ಬೆಳಗಾವಿ: ಸದಾ ಬರಗಾಲದ ಬೀಡು. ಕೃಷ್ಣಾ ನದಿ ಪಕ್ಕದಲ್ಲಿದ್ದರೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗಡಿಭಾಗದ ಅಥಣಿ ವಿಧಾನಸಭಾ ಕ್ಷೇತ್ರ ರಾಜಕೀಯವಾಗಿ ಈ ಹಿಂದೆ ಬಹಳ ಸದ್ದು ಮಾಡಿದ ಕ್ಷೇತ್ರವೇನಲ್ಲ. ಆದರೆ ಈಗ ಅನರ್ಹ ಶಾಸಕರು ಹಾಗೂ ಸೋತರೂ ಉಪಮುಖ್ಯಮಂತ್ರಿ ಸ್ಥಾನ ಪಡೆದುಕೊಂಡ ಕ್ಷೇತ್ರ ಎಂಬುದರಿಂದ “ವಿಶೇಷ ಸದ್ದು’ ಮಾಡುತ್ತಿದೆ.
Advertisement
ಕಾಂಗ್ರೆಸ್‌ನಿಂದ ಗೆದ್ದು ಬಂದು ನಂತರ ಅನರ್ಹಗೊಂಡ ಮಹೇಶ ಕುಮಟಳ್ಳಿ ಒಂದು ರೀತಿಯಲ್ಲಿ ಸುದ್ದಿ ಮಾಡಿದರೆ, ಇವರ ವಿರುದ್ಧ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿ ಬಿಜೆಪಿ ಸರ್ಕಾರದಲ್ಲಿ ಅನಿರೀಕ್ಷಿತ ಎಂಬಂತೆ ಸಚಿವ ಸ್ಥಾನ ಪಡೆದಿದ್ದಲ್ಲದೆ ಕೊನೆಗೆ ಉಪಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದರು.
Related Articles
Advertisement
ಪರಿಣಾಮ ಗೋಕಾಕ ಜೊತೆ ಅಥಣಿಗೂ ಉಪಚುನಾವಣೆ ಬಂದಿತು. ಮತದಾರರೂ ಸಹ ಅನಿವಾರ್ಯವಾಗಿ ಚುನಾವಣೆ ಎದುರಿಸಬೇಕಾಯಿತು. ಕಾಂಗ್ರೆಸ್ ಭದ್ರಕೋಟೆ: 1962ರಿಂದ 1983ರವರೆಗೆ ಅಥಣಿ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. 1957ರಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಶಾಸಕರಾಗಿದ್ದ ಡಿ.ಬಿ.ಪವಾರ 1962ರಿಂದ 1983ರವರೆಗೆ ಐದು ಬಾರಿ ಶಾಸಕರಾಗಿ ಅಧಿಪತ್ಯ ನಡೆಸಿದ್ದರು. ಇದರ ಮಧ್ಯೆ 1972ರಲ್ಲಿ ಎ.ಎ. ದೇಸಾಯಿ ಕಾಂಗ್ರೆಸ್‌ದಿಂದ ಆಯ್ಕೆಯಾಗಿದ್ದರು. 1985ರಲ್ಲಿ ಕಾಂಗ್ರೆಸ್ ಆಳ್ವಿಕೆಗೆ ಕೊನೆಬಿತ್ತು. ಆಗ ಜನತಾ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಲೀಲಾದೇವಿ ಪ್ರಸಾದ ಮೊದಲ ಬಾರಿಗೆ ವಿಧಾನಸಭೆ ಮೆಟ್ಟಿಲು ಹತ್ತಿ ಕಾಂಗ್ರೆಸ್ ಭದ್ರಕೋಟೆಯನ್ನು ತಮ್ಮ ವಶ ಮಾಡಿಕೊಂಡರು.
ಆದರೆ, 1989ರ ಚುನಾವಣೆಯಲ್ಲಿ ಇದು ಪುನರಾವರ್ತನೆಯಾಗಲಿಲ್ಲ. ಐ.ಎಂ. ಶೆಡಶ್ಯಾಳ ಮೂಲಕ ಕಾಂಗ್ರೆಸ್ ಮತ್ತೆ ಈ ಕ್ಷೇತ್ರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು. 1994ರ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧೆ ಮಾಡಿದ್ದ ಲೀಲಾದೇವಿ ಪ್ರಸಾದ ಪಕ್ಷದ ಅಲೆಯಲ್ಲಿ ಎರಡನೇ ಬಾರಿಗೆ ಶಾಸಕರಾಗುವ ಅವಕಾಶ ಪಡೆದರು. 1999ರ ಚುನಾವಣೆಯಲ್ಲಿ ಕಾಂಗ್ರೆಸ್ ಹಿಂದಿನ ಚುನಾವಣೆಯ ಸೋಲು ತೀರಿಸಿಕೊಂಡು ಕ್ಷೇತ್ರದ ಮೇಲೆ ಹಿಡಿತ ಸಾಧಿಸಿತು.
ಬಿಜೆಪಿ ತೆಕ್ಕೆಗೆ ಬಂದಿದ್ದು ಯಾವಾಗ?: 1985ರಿಂದ ಕಾಂಗ್ರೆಸ್ ಹಾಗೂ ಜನತಾದಳದ ಮಧ್ಯೆ ಓಡಾಡುತ್ತಿದ್ದ ಅಥಣಿ ಕ್ಷೇತ್ರ 2004ರಲ್ಲಿ ಮೊದಲ ಬಾರಿಗೆ ಬಿಜೆಪಿ ಮನೆ ಸೇರಿತು. ಲಕ್ಷ್ಮಣ ಸವದಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ಬಿಜೆಪಿ ಇಲ್ಲಿ ತನ್ನ ಖಾತೆ ತೆರೆಯಿತು. ಇದರ ಜೊತೆಗೆ ಲಕ್ಷ್ಮಣ ಸವದಿ 1999ರಲ್ಲಿ ಶಹಜಹಾನ್ ಡೊಂಗರಗಾವ್ ವಿರುದ್ಧ ಸೋತಿದ್ದ ಸೇಡು ತೀರಿಸಿಕೊಂಡರು.
2004ರಲ್ಲಿ ಬಿಜೆಪಿ ತೆಕ್ಕೆಗೆ ಬಂದ ಅಥಣಿ ಕ್ಷೇತ್ರ ಸತತ ಮೂರು ಚುನಾವಣೆಗಳಲ್ಲಿ ಜಯಬೇರಿ ಬಾರಿಸಿ ಕ್ಷೇತ್ರದ ಮೇಲೆ ಬಿಗಿ ಹಿಡಿತ ಸಾಧಿಸಿತ್ತು. ಈ ನಡುವೆ ಸವದಿ ಸಚಿವರಾಗಿ ಸಹ ಕಾರ್ಯನಿರ್ವಹಿಸಿದರು. ತಮಗೆ ಎದುರಾಳಿಗಳು ಇಲ್ಲದಂತೆ ಬೆಳೆದರು. ಆದರೆ 2018ರ ಚುನಾವಣೆಯಲ್ಲಿ ಬಿಜೆಪಿ ಲೆಕ್ಕಾಚಾರಗಳೆಲ್ಲ ವಿಫಲವಾದವು.
ಕಾಂಗ್ರೆಸ್‌ದಿಂದ ಸ್ಪರ್ಧೆ ಮಾಡಿದ್ದ ಮಹೇಶ ಕುಮಟಳ್ಳಿ ಪರ ರಮೇಶ ಜಾರಕಿಹೊಳಿ ಸಂಪೂರ್ಣವಾಗಿ ಬೆಂಬಲಕ್ಕೆ ನಿಂತರು. ಒಂದರ್ಥದಲ್ಲಿ ಇದು ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿ ನಡುವಿನ ಚುನಾವಣೆ ಎಂಬ ಮಾತುಗಳು ಸಹ ಕೇಳಿಬಂದವು. ಜಾತಿ ಬಲ ಹಾಗೂ ರಮೇಶ ಬೆಂಬಲದಿಂದ ಮಹೇಶ ಕುಮಟಳ್ಳಿ ಜಯಗಳಿಸಿ 2013ರ ಚುನಾವಣೆಯ ಸೋಲಿನ ಸೇಡು ತೀರಿಸಿಕೊಂಡರು. ಆದರೆ 2018ರ ಚುನಾವಣೆ ಮುಂದೆ ಸಾಕಷ್ಟು ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ತಮ್ಮ ಮಾತಿಗೆ ಬೆಲೆ ಇಲ್ಲ. ತಮ್ಮ ಕೆಲಸ ಆಗುತ್ತಿಲ್ಲ ಎಂದು ಅಸಮಾಧಾನಗೊಂಡ ರಮೇಶ ಜಾರಕಿಹೊಳಿ ತಮ್ಮ ಜೊತೆಗೆ ಬೆಂಬಲಿತ ಶಾಸಕರನ್ನು ಸಹ ಪಕ್ಷದಿಂದ ಹೊರಗೆ ಕರೆದುಕೊಂಡು ಬಂದರು. ಒಂದು ಕಡೆ ಸರ್ಕಾರ ಪತನವಾದರೆ ಈ ಕಡೆ ಅಸಮಾಧಾನಗೊಂಡ ಶಾಸಕರು ಅನರ್ಹಗೊಂಡರು. ಪರಿಣಾಮ ಉಪಚುನಾವಣೆ ಅನಿವಾರ್ಯವಾಯಿತು.