Advertisement
ನಗರದ ಖಡಕಗಲ್ಲಿ ಹಾಗೂ ಖಂಜರಗಲ್ಲಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಲ್ಲು ತೂರಾಟ ನಡೆದಿದ್ದು, ಇದೇ ವಿಕೋಪಕ್ಕೆ ತಿರುಗಿ ನೂರಾರು ಯುವಕರ ಗುಂಪು ಪರಸ್ಪರ ಕಲ್ಲು ತೂರಾಟ ನಡೆಸಿದೆ. ಖಡಕಗಲ್ಲಿಯಲ್ಲಿ ಆರಂಭವಾದ ಗಲಭೆ ಬಡಕ ಗಲ್ಲಿ, ಖಂಜರಗಲ್ಲಿ, ಜಾಲಗಾರ ಗಲ್ಲಿ, ಚವಟಗಲ್ಲಿ, ದರ್ಬಾರ್ ಗಲ್ಲಿ, ಬಾಗವಾನ ಗಲ್ಲಿವರೆಗೂ ವ್ಯಾಪಿಸಿತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮಾರ್ಕೆಟ್ ಎಸಿಪಿ ಶಂಕರ ಮಾರಿಹಾಳ, ಇನ್ಸ್‌ಪೆಕ್ಟರ್ ಪ್ರಶಾಂತ್ ಕುಮಾರ್, ಪಿಎಸ್‌ಐ ಸೌದಾಗರ ಹಾಗೂ ಇನ್ನಿಬ್ಬರು ಪೇದೆಗಳ ತಲೆಗಳಿಗೆ ಕಲ್ಲೇಟು ಬಿದ್ದಿದೆ. ಜತೆಗೆ ಸುದ್ದಿ ಮಾಡಲು ತೆರಳಿದ್ದ ಛಾಯಾಚಿತ್ರಗ್ರಾಹಕರ ಮೇಲೂ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ.
ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದು ಬೆಂಕಿ ನಂದಿಸಿದ್ದಾರೆ. ಖಡಕಗಲ್ಲಿಯಲ್ಲಿ ಮಂಗಳವಾರ ಅಯಪ್ಪ ಸ್ವಾಮಿಯ ಮಹಾಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಪೂಜೆ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಖಡಕಗಲ್ಲಿ ಕಾರ್ನರ್ ಸಹಿತ ಇತರೆಡೆ ಬ್ಯಾನರ್ ಹಾಗೂ ಕಟೌಟ್ ಹಚ್ಚುವ ಕೆಲಸ ನಡೆದಿತ್ತು. ಯುವಕರು ಗುಂಪುಗೂಡಿ ಪೂಜಾ ಸಿದ್ಧತೆ ನಡೆಸುತ್ತಿರುವಾಗಲೇ ಬೇರೆ ಗಲ್ಲಿಗಳು ಕಲ್ಲು ಬಿದ್ದಿವೆ. ಇದರಿಂದ ಭಯಭೀತಗೊಂಡ ಯುವಕರ ಗುಂಪು ಅತ್ತಿತ್ತ ಓಡಾಟ ಶುರು ಮಾಡಿತು. ಅನಂತರ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಯುವಕರು ಭಾರೀ ಪ್ರಮಾಣದಲ್ಲಿ ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಖಂಜರಗಲ್ಲಿ ಸುತ್ತಮುತ್ತಲಿನ ಅವರಣದಲ್ಲಿ ಕಲ್ಲಿನ ರಾಶಿಗಳೇ ಬಿದ್ದಿವೆ. ಬಿಗಿ ಬಂದೋ ಬಸ್ತ್ ಕೈಗೊಳ್ಳಲಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.