Advertisement
ಹಿಂದಿನ ಯಾವುದೇ ಸರ್ಕಾರಗಳು ಅತಿಥಿ ಉಪನ್ಯಾಸಕರ ನೋವು ಆಲಿಸಿಲ್ಲ. ಸೇವೆ ಕಾಯಂ ಮಾಡಿಕೊಳ್ಳಲು ಕಾನೂನು ತೊಡಕಿದೆ ಎನ್ನುವ ಮಾತು ಹೇಳಿಕೊಂಡೇ ಎಲ್ಲ ಸರ್ಕಾರಗಳೂ ದಿನಗಳನ್ನು ಮುಂದೂಡುತ್ತ ಬಂದಿವೆ. ಸರ್ಕಾರಿ ಕಾಲೇಜುಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಉಪನ್ಯಾಸಕರ ಜೀವನವೇ ಅತಂತ್ರವಾಗಿದೆ. ಸರ್ಕಾರವೂ ನೇಮಕಾತಿ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದೆ. ಇತ್ತ ಸಾವಿರಾರು ಉಪನ್ಯಾಸಕರ ವಯೋಮಿತಿಯೂ ಮುಗಿದು ಹೋಗಿದೆ. ಸರ್ಕಾರದ ಮೇಲೆ ನಂಬಿಕೆಯಿಡುತ್ತಲೇ ನಿರಂತರ ಹೋರಾಟ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಇಂದಿಗೂ ಸೇವಾ ಭದ್ರತೆಯ ಅಭದ್ರತೆ ಕಾಡುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸುವ ಕುರಿತು ಜೆಡಿಎಸ್ ಪ್ರಣಾಳಿಕೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರೇ ಭರವಸೆ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರ ರಚನೆಯಾಗಿ ಐದು ತಿಂಗಳು ಪೂರೈಸುತ್ತಾ ಬಂದರೂ ಸ್ಪಷ್ಟ ಸಂದೇಶ ಮುಖ್ಯಮಂತ್ರಿ ಅವರಿಂದ ಸಿಗುತ್ತಿಲ್ಲ. ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದುಕೊಳ್ಳಿ ಎಂದು ಉಪನ್ಯಾಸಕರು ಸಿಎಂ ಮುಂದೆ ಗೋಗರೆದಾಗ ಭರವಸೆಯ ಮಾತನ್ನಾಡಿದ್ದಾರೆ. ಆದರೆ, ಇಲಾಖೆಯ ಹಂತದಲ್ಲಿ ಯಾವುದೇ ಸಭೆಗಳು ನಡೆದಿಲ್ಲ. ನಾವು ಹೊರಗಡೆ ಕೂಲಿ ಮಾಡಿದರೆ ತಿಂಗಳಿಗೆ 15 ಸಾವಿರದಷ್ಟು ಹಣ ಸಿಗುತ್ತೆ. ಆದರೆ, ಉಪನ್ಯಾಸಕ ಸ್ಥಾನದ ಹುದ್ದೆ ಅದಕ್ಕಿಂತಲೂ ಕಡೆಯಾಗಿದೆ. ಹೆಸರಿಗಷ್ಟೇ ಗೌರವ, ಆದರೆ ಉಪಜೀವನ ನಡೆಸೋದು ಕಷ್ಟವಾಗಿದೆ ಎನ್ನುತ್ತಿದ್ದಾರೆ ಅತಿಥಿ ಉಪನ್ಯಾಸಕರು.
Related Articles
ರಾಜ್ಯ ಸರ್ಕಾರ ಯುಜಿಸಿ ನಿಯಮಾವಳಿಯನ್ನೂ ಪಾಲನೆ ಮಾಡುತ್ತಿಲ್ಲ. ಒಂದು ತರಗತಿಗೆ ಸಾವಿರ ರೂ.ವೇತನ ನೀಡಬೇಕು. ಕನಿಷ್ಟ ಒಂದು ತಿಂಗಳಿಗೆ ಅತಿಥಿ ಉಪನ್ಯಾಸಕನಿಗೆ 25 ಸಾವಿರ ರೂ. ವೇತನ ನೀಡಬೇಕೆಂದು ಯುಜಿಸಿ ನಿಯಮವೇ ಹೇಳುತ್ತಿದೆ. ಆದರೆ, ಸರ್ಕಾರ ಎಂಎ, ಎಂಫಿಲ್ ಪದವಿ ಪೂರೈಸಿದವರಿಗೆ 11,500 ರೂ.ಹಾಗೂ ಪಿಎಚ್‌ಡಿ, ನೆಟ್, ಸ್ಲೆಟ್ ಆದವರಿಗೆ 13 ಸಾವಿರ ರೂ.ನೀಡುತ್ತಿದೆ.
Advertisement
ನಾಲ್ಕು ತಿಂಗಳಿಂದ ವೇತನವಿಲ್ಲಅತಿಥಿ ಉಪನ್ಯಾಸಕರನ್ನು ಸರ್ಕಾರ ಸೇವೆಗೆ ತೆಗೆದುಕೊಂಡು ನಾಲ್ಕು ತಿಂಗಳು ಗತಿಸಿವೆ. ಕಳೆದ ನಾಲ್ಕು ತಿಂಗಳಿಂದ ವೇತನ ಪಾವತಿಸಿಲ್ಲ. ಪ್ರಾದೇಶಿಕ ಕಚೇರಿಗಳ ಹಂತದಲ್ಲಿ ಇನ್ನೂ ಅತಿಥಿ ಉಪನ್ಯಾಸಕರ ನೇಮಕಕ್ಕೆ ಅನುಮೋದನೆಯೇ ದೊರೆತಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ವೇತನವಿಲ್ಲದೇ ಉಪನ್ಯಾಸಕರು ಅವರಿವರ ಬಳಿ ಸಾಲ ಮಾಡಿ ಜೀವನ ನಡೆಸುವ ದು:ಸ್ಥಿತಿ ಬಂದೊದಗಿದೆ. ಇದಕ್ಕೆ ಬೇಸತ್ತು ಚಳಿಗಾಲದ ಅ ಧಿವೇಶನದ ವೇಳೆ ಬೆಳಗಾವಿ ಚಲೋ ನಡೆಸಿ ಮೈತ್ರಿ ಸರ್ಕಾರ ಎಚ್ಚರಿಸುವ ಕೆಲಸಕ್ಕೆ ಅಣಿಯಾಗುತ್ತಿದ್ದಾರೆ. ಹಲವು ವರ್ಷದಿಂದ ನಾವು ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ನಮಗೆ ಸೇವಾ ಭದ್ರತೆ ಕೊಡುತ್ತೇವೆ ಎಂದು ಮೂರೂ ಪಕ್ಷದವರು ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ. ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡಿದ್ದೇವೆ. ಸರ್ಕಾರ ಅಸ್ತಿತ್ವಕ್ಕೆ ಬಂದು 4 ತಿಂಗಳಾಗಿದ್ದರೂ ಭರವಸೆ ಈಡೇರುತ್ತಿಲ್ಲ. ಇದರಿಂದ ಬೇಸತ್ತು ಬೆಳಗಾವಿ ಚಲೋ ನಡೆಸಬೇಕೆಂದಿದ್ದೇವೆ.
– ಡಾ.ಎಚ್. ಸೋಮಶೇಖರ ಶಿವಮೊಗ್ಗಿ, ಅತಿಥಿ ಉಪನ್ಯಾಸಕರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ. – ದತ್ತು ಕಮ್ಮಾರ