ಳಿಯ ವ್ಯಕ್ತಿಯೊಬ್ಬರಿಗೆ ಬಂಗಾರ ಮಾರಾಟ ಮಾಡಿ 1.10 ಕೋಟಿ ರೂ. ಪಡೆದಿದ್ದಾನೆ ಎನ್ನಲಾಗುತ್ತಿದೆ. ಹೀಗಾಗಿ ಸಿಐಡಿ ಅ ಧಿಕಾರಿಗಳು ಮಧ್ಯವರ್ತಿ ಹಾಗೂ ಚಿನ್ನ ಖರೀದಿ ಮಾಡಿದ ವ್ಯಕ್ತಿಯ ಬೆನ್ನು ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.