Advertisement

ಕೈಮಗ್ಗ ಬಟ್ಟೆಗಳಿಗೆ ಮನಸೋತ ಬೆಳಗಾವಿ ವಿಮಾನ ನಿಲ್ದಾಣ ನಿರ್ದೇಶಕ ರಾಜೇಶ ಕುಮಾರ ಮೌರ್ಯ

07:26 PM Jan 22, 2022 | Team Udayavani |

ಮಹಾಲಿಂಗಪುರ: ಆಧುನೀಕರಣ ಜಾಗತೀಕರಣ ಮತ್ತು ಬದಲಾದ ಜೀವನ ಶೈಲಿಯಿಂದಾಗಿ ವರ್ಷದಿಂದ ವರ್ಷಕ್ಕೆ ಪಾರಂಪರಿಕ, ದೇಶಿಯ ಕೈಮಗ್ಗ ನೇಕಾರಿಕೆಯು ಅಳಿವಿನಂಚಿಗೆ ಜಾರುತ್ತಿದೆ. ಕೈಮಗ್ಗ ನೇಕಾರರು ಸಂಕಷ್ಟದ ಸುಳಿಗೆ ಸಿಲುಕಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕರಾದ ರಾಜೇಶಕುಮಾರ ಮೌರ್ಯ ಅವರು ಮಹಾಲಿಂಗಪುರ ಪಟ್ಟಣದ ಹಿರಿಯ ಕೈಮಗ್ಗ ನೇಕಾರರು ತಯಾರಿಸುವ ಕೈಮಗ್ಗ ಬಟ್ಟೆಗಳಿಗೆ ಮನಸೋತು, ಕೈಮಗ್ಗ ನೇಕಾರಿಕೆಗೆ ಉತ್ತೇಜನ ಹಾಗೂ ಹಿರಿಯ ಕೈಮಗ್ಗ ನೇಕಾರರಿಗೆ ಸನ್ಮಾನಿಸುವ ಮೂಲಕ ಕೈಮಗ್ಗ ನೇಕಾರಿಕೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಕೆಲಸವನ್ನು ಮಾಡುತ್ತಿದ್ದಾರೆ.

Advertisement

ವಿಮಾನ ನಿಲ್ದಾಣದಲ್ಲಿ ಕೈಮಗ್ಗ ಪ್ರದರ್ಶನ : ಮೂಲತಃ ವಾರಣಾಸಿಯವರಾದ ರಾಜೇಶಕುಮಾರ ಮೌರ್ಯ ಅವರು ನಮ್ಮ ದೇಶದ ಸಂಸ್ಕೃತಿ, ಪರಂಪರೆ, ಕಲೆ, ಸಾಹಿತ್ಯ, ಕಲಾವಿದರ ಕುರಿತು ವಿಶೇಷ ಆಸಕ್ತಿ, ಕಾಳಜಿ  ಮತ್ತು ಕೂತೂಹಲವನ್ನು ಹೊಂದಿದವರಾಗಿದ್ದು, ದೇಶಿಯ ಕೈಮಗ್ಗ ಬಟ್ಟೆಗಳು ಎಂದರೆ ಇವರಿಗೆ ಪಂಚಪ್ರಾಣ. ಸಾಮಾಜಿಕ ಜಾಲತಾಣಗಳ ಮೂಲಕ ಮಹಾಲಿಂಗಪುರದ ಕೈಮಗ್ಗ ನೇಕಾರರು ಮತ್ತು ಕೈಮಗ್ಗ ಬಟ್ಟೆಗಳನ್ನು ನೋಡಿ ಆಕರ್ಷಿತರಾದ ಇವರು ಕೆಲವು ತಿಂಗಳ ಹಿಂದೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಮಹಾಲಿಂಗಪುರದ ಹಿರಿಯ ಕೈಮಗ್ಗ ನೇಕಾರರನ್ನು ಕರೆಸಿಕೊಂಡು, ಅವವರಿಗೆ ಸನ್ಮಾನಿಸಿ ಗೌರವಿಸಿದ್ದರು. ನಂತರ ಬೆಳಗಾವಿ ವಿಮಾನ ನಿಲ್ದಾಣದಲ್ಲಿಯೇ ಒಂದು ವಾರಗಳ ಕಾಲ ಕೈಮಗ್ಗನ್ನು ಕೂಡಿಸಿ, ಇಲ್ಲಿನ ನೇಕಾರರನ್ನು ಅಲ್ಲಿಯೇ ಕೈಮಗ್ಗ ನೇಯಲು ಹೇಳಿ ಕೈಮಗ್ಗ ಬಟ್ಟೆಗಳು ಮತ್ತು ನೇಕಾರಿಕೆಗೆ ಪ್ರೋತ್ಸಾಹ ನೀಡಿ ರಾಷ್ಟ್ರ ಮಟ್ಟದಲ್ಲಿ ಕೈಮಗ್ಗ ನೇಕಾರಿಕೆಯ ಕಲಕುಶಲತೆ ಮತ್ತು ಕೈಮಗ್ಗ ನೇಕಾರರ ಶ್ರಮವನ್ನು ಪರಿಚಯಿಸುವ ಕೆಲಸವನ್ನು ಮಾಡಿದ್ದಾರೆ.

ಗಣ್ಯರ ಭೇಟಿ ಮೆಚ್ಚುಗೆ : ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಜರುಗಿದ ಕೈಮಗ್ಗ ಪ್ರದರ್ಶನ ವೇಳೆ ಗೋವಾದ ರಾಜ್ಯಪಾಲರಾದ ಶ್ರೀಧರನ್ ಪಿಳ್ಳೈ, ಕರ್ನಾಟಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಉಜ್ಜೆನಿಯ ಪೂಜ್ಯ ಉಮೇಶನಾಥ ಮಹಾಸ್ವಾಮಿಜಿ ಸೇರಿದಂತೆ ಹಲವಾರು ಗಣ್ಯರು ಕೈಮಗ್ಗ ಪ್ರದರ್ಶನವನ್ನು ವೀಕ್ಷಿಸಿ-ಕೈಮಗ್ಗ ನೇಕಾರಿಕೆಯ ಕಾಯಕಕ್ಕೆ ಮೆಚ್ಚುಗೆವ್ಯಕ್ತಪಡಿಸಿದ್ದರು.

ನೇಕಾರ ಮನೆಗಳಿಗೆ ಭೇಟಿ : ನೇಕಾರ ಕರಕುಶಲತೆ ಮತ್ತು ಕೈಮಗ್ಗ ಬಟ್ಟೆಗಳಿಗೆ ಮನಸೋತ ವಿಮಾನ ನಿಲ್ದಾಣದ ನಿರ್ದೇಶಕರಾದ ರಾಜೇಶಕುಮಾರ ಮೌರ್ಯ ಅವರು ಶನಿವಾರ ಪಟ್ಟಣದ ಹಿರಿಯ ಕೈಮಗ್ಗ ನೇಕಾರರಾದ ಶಿವಶಂಕರ ಮೂಡಲಗಿ, ಮಲ್ಲಪ್ಪ ನಡಕಟ್ನಿ ಅವರ ಮನೆಗಳಿಗೆ ಭೇಟಿ ನೀಡಿ, ಕೈಮಗ್ಗ ನೇಕಾರಿಕೆಯ ನೂಲು(ಖಂಡಕಿ) ಸುತ್ತುವದು, ಸಂದರಕಿ ಹಾಕುವದು, ಹಾಸು ಹೊಯ್ಯುವದು, ವಾಡರ್ ಹಾಕುವದು, ಟಾವಲ್ ನೇಯ್ಗೆ ಮಾಡುವದನ್ನು ಅತ್ಯಂತ ಕುತೂಹಲದಿಂದ ವೀಕ್ಷಿಸಿ ಕೈಮಗ್ಗ ನೇಕಾರಿಕೆಯ ಕಾಯಕದ ಪ್ರತಿಯೊಂದು ಮಾಹಿತಿಯನ್ನು ಪಡೆದುಕೊಂಡರು. ಸ್ವತಃ ತಾವುಗಳು ಸಹ ಕುಳಿತು ಖಂಡಕಿ ಸುತ್ತಿ ಖುಷಿಪಟ್ಟರು. ಮಹಾಲಿಂಗಪ್ಪ ಸೋರಗಾಂವಿ ಅವರ ಮನೆಗೆ ಭೇಟಿ ನೀಡಿ, ಕುಣಿ ಕೈಮಗ್ಗವನ್ನು ವೀಕ್ಷಿಸಿ ಅದರ ಮಾಹಿತಿಯನ್ನು ಪಡೆದುಕೊಂಡರು.

Advertisement

ಹಿರಿಯ ನೇಕಾರರಿಗೆ ಸನ್ಮಾನ : ಸುಮಾರು 40ಕ್ಕೂ ಅಧಿಕ ಕೈಮಗ್ಗ ನೇಕಾರರಿಗೆ ಉದ್ಯೋಗ ನೀಡಿ, ಕೈಮಗ್ಗದ ಉಳಿಗಾಗಿ ಶ್ರಮಿಸುತ್ತಿರುವ ಪಟ್ಟಣದ ಶಿವಶಂಕರ ಮೂಡಲಗಿ ಹಾಗೂ ತಮ್ಮ 78ನೇ ವಯಸ್ಸಿನಲ್ಲಿಯೂ ಕೈಮಗ್ಗ ನೇಕಾರಿಕೆಯ ಕಾಯಕದಲ್ಲಿ ತೊಡಗಿಸಿಕೊಂಡಿರುವ ಮಲ್ಲಪ್ಪ ನಡಕಟ್ನಿ ಅವರ ಮನೆಗಳಿಗೆ ಭೇಟಿ ನೀಡಿ, ಕೈಮಗ್ಗ ನೇಕಾರಿಕೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡ ಬೆಳಗಾವಿ ಸಾಂಬ್ರಾ ಅಂತರಾಷ್ಟೀಯ ವಿಮಾನ ನಿಲ್ದಾಣದ ನಿರ್ದೇಶಕರಾದ ರಾಜೇಶಕುಮಾರ ಮೌರ್ಯ ಅವರು ಇಬ್ಬರೂ ಹಿರಿಯ ನೇಕಾರರಿಗೆ ಸನ್ಮಾನಿಸಿ-ಗೌರವಿಸಿದರು.

ಕೈಮಗ್ಗ ನೇಕಾರಿಕೆ ಉಳಿಸಿ-ಬೆಳೆಸಿ : ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕರಾದ ರಾಜೇಶಕುಮಾರ ಮೌರ್ಯ ಅವರು ಕೈಮಗ್ಗಗಳನ್ನು ವೀಕ್ಷಿಸಿ – ಹಿರಿಯ ನೇಕಾರರಿಗೆ ಸನ್ಮಾನಿಸಿ ಮಾತನಾಡಿ, ಕೈಮಗ್ಗ ನೇಕಾರಿಕೆಯು ಒಂದು ಕಾಯಕದ ಜೊತೆಗೆ ಅದೊಂದು ಅದ್ಭುತ ಕಲೆಯಾಗಿದೆ. ನೂಲಿನ ಎಳೆ ಎಳೆಗಳನ್ನು ಜೋಡಿಸಿ ಬಟ್ಟೆಗಳನ್ನು ತಯಾರಿಸುವ ಕೈಮಗ್ಗ ನೇಕಾರರ ಕಲೆ, ಸಂಯಮ, ಶೃದ್ದೆ ಮತ್ತು ಕಾಯಕ ನಿಷ್ಠೆಯು ಅಗಾಧವಾಗಿದೆ. ಇಂತಹ ಕೈಮಗ್ಗ ನೇಕಾರಿಕೆಯು ಉಳಿದು ಬೆಳೆಯಲು ಮತ್ತು ಹಿರಿಯ ಕೈಮಗ್ಗ ನೇಕಾರರ ಬದುಕು ಸುಗಮವಾಗಿ ಸಾಗಲು ಎಲ್ಲರೂ ಹೆಚ್ಚು ಹೆಚ್ಚು ಖಾದಿಬಟ್ಟೆಗಳನ್ನು ಖರೀದಿಸಿ, ತೊಡುವ ಮೂಲಕ ಕೈಮಗ್ಗ ನೇಕಾರಿಕೆ ಮತ್ತು ನೇಕಾರರನ್ನು ಉಳಿಸಿ-ಬೆಳೆಸಲು ಪ್ರಯತ್ನಿಸಬೇಕು. 78ರ ಇಳಿವಯಸ್ಸಿನಲ್ಲಿಯೂ ನೇಕಾರಿಕೆ ಕಾಯಕ ಮಾಡುತ್ತಿರುವ ಮಲ್ಲಪ್ಪ ನಡಕಟ್ನಿಯವರಂತಹ ಹಿರಿಯ ಜೀವಿಗಳು ಇಂದಿನ ನಿರುದ್ಯೋಗಿ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಅಭಿಮಾನವ್ಯಕ್ತಪಡಿಸಿದರು.

ಮೌರ್ಯರವರ ಪ್ರೋತ್ಸಾಹ ಎಂದಿಗೂ ಮರೆಯಲ್ಲ: ಕೈಮಗ್ಗ ನೇಕಾರಿಕೆ ಮತ್ತು ನೇಕಾರ ಕುರಿತಾಗಿ ಅತ್ಯಂತ ಪ್ರೀತಿ, ಅಭಿಮಾನವನ್ನು ಹೊಂದಿರುವ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕರಾದ ರಾಜೇಶಕುಮಾರ ಮೌರ್ಯ ಅವರ ಸರಳತೆ ಮತ್ತು ನಮಗೆ ಅವರು ನೀಡಿದ ಪ್ರೋತ್ಸಾಹವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಉನ್ನತ ಹುದ್ದೆಯಲ್ಲಿರುವ ಅವರು ಬೆಳಗಾವಿಯಿಂದ ನಮ್ಮ ಮನೆಗಳಿಗೆ ಭೇಟಿ ನೀಡಿ, ನಮ್ಮ ಕೈಮಗ್ಗ ಕಾಯಕ ಮತ್ತು ನೇಕಾರಿಕೆ ಪೂರ್ವ ಚಟುವಟಿಕೆಗಳನ್ನು ವೀಕ್ಷಿಸಿದ್ದು ಖುಷಿಯ ಸಂಗತಿಯಾಗಿದೆ ಎನ್ನುತ್ತಾರೆ ದಾನೇಶ್ವರಿ ಕೈಮಗ್ಗ ಬಟ್ಟೆ ಉತ್ಪಾದನಾ ಘಟಕದ ಮಾಲೀಕರಾದ ಶಿವಶಂಕರ ಮೂಡಲಗಿ.

ಕೈಮಗ್ಗ ನೇಕಾರ ಮನೆಗಳಿಗೆ ಭೇಟಿಯ ನಂತರ ಪಟ್ಟಣದ ಐತಿಹಾಸಿಕ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ ಮಠದ ಪೀಠಾಧಿಪತಿ ಶಿವಯೋಗಿ ರಾಜೇಂದ್ರಸ್ವಾಮಿಜಿ ಅವರು ಹಿರಿಯ ಕೈಮಗ್ಗ ನೇಕಾರ ಮಲ್ಲಪ್ಪ ನಡಕಟ್ನಿ ಅವರನ್ನು ಸನ್ಮಾನಿಸಿ-ಗೌರವಿಸಿದರು. ಈ ಸಂದರ್ಭದಲ್ಲಿ ಗೋವಿಂದ ಕೆಳಕರ, ಸಂಜು ಹಳ್ಳಿ, ಮಹಾಂತೇಶ ಮೂಡಲಗಿ, ಸೋಮಶೇಖರ ಮೂಡಲಗಿ, ಈಶ್ವರ ಮಠದ ಸೇರಿದಂತೆ ಹಲವರು ಇದ್ದರು.

ಬಡವರ ಮನೆಗೆ ಬಂದ ಭಾಗ್ಯ: ನಮ್ಮ ಕೈಮಗ್ಗ ನೇಕಾರಿಕೆ ಮತ್ತು ನಮ್ಮ ನೇಯ್ಗೆ ಬಟ್ಟೆಗಳನ್ನು ಮೆಚ್ಚಿಕೊಂಡು ಬೆಳಗಾವಿ ವಿಮಾನಕ್ಕೆ ನಮ್ಮನ್ನು ಕರೆಸಿಕೊಂಡು ಸನ್ಮಾನಿಸಿ-ಒಂದು ವಾರದವರೆಗೆ ವಿಮಾನ ನಿಲ್ದಾಣದಲ್ಲಿ ಕೈಮಗ್ಗವನ್ನು ಸ್ಥಾಪಿಸಿ, ಪ್ರಯಾಣಿಕರ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕೈಮಗ್ಗ ನೇಕಾರಿಕೆ ಹಾಗೂ ಕೈಮಗ್ಗ ಬಟ್ಟೆಗಳನ್ನು ಪರಿಚಯಿಸಿದ್ದರು. ದೊಡ್ಡಹುದ್ದೆಯಲ್ಲಿರುವ ರಾಜೇಶಕುಮಾರ ಮೌರ್ಯ ಸರ್ ಅವರು ಈಗ ನಮ್ಮ ಮನೆಗೆ ಬಂದು, ನಮ್ಮ ಕೈಮಗ್ಗ ಕಾಯಕ ವೀಕ್ಷಿಸಿ ನಮಗೆ ಸನ್ಮಾನಿಸಿ, ಪ್ರೋತ್ಸಾಹಿಸಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂತಹ ಹಿರಿಯ ಅಧಿಕಾರಿಗಳು ನಮ್ಮಂಥ ಬಡವರ ಮನೆಗೆ ಬಂದು ನಮ್ಮ ಆದರಾತೀಥ್ಯ ಸ್ವೀಕರಿಸಿದ್ದು ನಮ್ಮ ಭಾಗ್ಯ.-ಮಲ್ಲಪ್ಪ ಮ. ನಡಕಟ್ನಿ. ಹಿರಿಯ ಕೈಮಗ್ಗ ನೇಕಾರ.ಮಹಾಲಿಂಗಪುರ.

Advertisement

Udayavani is now on Telegram. Click here to join our channel and stay updated with the latest news.

Next