Advertisement

ಬೆಳಗಾವಿ: 2000 ನೋಟು ಬದಲಿಸಿ ವಂಚಿಸುವ ಗ್ಯಾಂಗ್‌ ಬಂಧನ

04:22 PM Jun 03, 2023 | Team Udayavani |

ಬೆಳಗಾವಿ: 2 ಸಾವಿರ ಮುಖ ಬೆಲೆಯ ನೋಟುಗಳನ್ನು ಬದಲಾಯಿಸಲು ಹೆಚ್ಚುವರಿ ಒಂದು ಲಕ್ಷ ರೂ. ನೀಡುವುದಾಗಿ ಆಮಿಷವೊಡ್ಡಿ ವಂಚಿಸಿದ ಪೊಲೀಸ್‌ ಪೇದೆ ಸೇರಿ ಮೂವರನ್ನು ಬಂಧಿಸುವಲ್ಲಿ ಕಾಗವಾಡ ಠಾಣೆ ಪೊಲೀಸರು
ಯಶಸ್ವಿಯಾಗಿದ್ದಾರೆ.

Advertisement

ಮಹಾರಾಷ್ಟ್ರದ ಮಿರಜ್‌ ನಗರ ಠಾಣೆ ಪೊಲೀಸ್‌ ಪೇದೆ ಸಾಗರ ಸದಾಶಿವ ಜಾಧವ(31), ಆರೀಫ ಆಜಿಜ್‌ ಸಾಗರ(34) ಹಾಗೂ ಲಿಂಗನೂರನ ಲಕ್ಷ್ಮಣ ನಾಯ್ಕ(36) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ 24 ಗಂಟೆಯಲ್ಲೇ
ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

ಘಟನೆ ಹಿನ್ನೆಲೆ ಏನು?: ಸಾಂಗಲಿ ಜಿಲ್ಲೆಯ ತಾಸಗಾಂವ ತಾಲೂಕಿನ ಸಾವರ್ಣಿ ಗ್ರಾಮದ ಸಮೀರ್‌ ಭಾನುದಾಸ ಬೋಸಲೆ (40) ಎಂಬವರು ಶ್ಯುರ್‌ಶಾಟ್‌ ಇವೆಂಟ್‌ ಮ್ಯಾನೇಜ್‌ಮೆಂಟ್‌ನಲ್ಲಿ ಸ್ಟ್ರಕ್ಚರ್‌ ಮ್ಯಾನೇಜರ್‌ ಆಗಿ ಐದು ವರ್ಷಗಳಿಂದ ಕೆಲಸ
ಮಾಡುತ್ತಿದ್ದಾರೆ. 14 ತಿಂಗಳಿಂದ ಇವರ ಬಳಿ ಅಕ್ಷಯ ಉಫ್ì ಆಕಾಶ ಆನಂದ ಮಂಡಲೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ.

ವಾರದ ಹಿಂದೆ ಸಮೀರ್‌ ಅವರ ಬಳಿ ಬಂದ ಆಕಾಶ, ತನಗೆ ಅಸ್ಲಂ ಎಂಬ ವ್ಯಕ್ತಿ ಪರಿಚಯವಾಗಿದ್ದು, ಅವನ ಹತ್ತಿರ
ರಾಜಕೀಯ ವ್ಯಕ್ತಿಗಳ 2000 ಮುಖಬೆಲೆಯ ನೋಟುಗಳಿವೆ. ತಮಗೆ ಯಾರಾದರೂ  500 ಮುಖಬೆಲೆಯ 5 ಲಕ್ಷ ರೂ. ಕೊಟ್ಟರೆ
ಅವರಿಗೆ 2000 ಮುಖ ಬೆಲೆಯ 6 ಲಕ್ಷ ರೂ. ನೀಡುವುದಾಗಿ ಹೇಳಿದ್ದಾನೆ.

ಈ ಬಗ್ಗೆ ಅಕ್ಷಯ ಮತ್ತು ಸಮೀರ್‌ ಸೇರಿ ತಮ್ಮ ಮಾಲೀಕರಾದ ತಾಸಗಾಂವನ ಸಂದೀಪ ಶ್ಯಾಮರಾವ ಗಿಡ್ಡೆ ಅವರಿಗೆ ತಿಳಿಸಿದಾಗ
500 ರೂ. ಮುಖಬೆಲೆಯ 5 ಲಕ್ಷ ರೂ. ನೀಡುತ್ತೇನೆ. 2 ಸಾವಿರ ರೂ. ಮುಖಬೆಲೆಯ 6 ಲಕ್ಷ ರೂ. ವಾಪಸ್‌ ತರುವಂತೆ ತಿಳಿಸಿದ್ದಾರೆ.
ಅದರಂತೆ ಮೇ 30ರಂದು ಅಸ್ಲಂ ಎಂಬಾತನಿಗೆ ಕರೆ ಮಾಡಿ 5 ಲಕ್ಷ ರೂ. ಕೊಡುವುದಾಗಿ ಒಪ್ಪುತ್ತಾರೆ. ನಂತರ ಆರೋಪಿ ಜಾಧವ
ಫೋನ್‌ ಮಾಡಿ 5 ಲಕ್ಷ ರೂ. ನೊಂದಿಗೆ ಮೇ 31ರಂದು ಕರ್ನಾಟಕದ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಶ್ರೀ ಮಲ್ಲಯ್ಯನ ಗುಡಿ ಹತ್ತಿರ ಬರುವಂತೆ ಸೂಚಿಸುತ್ತಾನೆ.

Advertisement

ಮಾಲೀಕರಾದ ಸಂದೀಪ ಶ್ಯಾಮರಾವ ಗಿಡ್ಡೆ ಅವರ ತಾಸಗಾಂವ ಯೂನಿಯನ್‌ ಬ್ಯಾಂಕ್‌ ಆಪ್‌ ಇಂಡಿಯಾ ಶಾಖೆಯಿಂದ ಚೆಕ್‌
ಮೂಲಕ 5 ಲಕ್ಷ ರೂ. ಹಣವನ್ನು ಸಮೀರ್‌ ಹಾಗೂ ಅಕ್ಷಯ ಡ್ರಾ ಮಾಡಿಕೊಂಡು ಕೊಲ್ಲಾಪುರದಿಂದ ನರಸಿಂಹವಾಡಿ
ಮಾರ್ಗವಾಗಿ ಬೈಕ್‌ ಮೇಲೆ ಮಂಗಸೂಳಿಗೆ ಮೇ 31ರಂದು ರಾತ್ರಿ 8 ಗಂಟೆ ಸುಮಾರಿಗೆ ಬಂದಿದ್ದಾರೆ. ನಂಬರ್‌ ಪ್ಲೇಟ್‌ ಇಲ್ಲದ ಕಾರಿನಲ್ಲಿ ಇಬ್ಬರಿಗೆ ಹಣ ಕೊಟ್ಟಿದ್ದಾರೆ. ಹಣ ಎಣಿಕೆ ಮಾಡುವಾಗ ಇಬ್ಬರು ಬುಲೆಟ್‌ ಬೈಕ್‌ ಮೇಲೆ ಬಂದು ಹಿಡಿಯಿರಿ ಎಂದು ಲಾಠಿ ಹಿಡಿದು ಹೆದರಿಸಿದ್ದಾರೆ. ಆಗ ಕಾರು ಚಾಲಕ ವಾಹನ  ಚಲಾಯಿಸಿದ್ದಾನೆ. ಬುಲೆಟ್‌ನಲ್ಲಿ ಇದ್ದವರೂ ಕಾರು ಬೆನ್ನತ್ತಿ ಹೋಗಿದ್ದಾರೆ. ಯಾರೂ ವಾಪಸ್‌ ಬಾರದಿರುವುದರಿಂದ ಮೋಸ ಆಗಿರುವುದು ಖಾತ್ರಿ ಆಗುತ್ತಿದ್ದಂತೆ ಕಾಗವಾಡ ಠಾಣೆಯಲ್ಲಿ
ಸಮೀರ್‌ ದೂರು ದಾಖಲಿಸಿದ್ದಾರೆ.

ಪ್ರಕರಣದ ಬೆನ್ನತ್ತಿದ ಕಾಗವಾಡ ಪೊಲೀಸರು ಮಹಾರಾಷ್ಟ್ರದ ಮಿರಜ್‌ ನಗರ ಠಾಣೆ ಪೊಲೀಸ್‌ ಪೇದೆ ಸಾಗರ ಜಾಧವ ಸೇರಿದಂತೆ ಮೂವರನ್ನು ಬಂಧಿಸಿದ್ದು, ಇನ್ನೊಬ್ಬ ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ. ಬಂಧಿತರಿಂದ ಒಂದು ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಕಾಗವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಮೂವರು ಆರೋಪಿಗಳು ಇಂಥ ಮೂರು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಜತೆಗೆ ಹಣ ಬದಲಾಯಿಸಿರುವ ಬಗ್ಗೆ 500 ಮುಖಬೆಲೆ ನೋಟುಗಳನ್ನು
ಜನರಿಗೆ ತೋರಿಸಲು ಬ್ಯಾಗ್‌ ತುಂಬಿಕೊಂಡು ಬಂದಿದ್ದರು. ಅದರಲ್ಲಿ 500 ಹಾಗೂ 100 ರೂ. ನೋಟುಗಳು, 127 ಬಂಡಲ್‌ ಮಕ್ಕಳ ಆಟಿಕೆಯ ನೋಟುಗಳಾಗಿವೆ. ಇದರಲ್ಲಿ 10 ನೋಟುಗಳು ಮಾತ್ರ ಅಸಲಿ ಆಗಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next