Advertisement

ಬೆಳಗಾವಿ:ರೈತರ ನಿರ್ಲಕ್ಷ್ಯ- ಸುಡು ಬಿಸಿಲಲ್ಲಿ ರೈತರು ಕೆಂಡಾಮಂಡಲ

03:02 PM Apr 03, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ರಾಜ್ಯದಲ್ಲಿ ಮಳೆ ಕೊರತೆಯಿಂದ ಬರ ಆವರಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರ ಪರಿಹಾರ ನೀಡದೇ ರೈತರನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಮಂಗಳವಾರ ಸುಡು ಬಿಸಿಲನ್ನೂ ಲೆಕ್ಕಿಸದೇ ಪ್ರತಿಭಟನೆ ನಡೆಸಿ ಕೆಂಡಾಮಂಡಲರಾದರು.

Advertisement

ನಗರದ ರಾಣಿ ಚನ್ನಮ್ಮ ವೃತ್ತದಿಂದ ಪ್ರತಿಭಟನಾ ರ್ಯಾಲಿ ಆರಂಭಿಸಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಆಗಮಿಸಿದರು. ಜಿಲ್ಲಾ ಧಿಕಾರಿ ಕಚೇರಿಯೊಳಗೆ ನುಗ್ಗಲು ಯತ್ನಿಸಿದ ರೈತರನ್ನು ಪೊಲೀಸರು ತಡೆಯಲು ಮುಂದಾದರು. ಆಗ ಪೊಲೀಸರೊಂದಿಗೆ
ವಾಗ್ವಾದ ನಡೆಯಿತು. ನೂಕಾಟ-ತಳ್ಳಾಟ ಆಯಿತು.

ಸುಡು ಬಿಸಿಲಿನಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿತು. ಬಿಸಿಲನ್ನೂ ಲೆಕ್ಕಿಸದೇ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಕೆಂಡಕಾರಿದರು. ಕೆಲ ರೈತರು ಪಕ್ಕದ ಕಂಪೌಂಡ್‌ ಹಾರಿ ಒಳಗೆ ಹೋದರು. ರೈತರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು. ಬ್ಯಾರಿಕೇಡ್‌ ನೂಕಿ ರೈತರು ಕಚೇರಿ ಆವರಣದೊಳಗೆ ನುಗ್ಗಿ ಅಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಬಂದು ಮನವಿ ಆಲಿಸಿದರೂ ರೈತರು ಸಮಾಧಾನಗೊಳ್ಳಲಿಲ್ಲ. ನಿಮ್ಮ ಭರವಸೆ ಒಪ್ಪಿ ನಾವು ಪ್ರತಿಭಟನೆ ಹಿಂಪಡೆಯುವುದಿಲ್ಲ. ಲಿಖೀತವಾಗಿ ಭರವಸೆ ಕೊಡಿ ಎಂದರು. ಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಹರಿಸುವವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದರು.ರಾಜ್ಯದಲ್ಲಿ ಬರಗಾಲದಿಂದ ರೈತರು ಸಂಕಷ್ಟಕ್ಕೆ
ಒಳಗಾಗಿದ್ದಾರೆ. ಬರ ನಿರ್ವಹಣೆಯಲ್ಲಿ ಎರಡೂ ಸರ್ಕಾರಗಳು ವಿಫಲವಾಗಿವೆ. ಬರ ಪರಿಹಾರ ಕೆಲ ರೈತರಿಗೆ ಭಿಕ್ಷೆ ರೂಪದಲ್ಲಿ 2 ಸಾವಿರ ರೂ. ಬಂದಿದೆ.

ಅದು ಹೊರತುಪಡಿಸಿದರೆ ಯಾವ ಪರಿಹಾರವೂ ಸಿಕ್ಕಿಲ್ಲ. ಈಗ ಜನಪ್ರತಿನಿಧಿ ಗಳು ಚುನಾವಣೆಯ ಹುರುಪಿನಲ್ಲಿ ಇದ್ದಾರೆ. ರೈತರನ್ನು ಕಡೆಗಣಿಸಿ ಚುನಾವಣೆ ನಡೆಸುತ್ತ ಮತ ಕೇಳಲು ಬರುತ್ತಿದ್ದಾರೆ. ರೈತರ ಬಗ್ಗೆ ಕಾಳಜಿ ಇಲ್ಲದ ಇಂತಹ ನಾಯಕರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಸಂಘದ ರಾಜ್ಯ ಅಧ್ಯಕ್ಷ ಚೂನಪ್ಪ ಪೂಜೇರಿ ಎಚ್ಚರಿಕೆ ನೀಡಿದರು. ಬರಗಾಲದಿಂದ ರಾಜ್ಯದ ಯಾವ ಭಾಗದಲ್ಲಿಯೂ ಬೆಳೆ ಬಂದಿಲ್ಲ. ಈಗ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಜನ-ಜಾನುವಾರುಗಳಿಗೆ ನೀರಿಲ್ಲ. ಮೇವಿನ ಕೊರತೆಯಿಂದ ಜಾನುವಾರುಗಳು ಪರದಾಡುತ್ತಿವೆ.

Advertisement

ಇಂಥದರಲ್ಲಿ ಸಾಲ ವಸೂಲಾತಿಗಾಗಿ ಬ್ಯಾಂಕಿನವರು, ಸಂಘ-ಸಂಸ್ಥೆಯವರ ಕಿರುಕುಳ ತಾಳದೇ ರೈತರು ಹೈರಾಣಾಗಿದ್ದಾರೆ. ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಸಾಲ ಮನ್ನಾ ಮಾಡಿ ರೈತರ ಬೆನ್ನಿಗೆ ನಿಲ್ಲಬೇಕು ಎಂದು ಆಗ್ರಹಿಸಿದರು.

ಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಹರಿಸಬೇಕು. ರಾಜ್ಯದ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕು. ಪ್ರತಿ ಕಚೇರಿಗಳಲ್ಲಿ ರೈತ ಸ್ನೇಹಿ ಹೆಲ್ಪ್ ಡೆಸ್ಕ್ ತೆರೆಯಬೇಕು. ಭೂಸುಧಾರಣೆಯಂಥ ರೈತ ವಿರೋಧಿ  ಕಾನೂನುಗಳನ್ನು ಹಿಂಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ರೈತ ಮುಖಂಡ ಪ್ರಕಾಶ ನಾಯಕ ಮಾತನಾಡಿ, ಸ್ವಾಮಿನಾಥನ್‌ ಆಯೋಗದ ವರದಿ ಜಾರಿಗೆ ತರುವುದಾಗಿ ಭರವಸೆ ನೀಡಿದ್ದ ಸರ್ಕಾರ ಮೋಸ ಮಾಡಿದೆ. ರೈತರ ಆದಾಯ ದ್ವಿಗುಣಗೊಂಡಿಲ್ಲ. ಭೀಕರ ಬರಗಾಲದಿಂದ ರಾಷ್ಟ್ರೀಯ ವಿಪತ್ತು ರೀತಿ ಪರಿಸ್ಥಿತಿ ಬಂದಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಾಂಗ ವ್ಯವಸ್ಥೆ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ರಾಷ್ಟ್ರಪತಿಗಳು ತಮ್ಮ ವಿಶೇಷ ಅಧಿಕಾರ ಬಳಸಿಕೊಂಡು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಬರಗಾಲ ಸ್ಥಿತಿ
ಸಮರ್ಪಕವಾಗಿ ನಿರ್ವಹಿಸುವಂತೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ಶಿವಾಪುರದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿ, ರೈತ ಮುಖಂಡರಾದ ಶಶಿಕಾಂತ ಪಡಸಲಗಿ, ಸುರೇಶ ಪರಗಣ್ಣವರ, ಕಿಶನ್‌ ನಂದಿ, ಪ್ರಕಾಶ ಪೂಜಾರಿ, ಸುರೇಶ ಮರಿಕಾಚೆ, ಸುರೇಶ ಸಂಪಗಾವಿ, ರಾಜು ಪೋವಾರ, ಮಲ್ಲಿಕಾರ್ಜುನ ವಾಲಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next